ಬಳ್ಳಾರಿ ರೈತರ ಜಮೀನು ವಾಪಸ್ ಕೊಡಲಿ

KannadaprabhaNewsNetwork | Published : Oct 18, 2023 1:00 AM

ಸಾರಾಂಶ

ಬಳ್ಳಾರಿಯ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳು ಭೂ ಸಂತ್ರಸ್ತರ ಜತೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಬಳ್ಳಾರಿ ನಾನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಆಗಿದ್ದಾಗ ಪಶ್ಚಿಮ ಬಂಗಾಳದಲ್ಲಿ ಟಾಟಾ ಕಂಪನಿಗೆ ಹಂಚಿಕೆ ಮಾಡಿದ್ದ ಜಮೀನು ವಿವಾದ ನನ್ನ ಪೀಠದ ಮುಂದೆ ಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿ ಜಮೀನನ್ನು ರೈತರಿಗೆ ಹಿಂತಿರುಗಿಸುವಂತೆ ತೀರ್ಪು ನೀಡಿದ್ದೇನೆ. ಈ ತೀರ್ಪನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರ ಬಳ್ಳಾರಿ ಜಮೀನುಗಳನ್ನು ರೈತರಿಗೆ ವಾಪಸ್‌ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡರು ತಿಳಿಸಿದರು. ನಗರದ ಬಾಬು ಜಗಜೀವನ್‌ರಾಂ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳು ಭೂ ಸಂತ್ರಸ್ತರ ಜತೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರ್ಸೆಲರ್‌ ಮಿತ್ತಲ್ ಕಂಪನಿ ಸೇರಿದಂತೆ ಜಿಲ್ಲೆಯಲ್ಲಿ ಉದ್ಯಮಗಳಿಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವೆ ರೈತರ ಜಮೀನನ್ನು ಹಿಂದಕ್ಕೆ ಕೊಡಬೇಕು. ಬಳ್ಳಾರಿ ಜಿಲ್ಲೆಯಲ್ಲಿ ಆರ್ಸೆಲರ್‌ ಮಿತ್ತಲ್‌ ಕಂಪನಿ ತನಗೆ ಮಂಜೂರು ಮಾಡಿರುವ 2643 ಎಕರೆ ಜಮೀನು ಬೇಡವೆಂದು ಹೇಳಿದೆ. ಆದರೆ, ಕಳೆದ 13 ವರ್ಷದಿಂದ ಉಳುಮೆ ಇಲ್ಲದೆ, ದುಡಿಮೆ ಇಲ್ಲದೆ ಸಂಕಷ್ಟ ಅನುಭವಿಸಿದ ರೈತರಿಗೆ ನಷ್ಟ ತುಂಬಿಕೊಡುವವರು ಯಾರು ಎಂದು ಪ್ರಶ್ನಿಸಿದರಲ್ಲದೆ, ರೈತರಿಗಾದ ನಷ್ಟ ತುಂಬಿಕೊಡಲು ಮಿತ್ತಲ್‌ ಸ್ವತ್ತುಗಳನ್ನು ಜಪ್ತಿ ಮಾಡಬೇಕೆಂದು ಆಗ್ರಹಿಸಿದರು. ಮಿತ್ತಲ್‌ ತಮಗೆ ಜಮೀನು ಬೇಡವೆಂದು ಹೇಳಿರುವುದರಿಂದ ಈ ವಿಷಯವನ್ನು ಸಚಿವ ಸಂಪುಟದ ಮುಂದೆ ಇಟ್ಟು ರೈತರಿಗೆ ಜಮೀನು ವಾಪಸ್‌ ಕೊಡಬಹುದಾಗಿದೆ. ಇಲ್ಲವೆ ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಎಕರೆಗೆ ₹30 ಲಕ್ಷ ಪರಿಹಾರ ಕೊಡುವಂತಾಗಬೇಕು. ಬಡ್ಡಿ ಎಲ್ಲ ಸೇರಿದಂತೆ ರೈತರಿಗೆ ಎಕರೆಗೆ ₹1 ಕೋಟಿ ಸಿಗಲಿದೆ ಎಂದರು. ರಾಜ್ಯದಲ್ಲಿ ಜನಪರವಾದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಬಹುದು. ಆದರೆ, ಸರ್ಕಾರ ಕಣ್ಣು, ಕಿವಿ ತೆರೆಯಬೇಕಾದರೆ ಒಗ್ಗಟ್ಟಿನ ಹೋರಾಟ ನಡೆಸಬೇಕು. ಈ ಭಾಗದ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳು ಮುಖ್ಯಮಂತ್ರಿ ಜತೆ ರೈತರ ಭೇಟಿಗೆ ಅವಕಾಶ ಕಲ್ಪಿಸಬೇಕು ಎಂದು ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಅವರಿಗೆ ಗೋಪಾಲಗೌಡರು ಸಲಹೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮಾತನಾಡಿ, ಜಿಲ್ಲೆಯ ಕೈಗಾರಿಕೆಗಳಿಗೆ ರೈತರ ಜಮೀನುಗಳನ್ನು ವಶಪಡಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ರೈತರಿಗೆ ಅನ್ಯಾಯವಾಗಿದ್ದು, ಸೂಕ್ತ ಪರಿಹಾರ ಸಿಗಬೇಕಾಗಿದೆ. ದಸರಾ ಬಳಿಕ ಜಮೀನು ಕಳೆದುಕೊಂಡ ರೈತರ ನಿಯೋಗವನ್ನು ಮತ್ತೆ ಸಿಎಂ ಬಳಿ ಕರೆದುಕೊಂಡು ಹೋಗಲಾಗುವುದು ಎಂದು ಸಚಿವ ನಾಗೇಂದ್ರ ಭರವಸೆ ನೀಡಿದರು. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಜಿಲ್ಲೆಯ ರೈತರಿಗಾದ ಅನ್ಯಾಯವನ್ನು ಸರಿಪಡಿಸುವ ಕೆಲಸವಾಗಬೇಕಾಗಿದೆ. ಪಾವಗಡದಲ್ಲಿ ಸೌರ ವಿದ್ಯುತ್‌ಗೆ ಜಮೀನು ಕೊಟ್ಟ ರೈತರಿಗೆ ವರ್ಷಕ್ಕೆ ₹22 ಸಾವಿರ ನೀಡಲಾಗುತ್ತಿದೆ. ಅದೇ ರೀತಿ ಬಳ್ಳಾರಿ ಜಿಲ್ಲೆಯ ರೈತರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಚಿಂತಕ ಎಸ್.ವೈ. ಗುರುಶಾಂತ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್‌, ಸಿಐಟಿಯು ಮುಖಂಡ ಜೆ. ಸತ್ಯಬಾಬು, ಚಂದ್ರಕುಮಾರಿ, ತಿಪ್ಪೇಸ್ವಾಮಿ, ಸಂಗನಕಲ್‌ ವಿಜಯಕುಮಾರ್‌ , ಗಾಳಿ ಬಸವರಾಜ್‌, ಮುಂಡ್ರಗಿ ನಾಗರಾಜ್‌, ಎ. ಮಾನಯ್ಯ, ಕೋಟೇಶ್ವರ ರಾವ್‌, ಕೆ. ನಾಗಭೂಷಣ ರಾವ್‌, ಬಿ. ಗೋವಿಂದಪ್ಪ, ಜೆ.ಎಂ. ಚನ್ನಬಸಯ್ಯ, ಪಿ.ಆರ್. ವೆಂಕಟೇಶ್, ಮತ್ತಿತರರು ವೇದಿಕೆಯಲ್ಲಿದ್ದರು.

Share this article