ವಿಜಯಪುರ : ‘ಹಿಂದೆ ನಾನು ಸಿಎಲ್‌ಪಿ ಲೀಡರ್ ಆಗಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮ ಹಾಕಿದೆ. ಆದರೆ, ಅಂದು ಮುಖ್ಯಮಂತ್ರಿ ಆಗಿದ್ದು ಎಸ್.ಎಂ.ಕೃಷ್ಣ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಖರ್ಗೆ ತಮಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದರ ಬಗ್ಗೆ ಅಸಮಾಧಾನ ಹೊರಹಾಕಿದರು. ಬೇಲಿಮಠದ ಶ್ರೀಗಳತ್ತ ಮುಖ ಮಾಡಿ ಮಾತನಾಡಿದ ಖರ್ಗೆ, ‘ನಾನು ಸಲ್ಲಿಸಿದ ಸೇವೆ ನೀರಲ್ಲಿ ಕೊಚ್ಚಿ ಹೋಯ್ತು ಸ್ವಾಮೀಜಿ’ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ರಾಜಕೀಯದಲ್ಲಿ ಹಂತ ಹಂತವಾಗಿ ಮೇಲಕ್ಕೆ ಬಂದಿದ್ದೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಿದ್ದೇನೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಿಂದ ಹಿಡಿದು ಇಂದು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ನಾನೆಂದೂ ಅಧಿಕಾರದ ಹಿಂದೆ ಬಿದ್ದಿಲ್ಲ. ಅದಾಗೇ ಸಿಕ್ಕಿದೆ ಎಂದು ಹೇಳಿದರು.
ಬೀದರ ಜಿಲ್ಲೆಯ ವರವಟ್ಟಿ ನನ್ನ ಹುಟ್ಟೂರು. ರಜಾಕರು ದಾಳಿ ಮಾಡುತ್ತಿದ್ದರು. ಗುಂಪಾ ಗ್ರಾಮದಲ್ಲಿ 800 ಜನರನ್ನು ಸಜೀವವಾಗಿ ದಹನ ಮಾಡಿ ಹೋದರು. ರಜಾಕರು ಹೋಗುವಾಗ ನಾನು ಜಮೀನಿನ ಪಕ್ಕದ ಮರದಡಿ ಆಟವಾಡುತ್ತಿದ್ದೆ. ನಮ್ಮ ಮನೆಯಲ್ಲಿ ನಮ್ಮ ತಾಯಿ, ಅಕ್ಕ, ಚಿಕ್ಕಪ್ಪ ಇದ್ದರು. ರಜಾಕರು ಮಶಾಲ್ ನಿಂದ ನಮ್ಮ ಮನೆ ಸುಟ್ಟು ಹಾಕಿದರು. ನನ್ನ ತಾಯಿ, ತಂಗಿ, ಚಿಕ್ಕಪ್ಪ ಸುಟ್ಟುಹೋದರು. ನಮ್ಮ ತಂದೆ ಮಾಪಣ್ಣಗೆ ನಿಮ್ಮ ಮಗಾ ಹೊರಗೆ ಆಳುತ್ತಿದ್ದಾನೆಂದು ಹೇಳಿದಾಗ ನನ್ನ ಬಳಿ ಬಂದರು. ಆಗ ಯಾರಿಗೂ ಯಾರೂ ರಕ್ಷಣೆ ಕೊಡುತ್ತಿರಲಿಲ್ಲ. ನಮ್ಮ ತಂದೆ ನನ್ನನ್ನು ಕರೆದುಕೊಂಡು ಪುಣೆಯಲ್ಲಿ ಮಿಲಿಟರಿಯಲ್ಲಿದ್ದ ಚಿಕ್ಕಪ್ಪನ ಬಳಿಗೆ ಕರೆದುಕೊಂಡು ಹೋದರು. ಆದರೆ, ಅದೇ ವೇಳೆ ದೇಶಕ್ಕೆ ಸ್ವಾತಂತ್ರ್ಯಸಿಕ್ಕ ಕಾರಣ ಮಿಲಿಟರಿಯಲ್ಲಿದ್ದ ಚಿಕ್ಪಪ್ಪ ರಾಜೀನಾಮೆ ನೀಡಿ ಬೇರೆಡೆ ಹೋಗಿದ್ದರು. ಪುಣೆಗೆ ಹೋದಾಗ ಚಿಕ್ಕಪ್ಪ ಸಹ ಸಿಗಲಿಲ್ಲ. ನಂತರ ನಾನು ನನ್ನ ತಂದೆ ಕಲಬುರಗಿಗೆ ಬಂದು ನೆಲೆ ನಿಂತೆವು ಎಂದು ತಮ್ಮ ಬಾಲ್ಯದ ದಿನಗಳನ್ನು ನೆನದರು.
ಧನಕರ ರಾಜೀನಾಮೆ ಏಕೆಂದು ಗೊತ್ತಿಲ್ಲ:
ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿ, ಅವರು ಯಾವಾಗಲೂ ಸರ್ಕಾರದ ಪರವಾಗಿಯೇ ಇರುತ್ತಿದ್ದರು. ಧನಕರ್ ಅವರ ರಾಜೀನಾಮೆಗೆ ಕಾರಣವಾದ ವಿಷಯದ ಬಗ್ಗೆ ನಮಗೆ ಮಾಹಿತಿ ಇಲ್ಲ. ಪ್ರಧಾನಿ ಮೋದಿ ಹಾಗೂ ಧನಕರ್ ಮಧ್ಯೆ ಏನು ನಡೆದಿದೆ ಎಂಬುದು ಗೊತ್ತಿಲ್ಲ ಎಂದರು. ನಾವು ರಾಜ್ಯಸಭೆಯಲ್ಲಿ ರೈತರು, ಬಡವರು, ಅಂತಾರಾಷ್ಟ್ರೀಯ ಸಮಸ್ಯೆಗಳು ಹಾಗೂ ವಿದೇಶಾಂಗ ನೀತಿ ಬಗ್ಗೆ ಪ್ರಸ್ತಾಪಿಸಿದಾಗ ಜಗದೀಪ್ ಧನಕರ್ ಚರ್ಚೆಗೆ ಅವಕಾಶ ಕೊಡುತ್ತಿರಲಿಲ್ಲ. ಮಹಿಳೆಯರು, ದೀನ ದಲಿತರ ಮೇಲಿನ ದೌರ್ಜನ್ಯ ಮತ್ತು ಹಿಂದೂ-ಮುಸ್ಲಿಂ ಗಲಾಟೆಗಳ ಬಗ್ಗೆ ಚರ್ಚೆಗೆ ನೋಟಿಸ್ ನೀಡಿದರೂ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದರು.