ರಕ್ತ ಕೊರತೆಯಿಂದ ದೇಶದಲ್ಲಿ ಶೇ.೨೦ರಷ್ಟು ಸಾವು: ರವಿಕುಮಾರ್

KannadaprabhaNewsNetwork |  
Published : Aug 21, 2025, 01:00 AM IST
೧೬ಕೆಎಂಎನ್‌ಡಿ-೨ಮಂಡ್ಯದ ಹೊರವಲಯದಲ್ಲಿರುವ ಸ್ಯಾಂಜೋ ಆಸ್ಪತ್ರೆ ಆವರಣದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತ ಸಂಗ್ರಹಿಸಿ ನೀಡಲಾಯಿತು. | Kannada Prabha

ಸಾರಾಂಶ

ರಕ್ತದ ಕೊರತೆ ಎಲ್ಲೆಡೆ ಇದೆ. ಅದನ್ನು ದಾನಿಗಳ ಮೂಲಕವೇ ಪಡೆಬೇಕಿರುವುದು ಅನಿವಾರ್ಯ. ದಾನಿಗಳು ಪ್ರತಿಯೊಂದು ಜೀವವನ್ನು ಉಳಿಸುವ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ರಕ್ತದ ಕೊರತೆ ಅಥವಾ ಸಮಯಕ್ಕೆ ಸರಿಯಾಗಿ ರಕ್ತ ಸಿಗದ ಕಾರಣ ಭಾರತದಲ್ಲಿ ಪ್ರತಿ ವರ್ಷ ಶೇ.೨೦ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಆತಂಕ ವ್ಯಕ್ತಪಡಿಸಿದರು.

ಸ್ಯಾಂಜೋ ಆಸ್ಪತ್ರೆ, ಸ್ಯಾಂಜೋ ಸ್ಕೂಲ್ ಮತ್ತು ಕಾಲೇಜ್ ಆಫ್ ನರ್ಸಿಂಗ್, ಜೀವಧಾರೆ ಟ್ರಸ್ಟ್ ವತಿಯಿಂದ ೭೯ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಈಚೆಗೆ ಸ್ಯಾಂಜೋ ಆಸ್ಪತ್ರೆ ಆವರಣದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದ ಕೊರತೆ ಎಲ್ಲೆಡೆ ಇದೆ. ಅದನ್ನು ದಾನಿಗಳ ಮೂಲಕವೇ ಪಡೆಬೇಕಿರುವುದು ಅನಿವಾರ್ಯ. ದಾನಿಗಳು ಪ್ರತಿಯೊಂದು ಜೀವವನ್ನು ಉಳಿಸುವ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ನಗರಸಭಾಧ್ಯಕ್ಷ ಎಂ.ವಿ ಪ್ರಕಾಶ್ (ನಾಗೇಶ್) ಮಾತನಾಡಿ, ರಕ್ತವನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದನ್ನು ದಾನದ ರೂಪದಲ್ಲೇ ಪಡೆಯಬೇಕಾಗಿದೆ. ರಕ್ತಕ್ಕೆ ಮತ್ತೊಂದು ಪರ್ಯಾಯ ವಸ್ತು ಮತ್ತೊಂದಿಲ್ಲ ಎಂದರು.

ಜೀವಧಾರೆ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ನಟರಾಜು ಮಾತನಾಡಿ, ಭಾರತದಲ್ಲಿ ೧೫ ಲಕ್ಷಕ್ಕೂ ಹೆಚ್ಚಿನ ಯೂನಿಟ್‌ನಷ್ಟು ರಕ್ತದ ಅವಶ್ಯಕತೆ ಇದೆ. ಇದರಲ್ಲಿ ೧೧ ಲಕ್ಷ ಯೂನಿಟ್ ಮಾತ್ರ ಸಂಗ್ರಹವಾಗುತ್ತಿದೆ. ಈ ಪೈಕಿ ೧೦ ಲಕ್ಷ ಯೂನಿಟ್ ರಕ್ತವನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಒಂದು ಲಕ್ಷ ಯೂನಿಟ್ ಸಣ್ಣ ಪುಟ್ಟ ದೋಷದಿಂದಾಗಿ ಹಾನಿಯಾಗುತ್ತದೆ. ಉಳಿದಂತೆ ನಾಲ್ಕೈದು ಲಕ್ಷ ಯೂನಿಟ್‌ನಷ್ಟು ರಕ್ತದ ಕೊರತೆ ಉಂಟಾಗುತ್ತಿದೆ. ಇದನ್ನು ಅರಿತು ಯುವ ಸಮುದಾಯ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ರಕ್ತ ಸಂಗ್ರಹಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸ್ಯಾಂಜೋ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ.ಅನಿತಾ ವಿಕ್ಟೋರಿಯಾ ನರೋನ್ಹಾ ಮಾತನಾಡಿ, ರಕ್ತ ಕೇವಲ ಆರೋಗ್ಯ ಕಾಯುವ ವಸ್ತುವಲ್ಲ. ಜೀವ ಉಳಿಸುವ ಅಮೃತವಿದ್ದಂತೆ. ಒಂದು ಯುನಿಟ್ ರಕ್ತದಲ್ಲಿ ಮೂರು ಜನರ ಪ್ರಾಣ ಉಳಿಸಬಹುದು ಎಂದರು.

ನಗರಸಭೆ ಮಾಜಿ ಸದಸ್ಯ ಎಸ್.ಕೆ.ಶಿವಪ್ರಕಾಶ್‌ಬಾಬು, ಹಳೇಬೂದನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶರತ್‌ಚಂದ್ರ, ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ಬೂದನೂರು ಗ್ರಾಪಂ ಅಧ್ಯಕ್ಷೆ ಮಾನಸ, ಸ್ಯಾಂಜೋ ಆಸ್ಪತ್ರೆ ಆಡಳಿತಾಧಿಕಾರಿ ರೆ.ಸಿಸ್ಟರ್ ಡೊಯಲ್ ಇತರರಿದ್ದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಯಿತು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ