ಕೊಪ್ಪಳ:
ಅಲೆಮಾರಿ, ಬುಡ್ಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ಒಳಮೀಸಲಾತಿ ನೀಡುವಂತೆ ಆಗ್ರಹಿಸಿ ರಾಜ್ಯ ಎಸ್ಸಿ, ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಯುದ್ದಕ್ಕೂ ಹಗಲು ವೇಷಧಾರಿಗಳು ರಾಮ, ಆಂಜನೇಯ, ಕೃಷ್ಣ, ರಾಕ್ಷಸರು ಸೇರಿದಂತೆ ರಾಮಾಯಣ, ಮಹಾಭಾರತದ ವೇಷ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಅಲೆಮಾರಿಗಳು, ಹಗಲು ವೇಷಧಾರಿಗಳು ಸೇರಿದಂತೆ ವಿವಿಧ ಕಸಬು ಮಾಡುತ್ತಿರುವವರು ಜಂಟಿಯಾಗಿ ತಮ್ಮ ಮೂಲವೃತ್ತಿಯ ವೇಷದಲ್ಲಿಯೇ ಪ್ರತಿಭಟನೆ ಮಾಡಿದರು. ಮೆರವಣಿಗೆಯುದ್ದಕ್ಕೂ ಈ ರೀತಿಯ ವೇಷಭೂಷಣಗಳು ವಿಶೇಷ ಆಕರ್ಷಕವಾಗಿದ್ದವು.ಆಕ್ರೋಶ:
ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಒಳಮೀಸಲಾತಿ ಜಾರಿಯಲ್ಲಿ ಅನ್ಯಾಯವಾಗಿದೆ. ಪ್ರತ್ಯೇಕವಾಗಿ ನೀಡಬೇಕಾಗಿದ್ದ ಶೇ. 1ರಷ್ಟು ಮೀಸಲಾತಿ ಕೈಬಿಟ್ಟು, ಸ್ಪರ್ಶ ಸಮುದಾಯದ ಪ್ರ-ವರ್ಗದಲ್ಲಿ ಸೇರಿಸಲಾಗಿದೆ. ಇದರಿಂದ ನಮಗೆ ಮತ್ತೆ ಪೈಪೋಟಿಯೊಡ್ಡಿ ಮೀಸಲಾತಿ ಪಡೆಯಲು ಸಾಧ್ಯವೇ ಇಲ್ಲ. ಹೀಗಾಗಿ, ನಮಗೆ ಆಯೋಗ ವರದಿ ಮಾಡಿದಂತೆ ಪ್ರತ್ಯೇಕವಾಗಿ ಶೇ. 1ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿದರು. ನಗರದುದ್ದಕ್ಕೂ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ತಾಳ್ಮೆಗೂ ಮಿತಿ ಇದೆ. ಇಂಥ ಅನ್ಯಾಯ ಸರಿಪಡಿಸಿಕೊಂಡು ಇರಲು ಸಾಧ್ಯವೇ ಇಲ್ಲ. ಕೂಡಲೇ ಪರಿಷ್ಕರಣೆ ಮಾಡಿ ನಮಗೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಒತ್ತಾಯಿಸಿದ ಸಮುದಾಯದ ಮುಖಂಡರು, ನಮಗೆ ಅನ್ಯಾಯವಾಗಿದ್ದನ್ನು ಈಗಾಗಲೇ ಅನೇಕ ಸಮುದಾಯಗಳು ಬೆಂಬಲಿಸಿ ಹೋರಾಟ ಮಾಡಿವೆ. ರಾಜ್ಯಾದ್ಯಂತ ಅನೇಕರು ನಮ್ಮ ಹೋರಾಟ ಬೆಂಬಲಿಸಿದ್ದಾರೆ. ಸರ್ಕಾರ ಕೂಡಲೇ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೇ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಗತಿಪರ ಸಂಘಟನೆಯ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ರಾಮಲಿಂಗಯ್ಯ ಶಾಸ್ತ್ರಿಮಠ, ಬಸವರಾಜ ವಿಭೂತಿ, ಶಿವಣ್ಣ ಕಲಕೇರಿ, ದ್ಯಾಮಣ್ಣ ಪರಿಯಾರ, ವೆಂಕಟೇಶ ಗಾದಿ, ಯಲ್ಲಪ್ಪ ಗಂಟಿ, ಹನುಮಂತ ಗಟ್ಟಿ, ಕಾಶಪ್ಪ ಛಲವಾದಿ, ಗಣೇಶ ಹೊರತಟ್ನಾಳ, ಮಲ್ಲು ಪೂಜಾರ, ಸಂಜಯದಾಸ ಕೌಜಗೇರಿ, ಸೋಮು ಕಲಕೇರಿ, ಶಿವು ಗಂಗಾವತಿ ಸೇರಿದಂತೆ ಬುಡುಗ ಜಂಗಮ, ಸುಡಗಾಡ ಸಿದ್ದರು, ಚನ್ನದಾಸರು, ಹೊಲೆಯ ದಾಸರು ಸೇರಿದಂತೆ ಇತರರು ಇದ್ದರು.ಬಿಜೆಪಿ ಬೆಂಬಲ... ರಾಜ್ಯ ಎಸ್ಸಿ-ಎಸ್ಟಿ ಅಲೇಮಾರಿ, ಬುಡಕಟ್ಟು ಸಂಘ ಪ್ರತ್ಯೇಕ ಒಳಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ ಹೊರತಟ್ನಾಳ ಹಾಗೂ ಮಂಜುನಾಥ ಮುಸ್ಲಾಪುರ ಬೆಂಬಲ ಸೂಚಿಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕೂಡಲೇ ಅಲೆಮಾರಿಗಳಿಗೆ ಮತ್ತು ಬುಡಕಟ್ಟು ಜನಾಂಗಕ್ಕೆ ಪ್ರತ್ಯೇಕ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.