ಮಂಗಳೂರು: ಶೈಕ್ಷಣಿಕ ಕೇಂದ್ರಗಳಲ್ಲಿ ಸಮಾನತೆ ಹಾಗೂ ಮಕ್ಕಳಲ್ಲಿ ಏಕತೆ ತರುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆಯುವ ಮೂಲಕ ಶಾಲಾ-ಕಾಲೇಜುಗಳ ಶೈಕ್ಷಣಿಕ ವಾತಾವರಣವನ್ನು ಹಾಳುಗೆಡವಲು ಮುಂದಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್‌ಗೆ ಅವಕಾಶ ನೀಡಿ, ಕೇಸರಿ ಶಾಲ್‌ಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿ ನಮ್ಮದು ತುಘಲಕ್ ಮಾದರಿ ಆಡಳಿತ ಎಂಬುದನ್ನು ಸರ್ಕಾರವೇ ಸಾಬೀತು ಪಡಿಸಿದೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ, ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅಲಭ್ಯತೆ ಮೊದಲಾದ ಪ್ರಮುಖ ವಿಷಯಗಳ ಕುರಿತು ತಲೆಕೆಡಿಸಿಕೊಳ್ಳದ ಈ ಸರ್ಕಾರ ವಿದ್ಯಾರ್ಥಿಗಳಲ್ಲಿ ಪ್ರತ್ಯೇಕತೆ ಮೂಡಿಸುವ ಕೃತ್ಯಕ್ಕೆ ಕೈಹಾಕಿದೆ. ಇಂತಹ ಮಿತಿ ಮೀರಿದ ಓಲೈಕೆಯಿಂದಲೇ ದೇಶದೆಲ್ಲೆಡೆ ಕಾಂಗ್ರೆಸ್ ಧೂಳೀಪಟವಾಗುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಕಸದ ಬುಟ್ಟಿ ಸೇರಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.