ಶಿರಸಿ: ತಾಲೂಕಿನಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಭರ್ಜರಿ ಮಳೆಯಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಗಿದೆ. ಹೆಸ್ಕಾಂ ಇಲಾಖೆಯವರು ಕನಿಷ್ಠ ಸೌಜನ್ಯಕ್ಕಾದರೂ ದೂರವಾಣಿ ಕರೆ ಸ್ವೀಕರಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಮಠದೇವಳ ಗ್ರಾಮದ ಕಮಟಗೇರಿಯ ಮಂಜುನಾಥ ಶಿವಪ್ಪ ನಾಯ್ಕಗೆ ಸೇರಿದ ಎಮ್ಮೆಯ ಮೇಲೆ ವಿದ್ಯುತ್ ತಂತಿ ಬಿದ್ದು ಮೃತಪಟ್ಟಿದೆ. ನೆಗ್ಗು ಗ್ರಾಪಂ ವ್ಯಾಪ್ತಿಯ ಕೊಪ್ಪೆಸರದ ನಾರಾಯಣ ಹೆಗಡೆಗೆ ಸೇರಿದ ಆಕಳು ಹುಲ್ಲು ಮೇಯಲು ಹೋದಾಗ ಎತ್ತರದ ಧರೆಯಿಂದ ಬಿದ್ದು ಮೃತಪಟ್ಟಿದೆ. ಗುರುವಳ್ಳಿ ಗ್ರಾಮದ ಮಂಡೆಮನೆಯ ಗಣಪತಿ ಹೆಗಡೆ ಇವರ ತೋಟದಲ್ಲಿ ಇರುವ ಮನೆಯ ಹಿಂದಿನ ಗೋಡೆ ಕುಸಿದು ₹೧೫ ಸಾವಿರ ಹಾನಿಯಾಗಿದೆ. ಸೋಂದಾ ಗ್ರಾಮದ ಉದಯ ಕರ್ಕೊಳ್ಳಿ ಇವರ ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಆಲದ ಮರ ಬಿದ್ದು ಅಂದಾಜು ೯೦ ರಿಂದ ೧೦೦ ಅಡಿಕೆ ಮರಗಳಿಗೆ ಹಾನಿಯಾಗಿ, ₹೧೫ ಸಾವಿರ ನಷ್ಟ, ಯಕ್ಕಂಬಿಯ ಶಕುಂತಲಾ ರಾಜು ವಡ್ಡರ ವಾಸ್ತವ್ಯದ ಮನೆಯ ಹಿಂದಿನ ಗೋಡೆ ಕುಸಿದು ಬಿದ್ದು ₹೧೦ ಸಾವಿರ ಹಾನಿಯಾಗಿದೆ.