ಗಣಿ ಜಿಲ್ಲೆಯಲ್ಲಿ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆ

KannadaprabhaNewsNetwork |  
Published : May 19, 2025, 02:00 AM IST
ಮಳೆ-ಗಾಳಿಯಿಂದ ಬಳ್ಳಾರಿಯ ಪಾರ್ವತಿ ನಗರದ ಶಕ್ತಿನರ್ಸಿಂಗ್ ಹೋಂ ಬಳಿ ಮರವೊಂದು ನೆಲಕ್ಕುರಳಿದೆ.  | Kannada Prabha

ಸಾರಾಂಶ

ನಗರ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಧಾರಾಕಾರ ಮಳೆ-ಗಾಳಿಗೆ ತಾಲೂಕಿನ ಗೊಲ್ಲರ ನಾಗೇನಹಳ್ಳಿ ಗ್ರಾಮದ 6 ಕುರಿಗಳು ಅಸು ನೀಗಿವೆ.

ಗೊಲ್ಲರ ನಾಗೇನಹಳ್ಳಿ ಗ್ರಾಮದಲ್ಲಿ 6 ಕುರಿ ಸಾವು । ಕೆಲವೆಡೆ ತುಂತುರು ಮಳೆ । ಕುರುಗೋಡು ತಾಲೂಕಿನಲ್ಲಿ ಅತಿ ಹೆಚ್ಚು ಮಳೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಧಾರಾಕಾರ ಮಳೆ-ಗಾಳಿಗೆ ತಾಲೂಕಿನ ಗೊಲ್ಲರ ನಾಗೇನಹಳ್ಳಿ ಗ್ರಾಮದ 6 ಕುರಿಗಳು ಅಸು ನೀಗಿವೆ. ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಮನೆಯೊಂದಕ್ಕೆ ಹಾನಿಯಾಗಿದೆ. ಬಳ್ಳಾರಿ ನಗರದಲ್ಲಿ 20ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ. 11 ವಿದ್ಯುತ್ ಕಂಬಗಳು ನೆಲಕ್ಕೆ ಬಾಗಿವೆ. ಜಿಲ್ಲೆಯ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ಭಾನುವಾರ ಸಂಜೆ ಸಂಡೂರು, ಸಿರುಗುಪ್ಪ ಹಾಗೂ ಕಂಪ್ಲಿಯಲ್ಲಿ ತುಂತುರು ಮಳೆಯಾಗಿದ್ದು, ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು.

ಶನಿವಾರ ರಾತ್ರಿ ಸುರಿದ ಮಳೆಯ ಪೈಕಿ ಕುರುಗೋಡು ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಕಂಪ್ಲಿ ತಾಲೂಕಿನಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ.

ಬಳ್ಳಾರಿ ತಾಲೂಕು 44.8 ಮಿಮೀ, ಸಿರುಗುಪ್ಪ 45.5 ಮಿಮೀ, ಸಂಡೂರು 28.6 ಮಿಮೀ, ಕುರುಗೋಡು 46.2 ಮಿಮೀ ಹಾಗೂ ಕಂಪ್ಲಿ ತಾಲೂಕಿನಲ್ಲಿ 22.8 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ರಾತ್ರಿ 10 ಗಂಟೆಯಿಂದ ಗುಡುಗು-ಸಿಡಿಲಿನೊಂದಿಗೆ ಶುರುವಿಟ್ಟುಕೊಂಡ ಮಳೆ ಸುಮಾರು ಒಂದು ತಾಸು ಧಾರಾಕಾರವಾಗಿ ಸುರಿಯಿತು. ಮಧ್ಯರಾತ್ರಿಯಲ್ಲಿ ಮತ್ತೆ ಮಳೆಯಾಯಿತು. ಮಳೆ-ಗಾಳಿಯಿಂದ ನಗರದ ತಾಳೂರು ರಸ್ತೆಯ ಶಕ್ತಿ ನರ್ಸಿಂಗ್ ಹೋಂ ಬಳಿ ಬೃಹತ್ ಮರವೊಂದು ರಸ್ತೆಯಲ್ಲಿ ನೆಲಕ್ಕುರುಳಿದಿದೆ. ಇದರಿಂದ ವಿದ್ಯುತ್ ತಂತಿಗಳು ಹರಿದು ಬಿದ್ದಿದ್ದವು. ತಾಳೂರು ರಸ್ತೆಯ ಎಸ್‌ಆರ್‌ಎಂ ಕಾಲನಿ ಬಳಿ ಎರಡು ಮರಗಳು, ಇನ್‌ಫ್ಯಾಂಟ್ರಿ ರಸ್ತೆಯಲ್ಲಿ ಒಂದು ಮರ, ಇಂದಿರಾ ನಗರದಲ್ಲಿ ಮೂರು ಮರಗಳು, ವಡ್ಡರಬಂಡೆ, ಬಾಲಾಜಿರಾವ್ ರಸ್ತೆ, ಅಗಡಿ ಮಾರೆಪ್ಪ ಕಾಂಪೌಂಡು, ರೂಪನಗುಡಿರಸ್ತೆ, ಮೀನಾಕ್ಷಿ ಸರ್ಕಲ್ ಬಳಿ ಮರಗಳು ನೆಲಕ್ಕುರಳಿದ್ದು ಯಾವುದೇ ಪ್ರಾಣಾಪಾಯವಾಗಿಲ್ಲ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ನೋಂದಣಿ ಕಚೇರಿ, ಹಳೆಯ ತಾಲೂಕು ಕಚೇರಿ ಮುಂಭಾಗ, ನಗರ ಬಸ್‌ ನಿಲ್ದಾಣ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಮಳೆಯನೀರು ಸಂಗ್ರಹಗೊಂಡಿರುವುದು ಕಂಡು ಬಂತು. ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ಹರಿದು ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಯಿತು. ಬಳ್ಳಾರಿ ನಗರದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಮಹಾನಗರ ಪಾಲಿಕೆ ಆಡಳಿತ ಯಾವುದೇ ಕ್ರಮ ವಹಿಸಿಲ್ಲವಾದ್ದರಿಂದ ಮಳೆನೀರು ರಸ್ತೆಯಲ್ಲಿಯೇ ಸಂಗ್ರಹಗೊಂಡಿರುವ ದೃಶ್ಯಗಳು ನಗರದ ನಾನಾ ಕಡೆ ಕಂಡು ಬಂತು.

ಬಳ್ಳಾರಿ ತಾಲೂಕು ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 20ಕ್ಕೂ ಮರಗಳು ಹಾಗೂ 18 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಕೆಲವೆಡೆ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿದ್ದು ಗ್ರಾಮೀಣ ಪ್ರದೇಶದ ಹತ್ತಾರು ಗ್ರಾಮಗಳಲ್ಲಿ ಶನಿವಾರ ರಾತ್ರಿಯಿಂದಲೇ ವಿದ್ಯುತ್ ಸ್ಥಗಿತಗೊಂಡಿದೆ.

ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಶುರುವಾಗಿದ್ದು, ಬಿತ್ತನೆ ಕಾರ್ಯಕ್ಕೆ ರೈತರಿಗೆ ಅನುಕೂಲವಾಗಲಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಮೂರು ಬಾರಿ ಉತ್ತಮ ಮಳೆಯಾಗಿದೆ. ಕೃಷಿ ಭೂಮಿಗಳು ಹಸಿಯಾಗಿದ್ದು ಕೃಷಿ ಚಟುವಟಿಕೆಗೆ ಚಾಲನೆ ದೊರೆಯಲಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರು ಹತ್ತಿ, ಜೋಳ, ಸೂರ್ಯಕಾಂತಿ, ಸಜ್ಜೆ, ತೊಗರಿಯನ್ನು ಬಿತ್ತನೆ ಮಾಡಲಿದ್ದಾರೆ. ಕಳೆದ ಏಳೆಂಟು ವರ್ಷಗಳ ಪೈಕಿ ಇದೇ ವರ್ಷ ಮುಂಗಾರು ಪೂರ್ವ ಮಳೆ ನಿರೀಕ್ಷೆಗೂ ಮೀರಿ ಸುರಿದಿದ್ದು ರೈತರು ಸಂತಸಗೊಂಡಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕರೂರು ಮಾಧವರೆಡ್ಡಿ ''''ಕನ್ನಡಪ್ರಭ''''ಕ್ಕೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ