ಮೊಳಕಾಲ್ಮೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ!

KannadaprabhaNewsNetwork |  
Published : May 19, 2026, 02:00 AM IST
ಪೋಟೋ ವಿವರಣೆ ಮೊಳಕಾಲ್ಮೂರು ಪಟ್ಟಣದ ಪದವಿ ಪೂರ್ವ ಕಾಲೇಜು. | Kannada Prabha

ಸಾರಾಂಶ

ಬಡ ವಿದ್ಯಾರ್ಥಿಗಳು ಶಿಕ್ಷಣಿಕ ಭವಿಷ್ಯ ಭದ್ರ ಪಡಿಸಿಕೊಳ್ಳಲು ಹೆಣಗಾಡುವ ಸ್ಥಿತಿ

ಬಿಜಿಕೆರೆ ಬಸವರಾಜ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಬಯಲು ಸೀಮೆಯ ಗಡಿ ನಾಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಖಾಯಂ ಉಪನ್ಯಾಸಕರಿಲ್ಲದೆ ಸೊರಗುತ್ತಿದೆ.

ಉನ್ನತ ಶಿಕ್ಷಣದ ಕನಸು ಹೊತ್ತ ಸಾವಿರಾರು ಬಡ ವಿದ್ಯಾರ್ಥಿಗಳು ಶಿಕ್ಷಣಿಕ ಭವಿಷ್ಯ ಭದ್ರ ಪಡಿಸಿಕೊಳ್ಳಲು ಹೆಣಗಾಡುವ ಸ್ಥಿತಿ ಎದುರಾಗಿದ್ದು ಸ್ಥಳೀಯ ಆಡಳಿತಕ್ಕೆ ಹಿಡಿದ ಕೈಗನ್ನಡಿಯಂತಿದೆ ಹೇಳಿ ಕೇಳಿ ಮೊಳಕಾಲ್ಮೂರು ಬಡ ತಾಲೂಕು ಸಾಮಾಜಿಕವಾಗಿ, ಶೈಕ್ಷಣವಾಗಿ, ಆರ್ಥಿಕವಾಗಿ ಅತ್ಯಂತ ಹಿಂದುಳಿದ ನತದೃಷ್ಟ ಬರದ ನಾಡು ಇಂತಹ ತಾಲೂಕು ಕೇಂದ್ರ ಸ್ಥಾನದ ಸರ್ಕಾರಿ ಪದವಿಪೂರ್ವ ಕಾಲೇಜು ಶೇ.75ರಷ್ಟು ಖಾಯಂ ಉಪನ್ಯಾಸಕರ ಕೊರತೆ ಎದುರಿಸುತ್ತಿದೆ.

ದಶಕದ ಸಮಸ್ಯೆಗೆ ಪೂರ್ಣ ವಿರಾಮವಿಲ್ಲದಾಗಿದ್ದು ಬಡ ವಿದ್ಯಾರ್ಥಿಗಳು ಇಲ್ಲಿನ ಕಾಲೇಜಿಗೆ ದಾಖಲಾಗಲು ಹಿಂದೇಟು ಹಾಕುವಂತಾಗಿದೆ. ಕಾಲೇಜಿನಲ್ಲಿ ವಿಜ್ಞಾನ, ಕಲಾ, ವಾಣಿಜ್ಯ, ಎಬಿಎಇಎಸ್ಎಂಬ ನಾಲ್ಕು ವಿಭಾಗಗಳಿವೆ. ಈ ನಾಲ್ಕು ವಿಭಾಗಕ್ಕೂ ಕೇವಲ ನಾಲ್ಕು ಜನ ಖಾಯಂ ಉಪನ್ಯಾಸಕರು ಮಾತ್ರ ಇಲ್ಲಿದ್ದಾರೆ. ಉಳಿದಂತೆ ಬಹುತೇಕ ಅಥಿತಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ.

ಇಲ್ಲಿ ಮಂಜೂರಾಗಿರುವ 15 ಉಪನ್ಯಾಸಕರ ಪೈಕಿ ಕೇವಲ ನಾಲ್ವರು ಮಾತ್ರ ಖಾಯಂ ಉಪನ್ಯಾಸಕರಿದ್ದಾರೆ. ಉಳಿದಂತೆ 11 ಜನ ಅಥಿತಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು

ವಿಭಾಗವಾರು ತರಗತಿಗಳಲ್ಲಿ ವಿಷಯಗಳನ್ನು ಸರಿದೂಗಿಸಿ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ.

ಕಳೆದ ಒಂದು ದಶಕದಿಂದ ಇಲಾಖೆ ಉಪನ್ಯಾಸಕರ ನೇಮಕ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ. ಪ್ರತಿ ಬಾರಿ ಕಾಯಂ ಉಪನ್ಯಾಸಕರಿಲ್ಲದಿದ್ದರೂ ಕಡಿಮೆ ಗೌರವಧನಕ್ಕೆ ದುಡಿಯುವ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಂಡು ಕಲಿಕೆ ಸರಿದೂಗಿಸುವ ಯತ್ನ ಮಾಡಲಾಗುತ್ತದೆ ಇದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.

ಬಹುತೇಕ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಬಡ ಸಮುದಾಯಗಳೇ ಹೆಚ್ಚಾಗಿ ವಾಸಿಸುವ ಇಲ್ಲಿನ ಪೋಷಕರಿಗೆ ಖಾಸಗಿ ಕಾಲೇಜುಗಳ ದುಬಾರಿ ಡೊನೇಷನ್ ಮತ್ತು ಶುಲ್ಕ ಕಟ್ಟಿ ಮಕ್ಕಳನ್ನು ಓದಿಸುವ ಶಕ್ತಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಡವರ ಮಕ್ಕಳಿಗೆ ಆಸರೆಯಾಗಬೇಕಿದ್ದ ಸರ್ಕಾರಿ ಕಾಲೇಜೇ ಈಗ ಉಪನ್ಯಾಸಕರಿಲ್ಲದೆ ಕತ್ತಲಲ್ಲಿ ತಡಕಾಡುತ್ತಿದ್ದರೂ ಸಂಬಂಧಿಸಿದ ಇಲಾಖೆ ಕಣ್ಮುಚ್ಚಿ ಕುಳಿತಿದೆ.

ಕಾಯಂ ಉಪನ್ಯಾಸಕರಿಲ್ಲದೆ ವಿಷಯಗಳ ಆಳವಾದ ಬೋಧನೆ ಮತ್ತು ಪ್ರಾಯೋಗಿಕ (Practical) ತರಗತಿಗಳಿಗೆ ಹಿನ್ನಡೆಯಾಗುತ್ತಿದೆ. ತಾಲೂಕು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಶಿಕ್ಷಣ ಕ್ಷೇತ್ರ ಗಟ್ಟಿಯಾಗಿರಬೇಕು. ಆದರೆ ಇಲ್ಲಿನ ಕಾಲೇಜಿನಲ್ಲಿ

ದಶಕದಿಂದ ನೇಮಕಾತಿ ಪ್ರಕ್ರಿಯೆ ನಡೆಯದೆ ಇಡೀ ತಾಲೂಕಿನ ಶೈಕ್ಷಣಿಕ ಗ್ರಾಫ್ ಕುಸಿಯುತ್ತಿದೆ. ಸರ್ಕಾರಿ ಕಾಲೇಜುಗಳನ್ನು ನಂಬಿದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಕೇವಲ ಎರಡು ಸರ್ಕಾರಿ ಕಾಲೇಜುಗಳಿದ್ದು ಬಹುತೇಕ ಖಾಸಗಿ ಕಾಲೇಜುಗಳೇ ಹೆಚ್ಚಾಗಿವೆ. ಇಲ್ಲಿ ದುಬಾರಿ ಶುಲ್ಕ ಕಟ್ಟುವಷ್ಟು ಶಕ್ತಿ ಇಲ್ಲಿನ ಜನರಿಗಿಲ್ಲ ಇಂಥ ಸ್ಥಿತಿಯಲ್ಲಿ ಸರ್ಕಾರಿ ಕಾಲೇಜಿಗೆ ಸೂಕ್ತ ಉಪನ್ಯಾಸಕರು ಕಾಲೇಜು ಇದ್ದೂ ಇಲ್ಲದಂತಾಗಿದೆ.

ಕಡಿಮೆ ಗೌರವಧನದ ನಡುವೆಯೂ ಪ್ರಾಮಾಣಿಕವಾಗಿ ದುಡಿಯುತ್ತಿರುವ ಅತಿಥಿ ಉಪನ್ಯಾಸಕರನ್ನು ಸರ್ಕಾರ ಪ್ರತಿ ವರ್ಷ ನೇಮಕಾತಿಯನ್ನು ತಡವಾಗಿ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಆರಂಭದ ದಿನಗಳು ವ್ಯರ್ಥವಾಗುತ್ತಿವೆ.

ದೀರ್ಘಕಾಲೀನ ಶೈಕ್ಷಣಿಕ ಯೋಜನೆಗಳನ್ನು ರೂಪಿಸಲು ಸಾಧ್ಯವಾಗದೇ ಇರುವ ಖಾಯಂ ಉಪನ್ಯಾಸಕರು ಹೈರಾಣಾಗುತ್ತಿದ್ದಾರೆ.

ಇನ್ನು ಹೆಣ್ಣುಮಕ್ಕಳ ಸ್ಥಿತಿಯಂತೂ ಹೇಳತೀರದಾಗಿದೆ. ಉಪನ್ಯಾಸಕರ ಕೊರತೆಯಿಂದ ಕಾಲೇಜಿಗೆ ದಾಖಲು ಮಾಡಲಾಗದೆ. ದೂರದ ಊರುಗಳಿಗೆ ಕಳುಹಿಸಲು ಆಗದೆ ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ವೆಚ್ಚ ಭರಿಸಲಾಗದ ಬಡ ಪೋಷಕರು, ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಿದ್ದಾರೆ ಇದು ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳು ಮರುಕಳಿಸಲು ಕಾರಣವಾಗುತ್ತಿದೆ.

ಈಗಾಗಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡು ದಿನಗಳು ಕಳೆದು ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗುವ ದಿನಗಳು ಹತ್ತಿರವಾಗುತ್ತಿವೆ. ದಾಖಲಾತಿಗಳು ಆರಂಭಗೊಳ್ಳುತ್ತಿವೆ. ಇನ್ನಾದರೂ ಸರ್ಕಾರ ಇಲ್ಲಿನ ಸರ್ಕಾರಿ ಕಾಲೇಜಿಗೆ ಕಾಯಂ ಉಪನ್ಯಾಸಕರನ್ನು ನೇಮಕ ಮಾಡಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೇಶ್ವರದಲ್ಲಿ ಮಳೆಗಾಳಿಗೆ ನೆಲಕ್ಕುರುಳಿದ ಮಾವಿನ ಫಸಲು
ಅಂತರ ರಾಜ್ಯ ಕಳ್ಳರ ಭೇಟೆ: ₹ 1.15 ಕೋಟಿ ಮೌಲ್ಯ ವಸ್ತು ವಶ