ಬೆಂಗಳೂರು : ಕಳೆದೆರಡು ದಿನಗಳಿಂದ ಮಳೆ ಚುರುಕುಗೊಂಡಿದ್ದು, ರಾಜ್ಯದ ನದಿಗಳು ಉಕ್ಕಿ ಹರಿಯುತ್ತೀವೆ. ಬಹುತೇಕ ಜಲಾಶಗಳು ಗರಿಷ್ಠ ಹಂತಕ್ಕೆ ತಲುಪಿದ್ದು, ಕೆಆರ್‌ಎಸ್, ನಾರಾಯಣಪುರ, ಹೇಮಾವತಿ, ವಾಟೆಹೊಳೆ ಡ್ಯಾಂಗಳಿಂದ ನೀರು ಹರಿಬಿಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಹಲತ್ರಿ ನದಿ ಮೇಲಿನ ಸೇತುವೆ ಮೇಲೆ 5 ಅಡಿ ನೀರು ಹರಿಯುತ್ತಿದ್ದು, ಗೋವಾ ಸಂಪರ್ಕ ಕಲ್ಪಿಸುವ ಬೆಳಗಾವಿ-ಜಾಂಬೋಟಿ ಮತ್ತು ಖಾನಾಪುರ-ಜಾಂಬೋಟಿ ರಸ್ತೆಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹಿರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ನದಿಯ ಒಳಹರಿವು ಒಂದೇ ದಿನಕ್ಕೆ 22 ಸಾವಿರ ಕ್ಯುಸೆಕ್‌ಗೆ ಏರಿಕೆಯಾಗಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 22 ಗ್ರಾಮಗಳಿಗೆ ಸಂಪರ್ಕದ ಕೊಂಡಿಯಾಗಿದ್ದ 11 ಸೇತುವೆಗಳು ಜಲಾವೃತವಾಗಿದ್ದು, ಜನರು ಪರದಾಡುತ್ತಿದ್ದಾರೆ.
ಕೆಆರ್‌ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ 35 ಸಾವಿರ ನೀರು ಹರಿಬಿಟ್ಟಿದ್ದು, ನದಿ ತೀರ ಪ್ರದೇಶದ ಜನತೆಗೆ ರಕ್ಷಣೆ ಕುರಿತು ಆಡಳಿತ ಎಚ್ಚರಿಕೆ ನೀಡಿದೆ. ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ಸೇರಿ ಶ್ರೀರಂಗಪಟ್ಟಣ ತಾಲೂಕಿನ ಪ್ರವಾಸಿ ಸ್ಥಳಗಳಿಗೆ ಪ್ರವೇಶ ನಿಷೇಧಿಸಲಾಗಿದೆ.
ಶೃಂಗೇರಿ ತಾಲೂಕಿನಲ್ಲಿ ಮಳೆ ಎಡಬಿಡದೆ ಅಬ್ಬರಿಸಿದ್ದು, ಶೃಂಗೇರಿ-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರು ಸಾಲ್ಮರ ಬಳಿ ಮತ್ತೆ ಗುಡ್ಡಕುಸಿದು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಜೆಸಿಬಿಯಿಂದ ಕಾರ್ಯಾಚರಣೆ ನಡೆಸಿದ್ದರಿಂದ ಬಂದ್ ಆಗಿದ್ದ ಶೃಂಗೇರಿ- ಕಾರ್ಕಳ ರಸ್ತೆ ಸಂಚಾರ ಪುನರಾಂಭಗೊಂಡಿದೆ.
ಸಕಲೇಶಪುರದಲ್ಲಿ ಮಳೆ-ಗಾಳಿ ಜೋರಾಗಿದ್ದರಿಂದ ತಾಲೂಕಿನ ಶೇ.70ರಷ್ಟು ಗ್ರಾಮಗಳಲ್ಲಿ ವಿದ್ಯುತ್ ಕೈಕೊಟ್ಟಿದ್ದು, ಕಳೆದ 4 ದಿನಗಳಿಂದ ಜನರು ಕತ್ತಲಲ್ಲೇ ಬದುಕು ನಡೆಸವಂತಾಗಿದೆ. ಹೇಮಾವತಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, 5 ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಆಲೂರು ತಾಲೂಕಿನಲ್ಲಿ ಹಲವಾರು ಮರ, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದು ಹಲವು ಮನೆಗಳು ಹಾನಿಗೀಡಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಗೆ ಇನ್ನೆರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಗಾಳಿ-ಮಳೆಗೆ 100 ಅಡಿಕೆ ಮರಗಳಿಗೆ ಹಾನಿಯಾಗಿದೆ.
ಇಂದು ಸಹ ಶಾಲೆಗಳಿಗೆ ರಜೆ
ಬೆಳಗಾವಿ ಜಿಲ್ಲೆಯ ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಖಾನಾಪುರ, ಕಿತ್ತೂರು ತಾಲೂಕು, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ದಾಂಡೇಲಿ, ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು, ಹಾಸನ, ಹೊಳೆನರಸೀಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಎಲ್ಲ ಅಂಗನವಾಡಿ ಮತ್ತು ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.