ಗದಗ: ಸತತ 12 ದಿನಗಳಿಂದ ಜಿಲ್ಲಾಡಳಿತ ಭವನದ ಎದುರು ಉತ್ತರ ಕರ್ನಾಟಕ ಮಹಾಸಭಾದಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲೆಯ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ರೈತರ ಸಮಸ್ಯೆಯನ್ನು ಆಲಿಸದೇ ನಿರ್ಲಕ್ಷ್ಯ ವಹಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ವಿರುದ್ಧ ರೈತರು ಆಕ್ರೋಶ ವ್ಯಕ್ತ ಪಡಿಸಿದರು.
ಆ .19ರಂದು ಶಿರಹಟ್ಟಿಯ ಫಕೀರೇಶ್ವರ ಮಠದಿಂದ 30 ಕಿ.ಮೀ. ಪಾದಯಾತ್ರೆ ಮೂಲಕ ಜಿಲ್ಲಾಡಳಿತ ಕಚೇರಿ ತಲುಪಿದ ಬಳಿಕ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಅದೇ ರಸ್ತೆ ಮಾರ್ಗವಾಗಿ ಅಲ್ಲಿಯೇ ನಾಲ್ಕಾರು ಬಾರಿ ಪ್ರಯಾಣಿಸಿದರೂ ಮಾನವಿಯತೆ ಹಿತದೃಷ್ಟಿಯಿಂದ ಧರಣಿ ನಿರತ ರೈತರನ್ನು ಭೇಟಿಯಾಗದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ರೈತ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ರೈತರು ತಲೆತಲಾಂತರಗಳಿಂದ ಅರಣ್ಯ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಸರ್ಕಾರ ಹಕ್ಕುಪತ್ರ ನೀಡದೇ, ರೈತರಿಗೆ ಕಿರುಕುಳ ನೀಡುತ್ತಿದೆ, ಜೊತೆಗೆ ನಾಗಾವಿ ಗ್ರಾಮದಲ್ಲಿನ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ರೈತರು ಪೂರ್ವಜರ ಕಾಲದಿಂದ ಸಾಗುವಳಿ ಮಾಡುತ್ತಿದ್ದ ನೂರಾರು ಎಕರೆ ಕೃಷಿ ಭೂಮಿಯನ್ನು ಪರಿಹಾರ ನೀಡದೇ ಒಕ್ಕಲೇಬ್ಬಿಸಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಗೆ ಹಲವಾರು ರೈತ ಮುಖಂಡರು, ಹೋರಾಟಗಾರರು ಆಗಮಿಸಿ ತಮ್ಮ ಬೆಂಬಲ ಸೂಚಿಸಿದರು. ಹೋರಾಟದಲ್ಲಿ ಉತ್ತರಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ಅಖಿಲ ಕರ್ನಾಟಕ ಮಹಿಳಾ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷೆ ಮಹಾದೇವಿ ಹುಯಿಲಗೋಳ, ಎಂ.ಐ. ಮುಲ್ಲಾ, ಬೆಳದಡಿಯ ಕುಬೇರಪ್ಪ ಪವಾರ, ಎನ್.ಟಿ.ಪೂಜಾರ, ಚಂಬಣ್ಣ ಚನ್ನಪಟ್ಟಣ, ನಾಮದೇವ, ನಿಂಗಪ್ಪ, ಚನ್ನಪ್ಪ ಭಗತ, ಫಿರೋಜ ನದಾಫ ಸೇರಿದಂತೆ ಜಿಲ್ಲೆಯ ಹಲವು ರೈತರು, ಮಹಿಳೆಯರು ಹಾಗೂ ಇನ್ನಿತರರು ಇದ್ದರು.