ತಂಪು ಮೂಡಿಸಿದ ವರ್ಷಧಾರೆ । ಮೂಡಿಗೆರೆ-ಚಿಕ್ಕಮಗಳೂರು ರಸ್ತೆ ಸಂಚಾರ ಸ್ಥಗಿತ
ಕಾಫಿನಾಡು ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ.
ಉಳಿದಂತೆ ಬಯಲು ಭಾಗದಲ್ಲಿ ಇಡೀ ಮೋಡ ಕವಿದ ವಾತಾವರಣ ಮತ್ತು ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿ ಬೆಳ್ಳಂಬೆಳಗ್ಗೆ ಮಳೆ ಸುರಿಯಿತು. ನಂತರ ಮೋಡಕವಿದ ವಾತಾವರಣ ದೊಂದಿಗೆ ಸ್ವಲ್ಪ ಸಮಯ ಬಿಡುವು ನೀಡಿ ಮಧ್ಯಾಹ್ನದ ನಂತರ ಭಾರೀ ಮಳೆ ಸುರಿಯಿತು.ಗುಡುಗು-ಸಿಡಿಲು ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನರು ಪರಿತಪಿಸಿದರು. ಮಲೆನಾಡು ಭಾಗವಾದ ಆಲ್ದೂರು, ಮೂಡಿಗೆರೆ, ಬಣಕಲ್, ಗೋಣಿಬೀಡು, ಚಾರ್ಮಾಡಿ ತಪ್ಪಲಿನಲ್ಲಿ ಗುಡುಗು-ಸಿಡಿಲು ಸಹಿತ ವ್ಯಾಪಕ ವಾಗಿ ಸುರಿದ ಮಳೆಗೆ ಅಲ್ಲಲ್ಲಿ ರಸ್ತೆಗೆ ಮರಗಳು ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಯಿತು.
ಉಳಿದಂತೆ ಬಾಳೆಹೊನ್ನೂರು, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ಹಾಗೂ ಬಯಲು ಸೀಮೆಯಾದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳಲ್ಲಿಯೂ ಸಾಧಾರಣವಾಗಿ ಮಳೆಯಾದ ವರದಿಯಾಗಿದೆ.
ಕಳಸ ತಾಲೂಕಿನ ಸಂಸೆ, ಬಾಳೆಹೊಳೆ, ಹಿರೇಬೈಲು, ಕುದುರೆಮುಖ, ಮರಸಣಿಗೆ ಸುತ್ತಮುತ್ತ ಶನಿವಾರ ಭಾರೀ ಮಳೆ ಸುರಿದಿದೆ. ಗಾಳಿ-ಮಳೆಗೆ ಬೃಹತ್ ಮರಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹೀಗಾಗಿ, ಹಲವು ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಕಾಲ ಕಳೆಯಬೇಕಾಯಿತು.
ಗುಡುಗು ಮಿಂಚು ಸಹಿತ ಮಳೆಕಡೂರು: ಶನಿವಾರ ಮಧ್ಯಾಹ್ನ ಕಡೂರು, ಬೀರೂರು ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಮಳೆ ಸುರಿಯಿತು. ಮಧ್ಯಾಹ್ನ ಸುಮಾರು 2.30 ರಿಂದ ಭಾರೀ ಗಾಳಿಯೊಂದಿಗೆ ಆರಂಭಗೊಂಡ ಮಳೆ ಸುಮಾರು 45 ನಿಮಿಷಗಳ ಕಾಲ ಜೋರಾಗಿ ಸುರಿಯಿತು. 5 ದಿನಗಳ ಹಿಂದೆ ದಿಢೀರ್ ಎಂದು ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಸುರಿವ ಮೂಲಕ ರೈತರ ಮೊಗದಲ್ಲಿ ಹರುಷ ತಂದಿತ್ತು. ಇದೀಗ ಹೆಚ್ಚು ಸಮಯ ಮಳೆ ಗ್ರಾಮೀಣ ಭಾಗದಲ್ಲೂ ಜೋರಾಗಿ ಸುರಿಯಿತು . ಸಂಜೆ ತನಕ ಮೋಡ ಮುಂದುವರಿದು ಸಂಜೆ 7 ಗಂಟೆ ನಂತರ ಮಳೆ ಸಣ್ಣದಾಗಿ ಮುಂದುವರಿದಿತ್ತು.
ಇಳೆಗೆ ತಂಪೆರೆದ ಮಳೆತರೀಕೆರೆ: ಮಲೆನಾಡು ಹೆಬ್ಬಾಗಿಲು ತರೀಕೆರೆ ಪಟ್ಟಣದಲ್ಲಿ ಶನಿವಾರ ಮೊದಲ ವರುಣ ಸಿಂಚನವಾಗಿ ವಾತಾವರಣ ತಂಪಾಗಿಸಿ ಮನಸ್ಸಿಗೆ ಹರ್ಷ ಮೂಡಿಸಿದೆ.ಬೇಸಿಗೆ ಬಿಸಿಲಿನ ಝಳದ ನಡುವೆಯೇ ತಲ್ಲಣಿಸಿದ ವಾತಾವರಣದಲ್ಲಿದ್ದ ಪಟ್ಟಣದಲ್ಲಿ ಶನಿವಾರ ಬೆಳಗಿನಿಂದಲೇ ತುಸು ಮೋಡ ಕವಿದ ವಾತಾವರಣ ಇತ್ತು. ಆದರೆ ಬಿಸಿಲಿನ ಝಳ ಕಡಿಮೆ ಇರಲಿಲ್ಲ. ಸಂಜೆ 7ರ ಸಮಯದಲ್ಲಿ ಗುಡುಗು ಮಿಂಚು ಸಹಿತ ಕೆಲ ಹೊತ್ತು ಬಿರುಸು ಮಳೆ ಸುರಿಯಿತು. ಮಳೆಯಿಂದಾಗಿ ರಸ್ತೆ ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು. ಮಳೆ ವಾತಾವರಣ ತಂಪಾಗಿಸಿದೆ.
ಶೃಂಗೇರಿ: ಕೆರೆಕಟ್ಟೆ ಬಳಿ ಬೃಹತ್ ಮರ ರಸ್ತೆ ಗುರುಳಿ ಸಂಚಾರ ಅಸ್ತವ್ಯಸ್ತಶೃಂಗೇರಿ: ತಾಲೂಕಿನಾದ್ಯಂತ ಶನಿವಾರ ಸಂಜೆ ಗುಡುಗು ಸಿಡಿಲು ಗಾಳಿ ಸಹಿತ ಭಾರಿ ಮಳೆ ಆರ್ಭಟಿಸಿತು. ಮಧ್ಯಾಹ್ನದಿಂದ ದಟ್ಟ ಮೋಡಕವಿದು ಗುಡುಗು ಸಿಡಿಲಿನ ಆರ್ಭಟ ಆರಂಭವಾಗಿ ಸಂಜೆ ವೇಳೆ ಜೋರು ಗಾಳಿಯ ಆರ್ಭಟದೊಂದಿಗೆ ಮಳೆ ಸುರಿಯಿತು. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಮಳೆಯಾಗಿದೆ.ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169 ರ ಶೃಂಗೇರಿ ಕೆರೆಕಟ್ಟೆ ಬಳಿ ಬೃಹತ್ ಮರವೊಂದು ರಸ್ತೆ ಮೇಲೆ ಉರುಳಿ ಬಿದ್ದು ಭಾರಿ ಅನಾಹುತ ತಪ್ಪಿದೆ. ಮರ ಬಿದ್ದ ಪರಿಣಾಮ ಮಂಗಳೂರು ಶೃಂಗೇರಿ ರಸ್ತೆ ಸಂಪರ್ಕ ಕೆಲ ಹೊತ್ತು ಬಂದ್ ಆಗಿದ್ದು, ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಬೇಕಾಯಿತು.ಶೃಂಗೇರಿ ಪಟ್ಟಣ, ಕೆರೆಕಟ್ಟೆ ,ಮೆಣಸೆ,ನೆಮ್ಮಾರು,ಬೇಗಾರು ಸೇರಿದಂತೆ ತಾಲೂಕಿನೆಲ್ಲೆಡೆ ಗಾಳಿ ಮಳೆ ಆರ್ಭಟಿಸಿತು. ಗಾಳಿಯ ಆರ್ಭಟಕ್ಕೆ ಕೆಲವೆಡೆ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಗಾಳಿಯ ಆರ್ಭಟಕ್ಕೆ ಅಡಕೆ, ಬಾಳೆ ತೋಟಗಳಲ್ಲಿ ಮರಗಳು ಧರೆಗುರುಳಿತು.ಸಂಜೆ ಕೆಲಹೊತ್ತು ಬಿಡುವು ನೀಡಿದ್ದ ಮಳೆ ಮತ್ತೆ ಸಂಜೆಯಿಂದ ರಾತ್ರಿವರೆಗೂ ಮುಂದುವರಿಯಿತು. ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು. ಕಳೆದೆರೆಡು ದಿನಗಳಿಂದ ಮಳೆ ಸುರಿಯುತ್ತಿದ್ದು ಶನಿವಾರ ಸಂಜೆಯೂ ಭಾರಿ ಮಳೆಯಾಗಿದೆ.16 ಶ್ರೀ ಚಿತ್ರ 2-ಶೃಂಗೇರಿ ಕೆರೆಕಟ್ಟೆ ಬಳಿ ಶನಿವಾರ ಸಂಜೆ ಗಾಳಿ ಮಳೆಗೆ ಬೃಹತ್ ಮರ ರಸ್ತೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿರುವುದು.
ಚಿಕ್ಕಮಗಳೂರು ಜಿಲ್ಲೆಯ ಕೆಳಗೂರು ಸಮೀಪದಲ್ಲಿ ಮಳೆಗಾಳಿಗೆ ರಸ್ತೆಗೆ ಮರ ಬಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿರುವುದು