ಬೆಳಗಾವಿ ಸುತ್ತಮುತ್ತ ಭಾರೀ ಮಳೆ: ವೃದ್ಧ ಬಲಿ

KannadaprabhaNewsNetwork |  
Published : Aug 21, 2025, 01:00 AM IST
ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ. | Kannada Prabha

ಸಾರಾಂಶ

ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಮಳೆಗೆ ಮನೆಯ ಚಾವಣಿ ಕುಸಿದು ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ನಿಂಗಾಪೂರ ಪೇಟ ಮಹದೇವ ಗುಡಿ ಹತ್ತಿರ ವಾಮನ್ ರಾವ್ ಬಾಪೂ ಪವಾರ್ (75) ಎಂಬುವರು ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಮಳೆಗೆ ಮನೆಯ ಚಾವಣಿ ಕುಸಿದು ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ನಿಂಗಾಪೂರ ಪೇಟ ಮಹದೇವ ಗುಡಿ ಹತ್ತಿರ ವಾಮನ್ ರಾವ್ ಬಾಪೂ ಪವಾರ್ (75) ಎಂಬುವರು ಮೃತಪಟ್ಟಿದ್ದಾರೆ. ಮಲಗಿರುವಾಗ ಬೆಳಗಿನ ಜಾವ 4 ಗಂಟೆ ವೇಳೆಗೆ ಮನೆಯ ಚಾವಣಿ ಕುಸಿದು ಬಿತ್ತು.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಒಂದೇ ದಿನ 6 ಅಡಿಗಳಷ್ಟು ನೀರು ಹರಿದು ಬಂದಿದೆ. ಇದರಿಂದಾಗಿ ರಾಯಭಾಗ ತಾಲೂಕಿನಲ್ಲಿರುವ ಬೃಹತ್‌ ಕುಡಚಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಪರ್ಕ ಕಡಿತವಾಗಿದೆ. ಗೋಕಾಕ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಪ್ರವಾಹದ ಸ್ಥಿತಿ ಉದ್ಭವವಾಗಿದ್ದು, 300ಕ್ಕೂ ಅಧಿಕ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ 80ಕ್ಕೂ ಅಧಿಕ ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ.

ರಾಯಚೂರು ಜಿಲ್ಲೆಯಲ್ಲಿಯೂ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸೇತುವೆಗಳು ಮುಳುಗಡೆಯಾಗಿ ರಾಯಚೂರು-ಯಾದಗಿರಿ-ಕಲಬುರಗಿ ಮಾರ್ಗ ಬಂದ್‌ ಆಗಿದೆ. ಬಸವಸಾಗರ ಡ್ಯಾಂನಿಂದ 30 ಕ್ರಸ್ಟ್‌ಗೇಟ್‌ ಮೂಲಕ ನೀರು ಬಿಡುಗಡೆ ಮಾಡಲಾಗಿದ್ದು, ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ.

ತುಂಗಭದ್ರಾ ಜಲಾಶಯದ 26 ಕ್ರಸ್ಟ್‌ ಗೇಟ್‌ಗಳಿಂದ 1.21 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಹಂಪಿಯ ಪ್ರಮುಖ ಸ್ಮಾರಕಗಳು ಜಲಾವೃತವಾಗಿವೆ. ಹಾವೇರಿ ಜಿಲ್ಲೆಯಲ್ಲಿ ವರದಾ ನದಿ ಮೈದುಂಬಿ ಹರಿಯುತ್ತಿದ್ದು, 4 ಸೇತುವೆಗಳು ಜಲಾವೃತಗೊಂಡಿವೆ. ಮಳೆಯಿಂದಾಗಿ ಕರ್ನಾಟಕ-ತಮಿಳುನಾಡಿನ ಗಡಿಭಾಗದಲ್ಲಿರುವ ಹೊಗೆನಕಲ್ ನಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತೆಪ್ಪ ಸಂಚಾರ ಸ್ಥಗಿತಗೊಳಿಸಲಾಗಿದೆ.ಮಳೆ ತಗ್ಗಲೆಂದು ಋಷ್ಯ ಶೃಂಗನಿಗೆ ಅಗಿಲು ಸೇವೆ:ಮಲೆನಾಡಿನ ಮಳೆ ದೇವರು ಎಂದೇ ಪ್ರಖ್ಯಾತಿ ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯ ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಳೆ ಅಬ್ಬರ ನಿಯಂತ್ರಿಸಲು ಸೋಮವಾರದಿಂದ 3 ದಿನ ಅಗಿಲು ಸೇವೆ ನಡೆಯಿತು. ಮಳೆಯ ಅಬ್ಬರ ಕಡಿಮೆಯಾಗಲು ಶೃಂಗೇರಿ ಶಾರದಾ ಪೀಠದ ಉಭಯ ಜಗದ್ಗುರುಗಳು ಕಿಗ್ಗಾ ಋಷ್ಯಶೃಂಗೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳನ್ನು ನಡೆಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಸೋಮವಾರದಿಂದ ಸ್ವಾಮಿಗೆ ವಿಶೇಷ ಪೂಜೆಯೊಂದಿಗೆ ಅಗಿಲು ಸೇವೆ ಆರಂಭಗೊಂಡಿತ್ತು. ಪ್ರತಿದಿನ ಸ್ವಾಮಿಗೆ ವಿಶೇಷ ಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಅಗಿಲು ಸೇವೆ ಎಂದರೆ ಅತಿವೃಷ್ಠಿ ಉಂಟಾದಾಗ, ಪ್ರಕೃತಿ ವಿಕೋಪ ತೀವ್ರಗೊಳ್ಳುವ ಹಂತ ತಲುಪುವಾಗ, ಶೃಂಗೇರಿ ಪೀಠದ ಜಗದ್ಗುರುಗಳು ಪವಿತ್ರ ಅಗಿಲನ್ನು ಸಮರ್ಪಿಸುತ್ತಾರೆ. ಅಷ್ಟಗಂಧಕಗಳಲ್ಲಿ ಒಂದಾಗಿರುವ ಅಗಿಲು, ಉಷ್ಣ ಸ್ವಭಾವದ ಗಂಧಕವಾಗಿದೆ. ಈ ಅಗಿಲನ್ನು ಶೃಂಗೇರಿ ಪೀಠದ ಜಗದ್ಗುರುಗಳನ್ನು ಹೊರತುಪಡಿಸಿ ಬೇರೆ ಯಾರೂ ಕಳುಹಿಸಿ ಕೊಡುವಂತಿಲ್ಲ. ಅಲ್ಲದೆ, ಬೇರೆ ಯಾವುದೇ ಸಂದರ್ಭದಲ್ಲಿಯೂ ಋಷ್ಯಶೃಂಗೇಶ್ವರನ ಸನ್ನಿದಿಯಲ್ಲಿ ಇದನ್ನು ಬಳಸುವಂತಿಲ್ಲ.ಈ ಪವಿತ್ರ ಅಗಿಲನ್ನು ಮಳೆ ದೇವರ ಮುಂದಿಟ್ಟು ಪ್ರಾರ್ಥಿಸಿ ಮೂರು ದಿನ ಲೇಪಿಸಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕಗಳು ನೆರವೇರಿದವು. ಅಗಿಲು ಸೇವೆಯೊಂದಿಗೆ ನಿತ್ಯ ಏಕಾದಶ ರುದ್ರಾಭಿಷೇಕ, ತೈಲಾಭಿಷೇಕಗಳು ನಡೆದವು. ಕೆಲವರ್ಷಗಳ ಹಿಂದೆಯೂ ಅತೀ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಜಗದ್ಗುರುಗಳ ಅಪ್ಪಣೆಯಂತೆ ಮಳೆ ಕಡಿಮೆಯಾಗಲು ಇದೇ ರೀತಿ ಅಗಿಲು ಸೇವೆ ನಡೆದಿತ್ತು. ಆಗ ಮಳೆ ಕಡಿಮೆಯಾಗಿತ್ತು ಎನ್ನಲಾಗಿದೆ.ರಾಜ್ಯದಲ್ಲಿ 5-6 ದಿನ ಮಳೆ ಇಳಿಮುಖ:

ಮಳೆಯ ಮಾರುತಗಳು ಉತ್ತರ ಭಾಗಕ್ಕೆ ಚಲಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಐದಾರು ದಿನ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಕಳೆದೊಂದು ವಾರದಿಂದ ಧಾರಾಕಾರವಾಗಿ ಮಳೆಯಾಗುತ್ತಿತ್ತು. ಇದೀಗ ಮಳೆ ಮಾರುತಗಳು ದೇಶದ ಉತ್ತರಕ್ಕೆ ಚಲಿಸಿವೆ. ಈ ಕಾರಣಕ್ಕೆ ಮಳೆ ಕಡಿಮೆಯಾಗಲಿದೆ. ಆ.26 ಮತ್ತು 27ರಿಂದ ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಕರಾವಳಿ, ಮಲೆನಾಡು ಸೇರಿ ಇಡೀ ರಾಜ್ಯದಲ್ಲಿ ಮಳೆ ಕಡಿಮೆ ಇರಲಿದೆ.

ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡದ ಕ್ಯಾಸಲ್‌ ರಾಕ್‌ನಲ್ಲಿ ಅತಿ ಹೆಚ್ಚು 16 ಸೆಂ.ಮೀ. ಮಳೆಯಾಗಿದೆ. ಜಗಲ್‌ಬೆಟ್‌ 8, ಲೋಂಡಾ ಮತ್ತು ಯಲ್ಲಾಪುರ ತಲಾ 7, ಕದ್ರಾ 6, ಕಾರವಾರ, ಜೋಯಿಡಾ, ಹುಳಿಯಾರ, ಗೇರುಸೊಪ್ಪ ತಲಾ 5, ಮಂಕಿ, ಖಾನಾಪುರ, ನಿಪ್ಪಾಣಿ, ಬೆಳಗಾವಿ, ಕಿತ್ತೂರು, ಕಮ್ಮರಡಿ ಹಾಗೂ ಆಗುಂಬೆಯಲ್ಲಿ ತಲಾ 3 ಸೆಂ.ಮೀ. ಮಳೆ ವರದಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ