ಕಾರವಾರ: ಜಿಲ್ಲೆಯ ಬಹುತೇಕ ಕಡೆ ಮಳೆ ಮುಂದುವರಿದಿದೆ. ವ್ಯಾಪಕ ಮಳೆ ಹಾಗೂ ಗೇರುಸೊಪ್ಪ ಜಲಾಶಯದಿಂದ ನೀರನ್ನು ಹೊರಬಿಟ್ಟ ಪರಿಣಾಮ ಹೊನ್ನಾವರ ತಾಲೂಕಿನ ಶರಾವತಿ ನದಿ ಗುಂಟ ನೂರಾರು ಮನೆಗಳು, ತೋಟ, ಹೊಲಗದ್ದೆಗಳು ಜಲಾವೃತಗೊಂಡಿವೆ. 15 ಕಾಳಜಿ ಕೇಂದ್ರಗಳಲ್ಲಿ 129 ಕುಟುಂಬಗಳ 368 ಜನರಿಗೆ ಆಶ್ರಯ ನೀಡಲಾಗಿದೆ. ಒಂದು ಮನೆಗೆ ಸಂಪೂರ್ಣ ಹಾನಿ ಉಂಟಾಗಿದೆ.
ಹೊನ್ನಾವರ ತಾಲೂಕಿನ ಶರಾವತಿ, ಭಾಸ್ಕೇರಿ, ಗುಂಡಬಾಳ ನದಿಗಳ ತೀರದ ಜನತೆಯನ್ನು 15 ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ 158 ಪುರುಷರು, 169 ಮಹಿಳೆಯರು, 42 ಮಕ್ಕಳು ಸೇರಿದಂತೆ ಒಟ್ಟು 368 ಜನರು ಆಶ್ರಯ ಪಡೆದಿದ್ದಾರೆ.
ಭಟ್ಕಳದಲ್ಲಿ ಸುರಿಯ ಭಾರಿ ಮಳೆಯಿಂದ ಉತ್ತರಕೊಪ್ಪದ ಅಡಕೆ ತೋಟ ಜಲಾವೃತವಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಯ ಮೇಲೂ ನೀರು ನುಗ್ಗಿತ್ತು. ಕುಮಟಾ ತಾಲೂಕಿನ ಮಾದನಗೇರಿಯಲ್ಲಿ ರಸ್ತೆಯ ಮೇಲೆ ನೀರು ಪ್ರವಹಿಸಿ ಎರಡು ಗಂಟೆ ಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಗೋಕರ್ಣಕ್ಕೆ ತೆರಳುವ ಪ್ರವಾಸಿಗರು, ಭಕ್ತರು ಪರದಾಡುವಂತಾಯಿತು.ಅಘನಾಶಿನಿ ಹಾಗೂ ಚಂಡಿಕಾ ನದಿಗಳ ನೀರಿನ ಮಟ್ಟವೂ ಹೆಚ್ಚಳವಾಗಿ ಆತಂಕ ಉಂಟಾಗಿತ್ತು. ಶುಕ್ರವಾರ ಮಧ್ಯಾಹ್ನದ ತರುವಾಯ ಮಳೆ ಕಡಿಮೆಯಾಗಿದ್ದರಿಂದ ನೀರು ಇಳಿಮುಖವಾಗುತ್ತಿದೆ.
ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯಿಂದ ನಂತರದ 24 ಗಂಟೆಗಳಲ್ಲಿ ಉಂಟಾದ ಮಳೆಯ ಪ್ರಮಾಣ ಮಿಲಿ ಮೀಟರ್ ಗಳಲ್ಲಿ ಹೀಗಿದೆ.ಅಂಕೋಲಾದಲ್ಲಿ 31.3, ಮಿಮೀ, ಭಟ್ಕಳದಲ್ಲಿ 146.9, ಹಳಿಯಾಳ 1.8, ಹೊನ್ನಾವರ 113.4, ಕಾರವಾರ 25.2, ಕುಮಟಾ 80.2, ಮುಂಡಗೋಡ 4.4, ಸಿದ್ದಾಪುರ 59.4, ಶಿರಸಿ 32.1, ಜೋಯಿಡಾ 10.9, ಯಲ್ಲಾಪುರ 8.8, ದಾಂಡೇಲಿಯಲ್ಲಿ 2.7, ಮಿಲಿ ಮೀಟರ್ ಮಳೆ ಸುರಿದಿದೆ.