ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಬುಧವಾರ ಭಾರಿ ಮಳೆಯಾಗಿದ್ದು, ಕೆಲವು ಮನೆಗಳಿಗೆ ನೀರು ನುಗ್ಗಿದೆ. ಅಲ್ಲಲ್ಲಿ ಗಿಡ ಮರಗಳು ಉರುಳಿವೆ. ಕೆಲವೆಡೆ ಜಲವೃತವಾಗಿವೆ.
ಭಟ್ಕಳ, ಹೊನ್ನಾವರ, ಕುಮಟಾಗಳಲ್ಲಿ ಭಾರಿ ಮಳೆಯಾಗಿದೆ. ಅಂಕೋಲಾ ಹಾಗೂ ಕಾರವಾರದಲ್ಲಿ ಸಾಧಾರಣ ಮಳೆಯಾಗಿದೆ. ಮಂಗಳವಾರ ರಾತ್ರಿ ಸುರಿದ ಸಾಧಾರಣ ಮಳೆಗೆ ಕಾರವಾರ ಕೆಲವು ಮನೆಗಳ ಸುತ್ತ ನೀರು ನೆಲೆಸಿತು. ಚರಂಡಿ ಸ್ವಚ್ಛಗೊಳಿಸದ ಪರಿಣಾಮ ನೀರು ಸರಾಗವಾಗಿ ಹರಿದುಹೋಗದೆ ಕೆಲವು ಮನೆಗಳ ಅಂಗಳಕ್ಕೆ ನೀರು ನುಗ್ಗಿತು. ಕುಮಟಾ- ಸಿದ್ದಾಪುರ ರಸ್ತೆಯಲ್ಲಿ ನೀರು ನುಗ್ಗಿದ್ದರಿಂದ ಕೆಲಸಮಯ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.ಭಟ್ಕಳದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಸುರಿದ ಭಾರಿ ಮಳೆಗೆ ಕೆಳಮಟ್ಟದಲ್ಲಿರುವ ಪ್ರದೇಶ ಜಲಾವೃತವಾಯಿತು. ಹೆಬಳೆಯಲ್ಲಿ 5 ಮನೆಗಳಿಗೆ ಕೆಲಸಮಯ ನೀರು ನುಗ್ಗಿತ್ತು. ಭಾರಿ ಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು.
ಹೊನ್ನಾವರದಲ್ಲಿ ಸಹ ಬೆಳಗ್ಗೆ ಭಾರಿ ಮಳೆ ಸುರಿಯಿತು. ಸುಮಾರು 3 ಗಂಟೆಗಳ ಕಾಲ ಭಾರಿ ಮಳೆಯಿಂದ ಜನಜೀವನ ವ್ಯತ್ಯಯ ಉಂಟಾಯಿತು.ಕುಮಟಾದ ಕೂಜಳ್ಳಿ, ವಾಲಗಳ್ಳಿಯ ಕೆಲವು ಮನೆಗಳಿಗೆ ನೀರು ನುಗಿದರೆ, ಕುಮಟಾ ಸಿದ್ಧಾಪುರ ರಾಜ್ಯ ಹೆದ್ದಾರಿ ಮೇಲೆ ಕೆಲಸಮಯ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಪ್ರಯಾಣಿಕರು ಪರದಾಡುವಂತಾಯಿತು.
ಗೋಕರ್ಣದಲ್ಲಿ ಮನೆಯೊಂದರ ಮೇಲೆ ತೆಂಗಿನಮರ ಹಾಗೂ ಬೃಹತ್ ಮರದ ಟೊಂಗೆಯೊಂದು ಉರುಳಿ ಹಾನಿ ಉಂಟಾಗಿದೆ. ಮಹಾಬಲೇಶ್ವರ ಹಾಗೂ ಮಹಾಗಣಪತಿ ದೇವಾಲಯದ ಎದುರು ರಸ್ತೆ ಜಲಾವೃತವಾಗಿ ಸಂಚಾರಕ್ಕೆ ತೊಂದರೆ ಉಂಟಾಯಿತು. ರಥಬೀದಿ ಕೂಡ ಕೆಲ ಸಮಯ ಜಲಾವೃತವಾಗಿತ್ತು. ಶಿರಸಿ ತಾಲೂಕಿನ ಶಿವಳ್ಳಿ ಗ್ರಾಮದ ಪಂಚಲಿಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲೆ ಮರ ಬಿದ್ದು ೩ ಕೊಠಡಿಗಳಿಗೆ ಹಾನಿಯಾಗಿದೆ. ಸಂಜೆಯಾಗುತ್ತಿದ್ದಂತೆ ಮಳೆ ಸ್ವಲ್ಪ ಇಳಿಮುಖಗೊಂಡಿದೆ. ದಟ್ಟವಾದ ಮೋಡ ಕವಿದ ವಾತಾವರಣ ಮುಂದುವರಿದಿದೆ. ಭಾರೀ ಮಳೆಗೆ ದೇವಾಲಯದ ಎದುರಿನ ರಸ್ತೆ ಜಲಾವೃತಗೋಕರ್ಣ: ಕಳೆದೆರಡು ದಿನಗಳಿಂದ ಪ್ರವಾಸಿ ತಾಣದಲ್ಲಿ ಅಬ್ಬರದ ಮಳೆ ಆಗುತ್ತಿದೆ. ರಭಸದ ಗಾಳಿ ಬೀಸುತ್ತಿದೆ. ಬುಧವಾರ ಬೆಳಗ್ಗೆ ಮಹಾಬಲೇಶ್ವರ ಮಂದಿರದ ಅಮೃತಾನ್ನ ಭೋಜನ ಶಾಲೆಯ ಚಾವಣಿ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.ಚಿನ್ನದಕೇರಿಯಲ್ಲಿರುವ ಬೃಹತ್ ಆಲದ ಮರದ ಟೊಂಗೆ ಬಿದ್ದು ಮನೆಯ ಸಂಪರ್ಕದ ವಿದ್ಯುತ್ ತಂತಿ ತುಂಡಾಗಿ ಪಕ್ಕದಲ್ಲಿರುವ ಮನೆಗೂ ಅಲ್ಪ ಹಾನಿಯಾಗಿದೆ.ಬೀಳುವ ಸ್ಥಿತಿಯಲ್ಲಿರುವ ಈ ಮರವನ್ನು ತೆರವುಗೊಳಿಸುವಂತೆ ಇಲ್ಲಿನ ನಿವಾಸಿ ಮನೋಹರ್ ಪೈ ಎಂಟು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ವಾರ್ಡ್ ಸದಸ್ಯ ಸುಜಯ ಶೆಟ್ಟಿ ಮರ ತೆರವುಗೊಳಿಸಲು ಅಗತ್ಯ ಕ್ರಮಕ್ಕೆ ಮುಂದಾಗಿದ್ದರು. ಆದರೆ ಗ್ರಾಮ ಪಂಚಾಯಿತಿಯಲ್ಲಿ ಇದರ ವೆಚ್ಚ ಭರಿಸಲು ಸಾಕಷ್ಟು ಹಣವಿಲ್ಲ ಎಂದು ಅಲ್ಲಿಗೆ ಕೈಚೆಲ್ಲಿದ್ದಾರೆ. ಆದರೆ ಹಾಗೇ ಬಿಟ್ಟ ಪರಿಣಾಮ ಒಂದು ಟೊಂಗೆ ಮುರಿದಿದ್ದು, ಇನ್ನು ರಸ್ತೆ ಬದಿ ಮರವು ಒಲಿದಿದ್ದು, ವಿದ್ಯುತ್ ತಂತಿ ಮೇಲೆ ಬಿದ್ದು ಅವಘಡ ಸಂಭವಿಸುವ ಆತಂಕವಿದೆ. ಸಾಕಷ್ಟು ಅನವಶ್ಯಕ ಕಾಮಗಾರಿಗೆ ಹಣ ವ್ಯಯಿಸುವ ಪಂಚಾಯಿತಿ ಇಂತಹ ಅಗತ್ಯ ಕೆಲಸವನ್ನು ಮಾಡದೆ ಇರುವುದಕ್ಕೆ ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಮರ ತೆರವುಗೊಳಿಸಬೇಕಿದೆ.ಇಲ್ಲಿನ ಎಲ್ಲ ಪ್ರಮುಖ ಮಾರ್ಗಗಳ ಚರಂಡಿಯ ನೀರು ರಸ್ತೆ ಮೇಲೆ ಬಂದು ಜಲಾವೃತಗೊಂಡಿದ್ದು, ಬಹುಮುಖ್ಯವಾಗಿ ಮಹಾಗಣಪತಿ, ಮಹಾಬಲೇಶ್ವರ ಮಂದಿರದ ಬಳಿ ಹಾಗೂ ರಥಬೀದಿಯಲ್ಲಿ ಹೊಲಸು ನೀರು, ಕಲ್ಲು ಮಣ್ಣು ರಾಶಿ ಬಿದ್ದಿದ್ದು, ಈ ಹೊಲಸನ್ನೆ ದಾಟಿ ಭಕ್ತರು ದೇವರ ದರ್ಶನಕ್ಕೆ ತೆರಳಬೇಕಾದ ಸ್ಥಿತಿ ಉಂಟಾಗಿದೆ. ರಾಜ್ಯ ಹೆದ್ದಾರಿಯ ಭದ್ರಕಾಳಿ ಕಾಲೇಜು, ಚೌಡಗೇರಿ ಕ್ರಾಸ್ ಬಳಿ ಚರಂಡಿಯಲ್ಲಿ ಮಣ್ಣು ತುಂಬಿ ರಸ್ತೆ ನದಿಯಾಗಿ ಮಾರ್ಪಡುತ್ತಿದೆ.