ಹುಬ್ಬಳ್ಳಿ -ಧಾರವಾಡಗಳಲ್ಲಿ ಪಾಕ್ ಪ್ರಜೆ? : ಬೆಲ್ಲದ್

KannadaprabhaNewsNetwork |  
Published : May 19, 2025, 12:30 AM ISTUpdated : May 19, 2025, 12:29 PM IST
Aravind Bellad

ಸಾರಾಂಶ

ಹುಬ್ಬಳ್ಳಿ- ಧಾರವಾಡ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿರುವ ಬೆಲ್ಲದ, ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.  

ಹುಬ್ಬಳ್ಳಿ: ಅಪರಿಚಿತ ಹಾಗೂ ಅನುಮಾನಾಸ್ಪದವಾಗಿರುವ ವ್ಯಕ್ತಿಗಳು ಹುಬ್ಬಳ್ಳಿ-ಧಾರವಾಡ ಮಸೀದಿಗಳಲ್ಲಿ ಓಡಾಡುತ್ತಿದ್ದಾರೆ. ಇವರು ಪಾಕಿಸ್ತಾನ ಸೇರಿದಂತೆ ಬೇರೆ ಬೇರೆ ದೇಶದ ವ್ಯಕ್ತಿಗಳಿರಬಹುದು ಎಂಬ ಶಂಕೆ ಇದೆ. ಈ ಕುರಿತು ಪರಿಶೀಲನೆ ನಡೆಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿರುವ ಬೆಲ್ಲದ, ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಪರಿಚಿತರ ಓಡಾಟದ ಕುರಿತಂತೆ ಮೇ 17ರಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು. ಹುಬ್ಬಳ್ಳಿ- ಧಾರವಾಡ ಮಹಾನಗರದ ಕೆಲವು ಮಸೀದಿಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಅವರು ಸ್ಥಳೀಯರು ಅಲ್ಲ ಎಂಬ ಸಂಶಯವನ್ನು ಪತ್ರದಲ್ಲಿ ವ್ಯಕ್ತಪಡಿಸಿರುವ ಶಾಸಕ ಬೆಲ್ಲದ, ಹೀಗೆ ಓಡಾಡುತ್ತಿರುವವರಲ್ಲಿ ಹೊಸ ಮುಖ, ಅಪರಿಚಿತ ಆಗಿದ್ದು ಅನುಮಾನಾಸ್ಪದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಅವರು ಹೊರ ದೇಶದ ಪ್ರಜೆಗಳಂತೆ ಭಾಸವಾಗುತ್ತಾರೆ ಎಂದು ಹೇಳಿದ್ದಾರೆ.

ಅವಳಿ ನಗರದ ವಿವಿಧ ಕೊಳಚೆ ಪ್ರದೇಶದಲ್ಲಿ (ಜನ್ನತ್ ನಗರ ಧಾರವಾಡ ಸೇರಿದಂತೆ) ವಾಸವಾಗಿದ್ದಾರೆಂಬ ಮಾಹಿತಿಯೂ ಇದ್ದು, ಅದಕ್ಕಾಗಿ ಈ ಕುರಿತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಹುಬ್ಬಳ್ಳಿ ಧಾರವಾಡದಲ್ಲಿರುವ ಅಪರಿಚಿತ, ಹೊಸಮುಖದ ವ್ಯಕ್ತಿಗಳನ್ನು ವಿಚಾರಿಸಿ ಸೂಕ್ತ ಕ್ರಮ ಜರುಗಿಸಬೇಕು. ಇದರಿಂದ ಮಹಾನಗರದಲ್ಲಿ ಅಹಿತಕರ ಘಟನೆ ಆಗದಂತೆ ತಡೆಯುವ ಕೆಲಸ ಮಾಡಬೇಕೆಂದು ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ಬೆಲ್ಲದ ಉಲ್ಲೇಖಿಸಿದ್ದಾರೆ.

ಪೊಲೀಸ್‌ ಆಯುಕ್ತರಿಂದ ಬೇಜವಾಬ್ದಾರಿ ಹೇಳಿಕೆ: ಬೆಲ್ಲದ

ಹುಬ್ಬಳ್ಳಿ: ಮಹಾನಗರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಹಿನ್ನೆಲೆಯಲ್ಲಿ ಗೃಹಮಂತ್ರಿ ಹಾಗೂ ನಗರ ಪೊಲೀಸ್​ ಆಯುಕ್ತರಿಗೆ ಪತ್ರ ಬರೆದಿದ್ದೇನೆ. 8 ದಿನವಾದರೂ ಯಾವುದೇ ವಿಚಾರಣೆ ನಡೆಸಿಲ್ಲ. ಇದೀಗ ಪೊಲೀಸ್​ ಆಯುಕ್ತರು ಪತ್ರದ ಮಾಹಿತಿಯೇ ಇಲ್ಲ ಎಂದು ಹೇಳುತ್ತಿರುವುದು ಬೇಜವಾಬ್ದಾರಿ ಹೇಳಿಕೆ ಎಂದು ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಜಾಗ್ರತ ನಾಗರಿಕರು ಕರೆ ಮಾಡಿ ಅಪರಿಚಿತ ವ್ಯಕ್ತಿಗಳ ಓಡಾಟದ ಮಾಹಿತಿ ನೀಡಿದ್ದರು. ಅವರು ಪಾಕಿಸ್ತಾನಿಗಳಂತೆ ಕಾಣುತ್ತಾರೆ ಎಂಬ ಕಾರಣಕ್ಕೆ ಇದೊಂದು ಸೂಕ್ಷ್ಮ ವಿಚಾರ ಎಂದು ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದೆ. ಆದರೆ, ಆಯುಕ್ತರು ತನಿಖೆ ನಡೆಸಿ ನನಗೂ ಹೇಳಿಲ್ಲ. ತನಿಖೆ ನಡೆಸುವ ಮನಸ್ಥಿತಿ ಸಹ ಅವರಿಗೆ ಇಲ್ಲವಾದಂತಿದೆ. ಇದು ಇಂದಿನ ಕಾಂಗ್ರೆಸ್​ ಸರ್ಕಾರದ ಆಡಳಿತ ವೈಖರಿಯಾಗಿದೆ ಎಂದು ದೂರಿದರು.

ದೇಶ ಘಾತುಕ ಶಕ್ತಿಗಳಿಗೆ ನಮ್ಮ ಬ್ರದರ್ಸ್​ ಎಂದು ಸರ್ಕಾರ ಹೇಳುತ್ತಿದೆ. ಅದರಂತೆ ಕೆಳ ಹಂತದ ಅಧಿಕಾರಿಗಳ ಮನಸ್ಥಿತಿಯೂ ಇದಾಗಿದೆ. 7- 8 ಜನರ ಗುಂಪುಗಳಲ್ಲಿ ಕಾಣುತ್ತಿದ್ದಾರೆ. ಅವರ ಚಟುವಟಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲವಾಗಿದೆ. ಅದನ್ನು ಪೊಲೀಸರು ತನಿಖೆ ಮಾಡಬೇಕು. ಆದರೆ, ಪೊಲೀಸರು ಬರೀ ಕಲೆಕ್ಷನ್​ ದಂಧೆಯಲ್ಲಿ ಬ್ಯುಸಿಯಾಗಿದ್ದಾರೆ. ಸಮಾಜ ಘಾತುಕ ಶಕ್ತಿಗಳಿಂದ ಹಣ ಪಡೆದು ಮೇಲಿನವರಿಗೆ ಮುಟ್ಟಿಸುವ ಕೆಲಸದಲ್ಲಿ ತೊಡಗಿದ್ದಾರೆ. ನಿಜವಾದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕೆಲಸದಲ್ಲಿ ಅವರಿಗೆ ಆಸಕ್ತಿ ಇಲ್ಲವಾಗಿದೆ. 8 ದಿನವಾದರೂ ಒಬ್ಬರನ್ನೂ ತನಿಖೆ ಮಾಡಿಲ್ಲ. ನನಗೂ ಉತ್ತರ ಬಂದಿಲ್ಲ. ಗೃಹ ಮಂತ್ರಿಗಳ ಕಚೇರಿಗೆ ಪತ್ರ ಮುಟ್ಟಿಸುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಏನೇ ಅನಾಹುತವಾದರೂ ರಾಜ್ಯ ಸರ್ಕಾರ ಕಾರಣ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ