ಕಾರವಾರ: ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆಯಾಗಿದೆ. ಕೆಲವೆಡೆ ಭಾನುವಾರ ರಾತ್ರಿ ನಿರಂತರವಾಗಿ ಅಬ್ಬರದ ಮಳೆಯಾದರೆ, ಕೆಲವೆಡೆ ಸೋಮವಾರ ಭರ್ಜರಿ ಮಳೆಯಾಗಿದೆ.ಕಾರವಾರದಲ್ಲಿ ಭಾನುವಾರ ರಾತ್ರಿಯಿಡಿ ಗುಡುಗು, ಮಿಂಚಿನೊಂದಿಗೆ ಬಿರುಸಿನ ಮಳೆಯಾಗಿದೆ. ಸೋಮವಾರ ಬೆಳಗಾಗುತ್ತಿದ್ದಂತೆ ಮಳೆ ಇಳಿಮುಖಗೊಂಡಿದೆ. ಮುಂಡಗೋಡದಲ್ಲಿ ಸೋಮವಾರ ಧಾರಾಕಾರವಾಗಿ ಸುರಿದ ಮಳೆಯಿಂದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತವಾಗಿವೆ. ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಯಲ್ಲಾಪುರದಲ್ಲಿ ಭಾನುವಾರ ಹಾಗೂ ಸೋಮವಾರ ಭಾರಿ ಮಳೆಯಾಗಿದೆ. ಹಾಸಣಗಿ ಗ್ರಾಪಂ ವ್ಯಾಪ್ತಿಯ ಮಾದನಸರದ ದೊಂಡಿಬಾಯಿ ಜಾನು ಪಾಟೀಲ ಅವರ ಮನೆ ಕುಸಿದು ಬಿದ್ದು ಹಾನಿ ಉಂಟಾಗಿದೆ.ಶಿರಸಿಯಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಗುಡುಗು ಮಿಂಚಿನೊಂದಿಗೆ ಭಾರಿ ಮಳೆಯಾಗಿದೆ. ಹೊಸಗದ್ದೆಯಲ್ಲಿ ಕೊಟ್ಟಿಗೆಯ ಮೇಲೆ ಮರ ಉರುಳಿ ಆಕಳಿಗೆ ಗಾಯ ಉಂಟಾಗಿದೆ ಹಾಗೂ ಸುಮಾರು ₹25 ಸಾವಿರ ಹಾನಿಯಾಗಿದೆ. ಕುಮಟಾ, ಹೊನ್ನಾವರ, ಸಿದ್ಧಾಪುರ ಹಾಗೂ ಭಟ್ಕಳದಲ್ಲೂ ಮಳೆಯಾಗಿದೆ. ಹಳ್ಳಕೊಳ್ಳಗಳು ಎಲ್ಲೆಡೆ ಮೈದುಂಬಿಕೊಂಡಿವೆ. ಅಕಾಲಿಕವಾಗಿ ಭಾರಿ ಮಳೆಯಾಗುತ್ತಿರುವುದರಿಂದ ರೈತರು ಕಂಗೆಟ್ಟಿದ್ದಾರೆ. ಕೊಯ್ಲಿಗೆ ಬಂದ ಭತ್ತ ಹಾಗೂ ಜೋಳ ಬೆಳೆಗಳು ನಾಶವಾಗುವ ಆತಂಕ ಉಂಟಾಗಿದೆ. ಮಂಗಳವಾರವೂ ವಿವಿಧೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗೋಕರ್ಣದಲ್ಲೂ ಅಪಾರ ಭತ್ತದ ಬೆಳೆಹಾನಿ
ಗೋಕರ್ಣ: ಮಳೆಯ ಆರ್ಭಟಕ್ಕೆ ಕೊಯ್ಲಿಗೆ ಬಂದ ಭತ್ತದ ಬೆಳೆ ನಾಶವಾಗಿದ್ದು, ಈ ಭಾಗದ ರೈತರು ಕಂಗಾಲಾಗಿದ್ದಾರೆ.ಈ ಬಾರಿ ಮುಂಗಾರು ಮಳೆಯ ಪ್ರಾರಂಭದಲ್ಲಿ ಅಧಿಕ ಮಳೆಯಿಂದ ನಾಟಿ ಮಾಡಿದ ಗದ್ದೆಗಳಲ್ಲಿ ಜಲಾವೃತಗೊಂಡು ಹಾನಿಯಾಗಿತ್ತು. ನಂತರ ಅಳಿದುಳಿದ ಬೆಳೆಯನ್ನು ಸಂರಕ್ಷಣೆ ಮಾಡಿ ಕೊಯ್ಲು ಮಾಡಬೇಕು ಎನ್ನುವಷ್ಟರಲ್ಲಿ ಹಿಂಗಾರು ಮಳೆಯ ಅಬ್ಬರಕ್ಕೆ ಹಾನಿಯಾಗಿದೆ. ದೇವರಿಗೆ ಕದಿರು ಅರ್ಪಿಸುವ ಹೊಸ್ತು ಹಬ್ಬದ ನಂತರ ಭತ್ತದ ಕಟಾವು ವಾಡಕೆಯಾಗಿತ್ತು. ಆದರೆ ಈ ವರ್ಷ ಮೆಳೆಯಿಂದ ಕೊಯ್ಲು ನಿಂತಿದೆ. ಗದ್ದೆಯಲ್ಲಿ ಅರೆಬರೆ ಬೆಳೆದು ನಿಂತ ಭತ್ತ ಫಸಲು ಮಳೆಯಿಂದ ಹಾಳಾಗಿದೆ.ಬೆಳೆಗೆ ಬರೆ ಎಳೆದ ಉಪ್ಪು ನೀರು: ರುದ್ರಪಾದ, ಭಾವಿಕೊಡ್ಲ, ಬೇಲೆಹಿತ್ತಲ ಸೇರಿದಂತೆ ಹಲವಡೆ ಮಳೆಯಿಂದ ಗದ್ದೆಯಲ್ಲಿ ಅಧಿಕ ನೀರು ತುಂಬಿದರೆ, ಹನೇಹಳ್ಳಿ, ನಾಡುಮಾಸ್ಕೇರಿ, ಬಂಕಿಕೊಡ್ಲ ಭಾಗದಲ್ಲಿನ ನೂರಾರು ಎಕರೆ ಪ್ರದೇಶದಲ್ಲಿ ಕೊಯ್ಲಿಗೆ ಬಂದ ಭತ್ತದ ಗದ್ದೆಗೆ ಮಳೆಯ ಮೊದಲೇ ಉಪ್ಪು ನೀರು ನುಗ್ಗಿ ಹಾನಿಯಾಗಿದೆ.ಉಪ್ಪು ನೀರು ನುಗ್ಗದಂತೆ ತಡೆಗೋಡೆ ನಿರ್ಮಿಸಿದ ಚಿಕ್ಕ ನೀರಾವರಿ ಇಲಾಖೆಯವರು ನೀರು ಒಳಬರದಂತೆ ಗೇಟ್ ಅಳವಡಿಸದೆ ಬಿಟ್ಟ ಪರಿಣಾಮ ಈ ಆವಾಂತರವಾಗಿದ್ದು, ಈ ಘಟನೆ ನಡೆದ ಹಲವು ದಿನ ಕಳೆದರೂ ಯಾವುದೇ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಡದೆ ನಿರ್ಲಕ್ಷಿಸಿದ್ದಾರೆ ಎಂದು ರೈತರ ಹೇಳುತ್ತಿದ್ದಾರೆ.