ಕಾರ್ಕಳ: ಕಳೆದ ಕೆಲವು ದಿನಗಳಿಂದ ಭಾರಿ ಉರಿ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಸೋಮವಾರ ಸಂಜೆ ಸುರಿದ ಮಳೆ ಸ್ವಲ್ಪ ಮಟ್ಟಿನ ತಂಪು ನೀಡಿದೆ. ಕಾರ್ಕಳ ತಾಲೂಕಿನ ಅಜೆಕಾರು, ಶಿರ್ಲಾಲು, ಕೆರುವಾಶೆ, ಮಾಳ, ನೂರಲ್ ಬೆಟ್ಟು ಹಾಗೂ ಬಜಗೋಳಿ ಹಿರ್ಗಾನ ಕುಕ್ಕುಂದೂರು, ನೀರೆ ಬೈಲೂರು, ಕೌಡೂರು ಭಾಗಗಳಲ್ಲಿ ಸಂಜೆ 6 ಗಂಟೆ ವೇಳೆಗೆ ಉತ್ತಮ ಮಳೆಯಾಗಿದೆ. ಕೆಲವೆಡೆ ಸಿಡಿಲು-ಗುಡುಗು ಸಹಿತ ಭಾರೀ ಮಳೆಯಾಗಿ ವಾತಾವರಣ ತಂಪಾಗಿದೆ.ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಮಧ್ಯಾಹ್ನದ ಬಳಿಕ ಕೆಲವೆಡೆ ತುಂತುರು ಮಳೆ ಆರಂಭವಾಗಿತ್ತು. ನಂತರ ಸಂಜೆ ವೇಳೆಗೆ ಮಳೆ ಜೋರಾಗಿ ಸುರಿದು ಉಷ್ಣಾಂಶವನ್ನು ಕಡಿಮೆ ಮಾಡಿತು. ಕಳೆದ ಕೆಲವು ದಿನಗಳಿಂದ ಹೆಚ್ಚಿದ ತಾಪಮಾನದಿಂದ ಜನರು ತೀವ್ರ ಬಿಸಿಲಿನ ಕಾಟ ಅನುಭವಿಸುತ್ತಿದ್ದು, ಈ ಮಳೆಯು ಸ್ವಲ್ಪ ಮಟ್ಟಿನ ಹಿತ ನೀಡಿದೆ.ಇದರ ನಡುವೆ ಕಾರ್ಕಳ ತಾಲೂಕಿನ ಮಾಳದಲ್ಲಿ ಸಿಡಿಲಿನ ಅಬ್ಬರ ಹೆಚ್ಚಾಗಿ, ಮರಕ್ಕೆ ಸಿಡಿಲು ಬಡಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಆಸ್ತಿನಷ್ಟ ಸಂಭವಿಸಿಲ್ಲವೆಂದು ತಿಳಿದುಬಂದಿದೆ.