ಭಾರೀ ಮಳೆ: ಗುಡಿಸಲ ಮೇಲೆ ಮರ ಬಿದ್ದು ಪತ್ನಿಗೆ ಗಾಯ, ಪತಿ ಪ್ರಾಣಾಪಾಯದಿಂದ ಪಾರು

KannadaprabhaNewsNetwork |  
Published : Jun 01, 2026, 01:45 AM IST
31ಕೆಎಂಎನ್ ಡಿ22,23 | Kannada Prabha

ಸಾರಾಂಶ

ಮದ್ದೂರು ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶನಿವಾರ ರಾತ್ರಿ ಬಿರುಗಾಳಿ ಸಹಿತ ಬಿದ್ದ ಭಾರೀ ಮಳೆಯಿಂದಾಗಿ ದಂಪತಿ ವಾಸಿಸುತ್ತಿದ್ದ ಗುಡಿಸಲ ಮೇಲೆ ಮರವೊಂದು ಉರುಳಿಬಿದ್ದು ಪತ್ನಿ ಗಾಯಗೊಂಡು, ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮದ್ದೂರಮ್ಮ ದೇವಸ್ಥಾನದ ಆರ್ಚ್ ಬಳಿ ಜರುಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶನಿವಾರ ರಾತ್ರಿ ಬಿರುಗಾಳಿ ಸಹಿತ ಬಿದ್ದ ಭಾರೀ ಮಳೆಯಿಂದಾಗಿ ದಂಪತಿ ವಾಸಿಸುತ್ತಿದ್ದ ಗುಡಿಸಲ ಮೇಲೆ ಮರವೊಂದು ಉರುಳಿಬಿದ್ದು ಪತ್ನಿ ಗಾಯಗೊಂಡು, ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮದ್ದೂರಮ್ಮ ದೇವಸ್ಥಾನದ ಆರ್ಚ್ ಬಳಿ ಜರುಗಿದೆ.

ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕದಳದ ತಂಡ ಮರದ ಅಡಿಯಲ್ಲಿ ಸಿಲುಕಿದ್ದ ಪತ್ನಿಯನ್ನು ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಹೊರ ತೆಗೆದು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಗುಡಿಸಲಿನಲ್ಲಿ ಸಿಲುಕಿದ್ದ ಭಾಗ್ಯಮ್ಮ (58) ಎಂಬುವರೇ ಗಾಯಗೊಂಡವರಾಗಿದ್ದು, ಈಕೆಯ ಪತಿ ರಾಜೀವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜೀವ್ ಮತ್ತು ಭಾಗ್ಯಮ್ಮ ವಾಸಿಸುತ್ತಿದ್ದ ಗುಡಿಸಲಿನ ಮೇಲೆ ಮರ ಬಿದ್ದ ರಭಸಕ್ಕೆ ರೆಂಬೆ ಮುರಿದು ಭಾಗ್ಯಮ್ಮಳ ಎದೆಗೆ ತೀವ್ರವಾಗಿ ಗಾಯಗಳಾಗಿತ್ತು. ನಂತರ ಆಕೆಯನ್ನು ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಗ್ನಿ ಶಾಮಕದಳದ ಅಧಿಕಾರಿ ವಿ.ಕೃಷ್ಣಪ್ಪ, ಯಮನಪ್ಪ ಕರಿಕಟ್ಟೆ, ಮಾದೇಗೌಡ, ಉತ್ತಮ್, ರಾಜೀವ್, ಜಗದೀಶ್, ಬಾಬು ಅವರುಗಳು ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದಾಗಿ ಗುಡಿಸಲಿನಲ್ಲಿದ್ದ ದಿನಬಳಕೆ ವಸ್ತುಗಳಿಗೆ ಹಾನಿಯಾಗಿದೆ.

ಬಿರುಗಾಳಿ ಮಳೆಯಿಂದಾಗಿ ಪಟ್ಟಣದ ಲೀಲಾವತಿ ಬಡಾವಣೆಯ 1ನೇ ಕ್ರಾಸ್‌ನಲ್ಲಿ ವಾಸವಾಗಿರುವ ಮೆಕ್ಯಾನಿಕ್ ಮಂತ್ ಮನೆ ಸೇರಿದಂತೆ ಅಕ್ಕ ಪಕ್ಕದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ವಿದ್ಯುತ್ ಉಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳು ಲಕ್ಷಾಂತರ ರು. ಹಾನಿ ಸಂಭವಿಸಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.

ಸೋಮೇಗೌಡರ ಬೀದಿ, ಮುಸ್ಲಿಂ ಬ್ಲಾಕ್, ವಿವಿ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ 10ಕ್ಕೂ ಹೆಚ್ಚು ಕಂಬಗಳು ಧರೆಗುರುಳಿದಿವೆ. ಇದರಿಂದ 2 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

ತಾಲೂಕಿನ ನಗರಕೆರೆ, ಮಾಲಗಾರನಹಳ್ಳಿ ನಡುವೆ ಕೆಮ್ಮಣ್ಣು ನಾಲೆ ಆಧುನೀಕರಣ ಕಾರ್ಯಕ್ಕೆ ಅಗೆಯಲಾಗಿದ್ದ ಮಣ್ಣು ಮಳೆಯಿಂದಾಗಿ ಕುಸಿದು ವಿದ್ಯುತ್ ಪರಿವರ್ತಕ (ಟಿಸಿ)ಕ್ಕೆ ಹಾನಿಯಾಗಿದೆ. ಇದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ವಿಕಸಿತ ಭಾರತ’ಕ್ಕಾಗಿ ಸಂಕಲ್ಪಿಸಿ: ರಾಧಾಕೃಷ್ಣನ್‌
ಬಳ್ಳಾವರ ಗಂಗೂರು ಗ್ರಾಮಗಳ ಸುತ್ತ ನಿಲ್ಲದ ಕಾಡಾನೆಗಳ ಕಾಟ