ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಕುಂಬಳೂರು- ನಿಟ್ಟೂರು ಮಧ್ಯೆದ ರಸ್ತೆಗೆ ಅಡ್ಡಲಾಗಿ ನಾಲ್ಕು ಅಡಿ ವಿಸ್ತೀರ್ಣದ ಪೈಪ್ ಹಾಕಿದ್ದು ಅದರಲ್ಲಿ ಕಸ, ಕಲ್ಲು ಸಿಕ್ಕಿಕೊಂಡ ಪರಿಣಾಮ ಸುಮಾರು ಅರವತ್ತು ಎಕರೆ ಕಟಾವಿಗೆ ಬಂದ ಭತ್ತದ ಜಮೀನು ಜಲಾವೃತವಾಗಿದ್ದು, ಮಲೇಬೆನ್ನೂರು, ದಿಬ್ಬದಹಳ್ಳಿ ಮತ್ತು ಕೊಮಾರನಹಳ್ಳಿ ಗ್ರಾಮಗಳ ಗಲೀಜು ಮಿಶ್ರಿತ ಚರಂಡಿ ನೀರು ಜಮೀನಿಗೆ ಹರಿದಿದೆ. ಶುಕ್ರವಾರ ಭತ್ತವನ್ನು ಕಟಾವು ಮಾಡಲು ಸಿದ್ದತೆ ನಡೆಸಿದ್ದ ರೈತರು ಜಮೀನು ಒಣಗುವವರೆಗೆ ಕಾಯುವ ಸ್ಥಿತಿ ಬಂದಿದೆ. ಕೆಂಪಾಗಿರುವ ಭತ್ತದ ಕಾಳು ಮಳೆಗೆ ಬೀಳುವ ಹಂತ ತಲುಪಿದೆ ಎಂದು ಗೌಡ್ರ ಧನಂಜಯ ತಿಳಿಸಿದರು.
ಶುಕ್ರವಾರ ಬೆಳಿಗ್ಗೆ ಹತ್ತಾರು ರೈತರು ಜೆಸಿಬಿ ಮೂಲಕ ಪೈಪ್‌ನಲ್ಲಿ ಸಿಕ್ಕಿಕೊಂಡ ಕಲ್ಲು, ಕಸವನ್ನು ಒಂದು ಗಂಟೆಗಳ ಕಾಲ ತೆರವು ಕಾರ್ಯ ನಡೆಸಿದರು. ಕಾಲುವೆಯಲ್ಲಿ ಹರಿಯುವ ನೀರಿನ ಹರಿವು ಮತ್ತು ಜಮೀನಿನಲ್ಲಿ ದಾಸ್ತಾನಾಗಿರುವ ನೀರು ಕ್ರಮೇಣ ಕಡಿಮೆಯಾಗಿ ರೈತರು ನಿಟ್ಟುಸಿರು ಬಿಟ್ಟರು.ರಸ್ತೆಗೆ ಹಾಕಿರುವ ನಾಲ್ಕು ಅಡಿ ಪೈಪ್ ತೆಗೆದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಡಕ್ ನಿರ್ಮಿಸಿ ಪ್ರತಿ ಸಲವೂ ರೈತರಿಗೆ ತೊಂದರೆಯಾಗಿರುವ ಈ ಪೈಪ್‌ನಿಂದಾಗುವ ಅನಾಹುತವನ್ನು ತಪ್ಪಿಸಬೇಕೆಂದು ರೈತ ಕೆ.ಕುಮಾರ್ ಅಧಿಕಾರಿಗಳನ್ನು ಒತ್ತಾಯಿಸಿದರು. ಮಳೆ ಬಾರದಿದ್ದರೆ ಭತ್ತದ ಮಡಿ ಒಣಗಲು ವಾರ ಅಗತ್ಯವಿದೆ. ಅಲ್ಲಿಯವರೆಗೂ ಭತ್ತ ಕಟಾವು ಮಾಡಲು ಬರಲ್ಲ ಎಂದು ರೈತರು ತಿಳಿಸಿದರು. ರೈತರಾದ ಎಚ್.ಆನಂದ್, ಮಂಜು, ರಾಕೇಶ್, ಭರತ್, ಹನುಮೇಶಿ, ಹನುಮಂತ ಭತ್ತದ ಹಾನಿಯನ್ನು ವೀಕ್ಷಿಸಿದರು.