ಮಳೆ ಅಬ್ಬರ: ಕೊಚ್ಚಿಹೋದ ತಾತ್ಕಾಲಿಕ ಸೇತುವೆ

KannadaprabhaNewsNetwork |  
Published : Jun 16, 2025, 02:32 AM IST
ಖಾನಾಪುರ ತಾಲೂಕಿನ ಕುಸಮಳಿ ಗ್ರಾಮದ ಬಳಿ ತಾತ್ಕಾಲಿಕ ಸೇತುವೆ ನೀರಿನಲ್ಲಿ ಕೊಚ್ಚಿಹೋಗಿರುವುದು | Kannada Prabha

ಸಾರಾಂಶ

ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಶನಿವಾರ ರಾತ್ರಿಯಿಡೀ ಮಳೆ ಆಗಿದೆ. ಮಳೆ ಜೊತೆಗೆ ತಂಪಿನ ವಾತಾವರಣ ಕೂಡ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಅಬ್ಬರ ಜೋರಾಗಿದೆ. ಖಾನಾಪುರ ತಾಲೂಕಿನ ಕುಸಮಳಿ ಗ್ರಾಮದ ತಾತ್ಕಾಲಿಕ ಸೇತುವೆ ನೀರಿನಲ್ಲಿ ಕೊಚ್ಚಿಹೋಗಿದೆ. ಇದರಿಂದಾಗಿ ಬೆಳಗಾವಿ-ಗೋವಾ ರಸ್ತೆ ಸಂಚಾರ ಸಂಪೂರ್ಣ ಬಂದ್‌ ಆಗಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿಯಲ್ಲಿ ಒಳ‌ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ತಾತ್ಕಾಲಿಕ ಸೇತುವೆ ನೀರಿನಲ್ಲಿ ಕೊಚ್ಚಿಹೋಗಿದೆ. ಬೆಳಗಾವಿ-ಗೋವಾ ಸಂಪರ್ಕಿಸುವ ಹೆದ್ದಾರಿ ಮತ್ತೆ ಸಂಪೂರ್ಣವಾಗಿ ಬಂದ್‌ ಆಗಿದೆ. ಖಾನಾಪುರ ತಾಲೂಕಿನ ಕಣಕುಂಬಿ ಮಲಪ್ರಭಾ ನದಿ ಉಗಮ ಸ್ಥಾನ. ಇದೇ ಮಾರ್ಗದಲ್ಲಿ ಬರುವ ಕುಸಮಳಿ ಗ್ರಾಮದ ಬಳಿ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ನಡೆಯುತ್ತದೆ. ಏಕಾಏಕಿ ನೀರು ಹೆಚ್ಚಳ ಆಗಿ, ಮಣ್ಣಿನ ರಸ್ತೆ ಕೊಚ್ಚಿ ಹೋಗಿದ್ದರಿಂದ ಸಂಚಾರ ಸ್ಥಗಿತಗೊಂಡಿದೆ.

ಬೆಳಗಾವಿ-ಜಾಂಬೋಟಿ, ಚೋರ್ಲಾ ಮಾರ್ಗವಾಗಿ ಗೋವಾಕ್ಕೆ ಸಂಪರ್ಕಿಸುವ ಹೆದ್ದಾರಿ ಇದಾಗಿದೆ. ಹಳೆ ಸೇತುವೆ ಕೆಡವಿ ಹೊಸ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ನದಿಯಲ್ಲಿ ಮಣ್ಣಿನ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಲಾಗಿತ್ತು. ನೀರಿನ ಹರಿವು ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ರಸ್ತೆ ಕೊಚ್ಚಿ ಹೋಗಿದೆ. ನಿರ್ಮಾಣ ಹಂತದ ಸೇತುವೆ ಕೂಡ ಭಾಗಶಃ ಮುಳುಗಡೆಯಾಗಿದೆ. ಮಳೆಗಾಲ ಮುಗಿಯುವವರೆಗೂ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ. ಬೆಳಗಾವಿ, ಖಾನಾಪುರ, ರಾಮನಗರ ಮಾರ್ಗವಾಗಿ ವಾಹನ ಸವಾರರು ಗೋವಾಗೆ ತೆರಳುತ್ತಿದ್ದಾರೆ.

ಈ ಸೇತುವೆ ಕುಸಿಯುವ ಕೆಲವೇ ಸೆಕೆಂಡ್​​ ಹಿಂದೆ ಬಸ್ ಪಾಸ್ ಆಗಿದೆ. ಅದೃಷ್ಟವಶಾತ್ ಬಸ್ ದಾಟಿದ ಬಳಿಕ ಸೇತುವೆ ನದಿಗೆ ಕೊಚ್ಚಿ ಹೋಗಿದೆ. ಮಲಪ್ರಭಾ ನದಿಯ ಒಳಹರಿವು ಹೆಚ್ಚಾಗಿದ್ದರಿಂದ ಸೇತುವೆ ಕೊಚ್ಚುಕೊಂಡು ಹೋಗಿದೆ. ಜಾಂಬೋಟಿ, ಕಣಕುಂಬಿ ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಇದರಿಂದ ಅಕ್ಕಪಕ್ಕದ ಗ್ರಾಮಸ್ಥರು, ಸವಾರರು ಪರದಾಡುತ್ತಿದ್ದಾರೆ.

ಬೆಳಗಾವಿಯಲ್ಲಿ ಧಾರಾಕಾರ ಮಳೆ:

ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಶನಿವಾರ ರಾತ್ರಿಯಿಡೀ ಮಳೆ ಆಗಿದೆ. ಮಳೆ ಜೊತೆಗೆ ತಂಪಿನ ವಾತಾವರಣ ಕೂಡ ನಿರ್ಮಾಣವಾಗಿದೆ.

ಮಳೆ ಅಬ್ಬರ ಜೋರಾಗಿದ್ದರಿಂದ ರಸ್ತೆಯ ಇಕ್ಕೆಲ್ಲಗಳಲ್ಲಿ ನೀರು ತುಂಬಿ ಹರಿಯಿತು. ಚರಂಡಿಗಳು ಮಣ್ಣಿನಲ್ಲಿ ಮುಚ್ಚಿದ್ದರಿಂದ ರಸ್ತೆಗಳ ಮೇಲೆಯೇ ನೀರು ಹರಿಯತು. ಇದರಿಂದಾಗಿ ರಸ್ತೆಗಳು ನದಿಗಳಂತೆ ಭಾಸವಾದವು. ಬೀದಿ ಬದಿಯ ತರಕಾರಿ ವ್ಯಾಪಾರಸ್ಥರು ತೀವ್ರ ತೊಂದರೆ ಎದುರಿಸಬೇಕಾಯಿತು. ಮಳೆ ನೀರಿನಲ್ಲಿ ತರಕಾರಿ ಕೊಚ್ಚಿಕೊಂಡು ಹೋಯಿತು. ಸುರಿಯುತ್ತಿರುವ ಮಳೆಯಲ್ಲೇ ಜನರು ಛತ್ರಿಗಳ ಆಸರೆಯಲ್ಲಿ ಹೋಗುತ್ತಿರುವುದು ಸಾಮಾನ್ಯವಾಗಿತ್ತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ನಾಗರಿಕರು ತೀವ್ರ ತೊಂದರೆ ಎದುರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ಸಲ್ಲಿ ಯತೀಂದ್ರ ಕಿಚ್ಚು : '5 ವರ್ಷವೂ ನಮ್ಮ ತಂದೆ ಸಿಎಂ, ಇದು ಈಗ ಸೆಟಲ್ಡ್‌ ವಿಚಾರ'