ಮಳೆ ಅಬ್ಬರ, ಉಕ್ಕಿ ಹರಿಯುತ್ತಿರುವ ನದಿಗಳು

KannadaprabhaNewsNetwork |  
Published : Jul 28, 2025, 12:31 AM ISTUpdated : Jul 28, 2025, 10:40 AM IST
ಉಕ್ಕಡಗಾತ್ರಿ ಬಳಿ ಮೈದುಂಬಿ ಹರಿಯುವ ತುಂಗಭದ್ರಾ ನದಿ, ಸ್ನಾನಗಟ್ಟ ಮುಳುಗಡೆ | Kannada Prabha

ಸಾರಾಂಶ

ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಕೃಷ್ಣಾ, ತುಂಗಭದ್ರಾ, ಕಾವೇರಿ, ಶರಾವತಿ, ಭೀಮಾ ಸೇರಿ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ

 ಬೆಂಗಳೂರು :  ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಕೃಷ್ಣಾ, ತುಂಗಭದ್ರಾ, ಕಾವೇರಿ, ಶರಾವತಿ, ಭೀಮಾ ಸೇರಿ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಚತ್ರಪ್ಪಾಡಿಯಲ್ಲಿ ಭಾನುವಾರ ಮುಂಜಾನೆ ಮನೆಯ ಹೊರಗೆ ಕೆಲಸ ಮಾಡುತ್ತಿರುವಾಗ ಭಾರೀ ಮಳೆಗೆ ಮರದ ಕೊಂಬೆಯೊಂದು ಮುರಿದು ಬಿದ್ದು, ರುಕ್ಮಿಣಿ (57) ಎಂಬುವರು ಮೃತಪಟ್ಟಿದ್ದಾರೆ. ನದಿಗಳಲ್ಲಿ ಪ್ರವಾಹ:

ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಲ್ಲಿ ಪ್ರವಾಹ ಬಂದಿದ್ದು, ಜಲಾಶಯದ 26 ಕ್ರಸ್ಟ್ ಗೇಟ್‌ಗಳ ಮೂಲಕ 1,02,089 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಹಂಪಿಯ ಪುರಂದರದಾಸರ ಮಂಟಪ, ಸ್ನಾನಘಟ್ಟ, ತುಂಗಾರತಿ ಸ್ಥಳ, ಜನಿವಾರ ಮಂಟಪಗಳು ಮುಳುಗಡೆಯಾಗಿವೆ.

ದಾವಣಗೆರೆ ಜಿಲ್ಲೆ ಮಲೇಬೆನ್ನೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಂದಿಗುಡಿ, ಉಕ್ಕಡಗಾತ್ರಿ ಕ್ಷೇತ್ರದ ಸ್ನಾನಘಟ್ಟ, ಅಂಗಡಿಗಳು ಮುಳುಗಡೆಯಾಗಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಗಾ ನದಿಯ ಪ್ರವಾಹಕ್ಕೆ ಶೃಂಗೇರಿಯ ಗಾಂಧಿ ಮೈದಾನ, ಕಪ್ಪೆಶಂಕರ ದೇವಾಲಯ, ಸಂಧ್ಯಾವಂದನ ಮಂಟಪಗಳು ಜಲಾವೃತಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮಾರಾಧಾರಾ ನದಿ ಉಕ್ಕಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ.

ಕೇರಳದ ವಯನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಪಿಲಾ ನದಿಗೆ ಪ್ರವಾಹ ಬಂದಿದೆ. ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 40 ಸಾವಿರ, ತಾರಕ ಜಲಾಶಯದಿಂದ 9 ಸಾವಿರ, ನಗು ಜಲಾಶಯದಿಂದ 2 ಸಾವಿರ ಸೇರಿ ಒಟ್ಟಾರೆ 51 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರಿಂದಾಗಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟ, ಹದಿನಾರು ಕಾಲುಮಂಟಪ, ಪರಶುರಾಮ ದೇವಾಲಯಗಳು ಮುಳುಗಡೆಯಾಗಿವೆ. ಹೀಗಾಗಿ, ಭಕ್ತರು ದಾಸೋಹ ಭವನದ ಪಕ್ಕದಲ್ಲಿರುವ ಸ್ನಾನದ ಕೊಠಡಿಯಲ್ಲಿ ಸ್ನಾನ ಮಾಡಿ, ದೇವಾಲಯಕ್ಕೆ ತೆರಳುವ ಸನ್ನಿವೇಶ ಎದುರಾಗಿದೆ.

ಕೆಆರ್‌ಎಸ್‌ ನಿಂದ 85 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಕಾವೇರಿ ನದಿಗೆ ಬಿಡುತ್ತಿದ್ದು, ನದಿ ತೀರದ ಪ್ರದೇಶಗಳಿಗೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಸೂಚನೆ ನೀಡಲಾಗಿದೆ. ಶ್ರೀರಂಗಪಟ್ಟಣದ ನದಿ ತೀರ ಪ್ರದೇಶಗಳಾದ ಪಶ್ಚಿಮವಾಹಿನಿ, ಪಟ್ಟಣದ ಸ್ನಾನಘಟ್ಟ, ಜಿಬಿ ಹೊಳೆ, ದೊಡ್ಡ ಗೋಸಾಯಿ ಘಾಟ್, ಕಾವೇರಿ ಸಂಗಮದಲ್ಲಿ ಅಸ್ಥಿ ವಿಸರ್ಜನೆ ಕಾರ್ಯ ನಡೆದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ನದಿಗೆ ತೆರಳುವ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪೊಲೀಸರನ್ನು ನಿಯೋಜಿಸಲಾಗಿದೆ.

ಕಾವೇರಿ ತೀರದ ಪ್ರವಾಸಿ ತಾಣಗಳಾದ ಬಲಮುರಿ, ಎಡಮುರಿ, ಬೋರೇದೇವರ ದೇವಾಲಯ, ಚಂದ್ರವನ ಆಶ್ರಮದ ಬಳಿಯ ಬಂಗಾರದೊಡ್ಡಿ ನಾಲೆಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಪ್ರವಾಹ ಬಂದಿದ್ದು, ಬೆಳಗಾವಿ ಜಿಲ್ಲೆ ಚಿಕ್ಕೋಡಿ ವ್ಯಾಪ್ತಿಯಲ್ಲಿ 8 ಸೇತುವೆಗಳು ಜಲಾವೃತಗೊಂಡಿವೆ. ವಿಶ್ವವಿಖ್ಯಾತ ಗೋಕಾಕ ಜಲಪಾತ ಮೈದುಂಬಿ ಧುಮ್ಮುಕ್ಕುತ್ತಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ಹಾಗೂ ವೀರಭಟ್ಕರ ಜಲಾಶಯದಿಂದ 13 ಸಾವಿರ ಕ್ಯುಸೆಕ್‌ ನೀರನ್ನು ಭೀಮಾ ನದಿಗೆ ಬಿಡಲಾಗಿದ್ದು, ಭೀಮಾ, ಬೆಣ್ಣೆತೋರಾ ನದಿಗಳಲ್ಲಿ ಪ್ರವಾಹ ಬಂದಿದೆ. 

ಮುಂದುವರಿದ ಗುಡ್ಡ ಕುಸಿತ:

ಮಳೆಗೆ ಶೃಂಗೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರು ಬಳಿ ಗುಡ್ಡ ಕುಸಿದಿದ್ದು, ಶೃಂಗೇರಿ-ಮಂಗಳೂರು ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಿವಮೊಗ್ಗ ಜಿಲ್ಲೆಯ ಆಗುಂಬೆ ಘಾಟಿ, ಕವರಿಹಕ್ಲು ಬಳಿ ಧರೆಗಳು ಕುಸಿದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ದಕ್ಷಿ ಣ ಕನ್ನಡ ಜಿಲ್ಲೆ ಸುಬ್ರಹ್ಮಣ್ಯದ ದೇವರಗದ್ದೆಯ ಅಜ್ಜಿಹಿತ್ಲು ಎಂಬಲ್ಲಿ ಸೇತುವೆ ಅಂಚಿಗೆ ಭಾರಿ ಮರ ಉರುಳಿ ಬಿದ್ದು, ದೇವರಗದ್ದೆ-ಸುಬ್ರಹ್ಮಣ್ಯ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕೊಡಗಿನಲ್ಲಿ ಸೋಮವಾರಪೇಟೆ-ಸುಬ್ರಮಣ್ಯ ಸಂಪರ್ಕಿಸುವ ರಸ್ತೆಯಲ್ಲಿ ಮಣ್ಣು ಕುಸಿತಗೊಂಡಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ಇದೇ ವೇಳೆ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್