ಮಹಾ ಮಳೆ, ಬಿರುಗಾಳಿಗೆ ನಲುಗಿದ ಹುಬ್ಬಳ್ಳಿ

KannadaprabhaNewsNetwork |  
Published : May 19, 2026, 02:00 AM IST
ಹುಬ್ಬಳ್ಳಿ ಚೇತನಾ ಕಾಲೇಜು ಎದುರು ಮಳೆಯಿಂದಾಗಿ ರಸ್ತೆಯಲ್ಲಿ ನಿಂತಿರುವ ನೀರಿನಲ್ಲಿಯೇ ವ್ಯಾಪಾರಿಯೋರ್ವ ಪಾನಿಪುರಿ ಮಾರುತ್ತಿರುವುದು. | Kannada Prabha

ಸಾರಾಂಶ

ಭಾನುವಾರ ಸಂಜೆ ಸುರಿದ ಮಹಾಮಳೆಯಿಂದ ಅಕ್ಷರಶಃ ನಲುಗಿದ್ದ ಸುಧಾರಿಸಿಕೊಳ್ಳುವ ಮುನ್ನವೇ ಸೋಮವಾರ ಸುರಿದ ರಭಸದ ಮಳೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಹುಬ್ಬಳ್ಳಿ:

ಭಾನುವಾರ ಸಂಜೆ ಸುರಿದ ಮಹಾಮಳೆಯಿಂದ ಅಕ್ಷರಶಃ ನಲುಗಿದ್ದ ಸುಧಾರಿಸಿಕೊಳ್ಳುವ ಮುನ್ನವೇ ಸೋಮವಾರ ಸುರಿದ ರಭಸದ ಮಳೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಮಳೆ-ಗಾಳಿ ಆರ್ಭಟಕ್ಕೆ 25ಕ್ಕೂ ಅಧಿಕ ಮರ ಧರೆಗುರುಳಿದರೆ, 10ಕ್ಕೂ ಅಧಿಕ ಮನೆ, ಎರಡು ಕಾರು, 10ಕ್ಕೂ ಬೈಕ್‌ ಜಖಂ ಆಗಿವೆ. ಹತ್ತಾರು ಕಡೆ ವಿದ್ಯುತ್‌ ಕಂಬಗಳು ಬಿದ್ದಿದ್ದು ವಿದ್ಯುತ್‌ ಇಲ್ಲದೆ ಜನರು ಪರದಾಡಿದರು.

ಎಲ್ಲೆಲ್ಲಿ ಹಾನಿ?:ಕಾರವಾರಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಬೃಹತ್‌ ಮರ ಬಿದ್ದು ಅರ್ಧ ಗಂಟೆಗೂ ಹೆಚ್ಚುಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಪೊಲೀಸರೇ ಬಿದ್ದಿರುವ ಮರ ಪಕ್ಕಕ್ಕೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಐಬಿಎಂಆರ್‌ ಕಾಲೇಜು ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ಜಖಂ ಆದರೆ, ಬೇಸ್‌ ಕಾಲೇಜು ಬಳಿಯೂ ಬೃಹತ್‌ ಮರವೊಂದು ಆಟೋ, ಬೈಕ್‌ಗಳ ಮೇಲೆ ಬಿದ್ದಿದ್ದು, ಒಂದು ಆಟೋ, ಐದು ಬೈಕ್‌ಗೆ ಹಾನಿಯಾಗಿದೆ. ಕೆಎಂಸಿಆರ್‌ಐನ ಮುಖ್ಯಪ್ರವೇಶ ದ್ವಾರದ ಎದುರಿಗಿನ ಬೃಹತ್‌ ಫ್ಲೆಕ್ಸ್‌ ಹಾಗೂ ಮರವು ಧರೆಗುರುಳಿದೆ.

ನದಿಯಂತಾದ ಟೆಂಡರ್‌ ಶೂರ್‌ ರಸ್ತೆ:ಕೋಟ್ಯಂತರ ರುಪಾಯಿ ವ್ಯಯಿಸಿ ನಿರ್ಮಿಸಿದ ಟೆಂಡರ್‌ ಶೂರ್‌ ರಸ್ತೆ ಸೋಮವಾರ ಸುರಿದ ಮಳೆಗೆ ಅಕ್ಷರಶಃ ನದಿಯಾಗಿ ಮಾರ್ಪಟ್ಟಿತು. ಚರಂಡಿಯಲ್ಲಿ ಹರಿಯಬೇಕಿದ್ದ ಮಳೆ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ವಾಹನ ಸವಾರರು ಪರದಾಡಿದರು. ವಿನಾಯಕ ನಗರದಲ್ಲಿ ಕಾರ್ಯಕ್ರಮಕ್ಕೆ ಪೆಂಡಾಲ್‌ ಹಾರಿ ಹೋದರೆ, ರಾಜೇಂದ್ರ ನಗರದಲ್ಲಿ ವಿದ್ಯುತ್‌ ಕಂಬ ಬಾಗಿಕೊಂಡಿದೆ. ವಿದ್ಯಾನಗರ, ಭೈರಿದೇವರಕೊಪ್ಪ, ಗೋಕುಲ ರಸ್ತೆ, ಉಣಕಲ್ಲ ಸೇರಿದಂತೆ ಹಲವೆಡೆ 10ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಬಿದ್ದು 2 ಗಂಟೆಗೂ ಹೆಚ್ಚುಕಾಲ ವಿದ್ಯುತ್‌ ವ್ಯತ್ಯಯವಾಗಿದೆ. ರವಿ ನಗರದಲ್ಲಿ ಹಲವು ಅಪಾರ್ಟ್‌ಮೆಂಟ್‌ಗಳ ಪಾರ್ಕಿಂಗ್‌ ಸ್ಥಳಗಳಲ್ಲಿ 2 ಅಡಿಗೂ ಹೆಚ್ಚು ನೀರು ಸಂಗ್ರಹಗೊಂಡಿದೆ.

ರಸ್ತೆಯಲ್ಲಿಯೇ ನೀರು:ದುರ್ಗದಬೈಲ್‌, ಜನತಾ ಬಜಾರ, ದಾಜಿಬಾನಪೇಟೆ, ಗಾಂಧಿ ಮಾರ್ಕೇಟ್‌, ಉಣಕಲ್ಲ ಕ್ರಾಸ್‌, ನವನಗರ, ಕೋರ್ಟ್‌ ವೃತ್ತ, ಆನಂದನಗರ ರಸ್ತೆಯ ಗಣೇಶ ನಗರ, ಲ್ಯಾಮಿಂಗ್ಟನ್ ರಸ್ತೆ, ಹಳೇಹುಬ್ಬಳ್ಳಿ, ಆನಂದನಗರ ಶ್ರೀನಗರ ಕ್ರಾಸ್ ಸೇರಿದಂತೆ ಹಲವೆಡೆ ಅಪಾರ ಪ್ರಮಾಣದ ನೀರು ರಸ್ತೆ ನಿಂತು ಜನರು ತೊಂದರೆ ಅನುಭವಿಸಿದರು. ಆನಂದ ನಗರ, ಅಯೋಧ್ಯಾ ನಗರ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು ಹೊರಹಾಕಲು ಜನರು ಹರಸಾಹಸ ಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೇಶ್ವರದಲ್ಲಿ ಮಳೆಗಾಳಿಗೆ ನೆಲಕ್ಕುರುಳಿದ ಮಾವಿನ ಫಸಲು
ಅಂತರ ರಾಜ್ಯ ಕಳ್ಳರ ಭೇಟೆ: ₹ 1.15 ಕೋಟಿ ಮೌಲ್ಯ ವಸ್ತು ವಶ