ಸಂಸದರಿಗೆ ಅನುಭವದ ಕೊರತೆ । ಸರ್ಫೇಸಿ ಕಾಯ್ದೆ ಕೈಬಿಡಬೇಕಾಗಿರುವುದು ಕೇಂದ್ರ ಸರ್ಕಾರ । ಸಭೆ ನಡೆಸುವುದು ಕಣ್ಣೋರೆಸುವ ತಂತ್ರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೇಂದ್ರ ಸರ್ಕಾರಕ್ಕೆ ಅತೀ ಹೆಚ್ಚು ವಿದೇಶಿ ವಿನಿಮಯ ತಂದುಕೊಡುತ್ತಿರುವ ಕಾಫಿ ಉದ್ಯಮ ಅತೀವೃಷ್ಟಿ ಹಾನಿಯಿಂದಾಗಿ ಸಂಕಷ್ಟದಲ್ಲಿದೆ. ಕೂಡಲೇ ರೈತರು ಮತ್ತು ಕಾಫಿ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ವಿದರ್ಭ ಪ್ಯಾಕೇಜ್ ಘೋಷಣೆ ಮಾಡಿ ಪರಿಹಾರ ನೀಡಿದ್ದರು. ಅದೇ ಮಾದರಿಯಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಕಾಫಿ ಬೆಳೆಗಾರರು ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವುದರಿಂದ ಕಾಫಿ, ಅಡಕೆ, ಮೆಣಸು ಸೇರಿದಂತೆ ವಾಣಿಜ್ಯ ಬೆಳೆಗಳಿಗೆ ನಿರೀಕ್ಷೆಗಿಂತ ಹೆಚ್ಚು ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ಗಳು ಬೆಳೆಗಾರರಿಗೆ ಸರ್ಫೇಸಿ ಕಾಯ್ದೆಯಡಿ ನೋಟಿಸ್ ನೀಡಿ ಸಾಲ ವಸೂಲಾತಿಗೆ ಮುಂದಾಗಿರು ವುದನ್ನು ಖಂಡಿಸಿದರು.ಕಾಫಿ ಬೆಳೆಗಾರರಿಗೆ ಕರಾಳ ಶಾಸನವಾಗಿರುವ ಸರ್ಫೇಸಿ ಕಾಯ್ದೆಯನ್ನು ಕೂಡಲೇ ರದ್ದು ಮಾಡಬೇಕು. ಕೇಂದ್ರ ಸರ್ಕಾರ ಅವೈಜ್ಞಾನಿಕ ಮತ್ತು ಅನುಭವದ ಕೊರತೆ ಇರುವುದರಿಂದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸರ್ಫೇಸಿ ಕಾಯಿದೆ ಬಗ್ಗೆ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಮಾಡುವುದು ಜನರ ಕಣ್ಣೊರೆಸುವ ತಂತ್ರ ಎಂದು ಟೀಕಿಸಿದರು.ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರೈತರ ಕೃಷಿ ಮೇಲೆ ಸರ್ಫೇಸಿ ಕಾಯಿದೆಯನ್ನು ಜಾರಿಗೆ ತಂದರು. ಆ ಸಂದರ್ಭದಲ್ಲಿ ಕೇರಳ ಸೇರಿದಂತೆ ಕಾಫಿ ಬೆಳೆಯುವ ರಾಜ್ಯಗಳು ವಿರೋಧಿಸಿದ್ದವು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದಕ್ಕೆ ಅನುಮೋದನೆ ನೀಡಿತು ಎಂದು ಲೇವಡಿ ಮಾಡಿದರು.ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಲ್ಲಿ ಬೆಳೆಗಾರರ ಪರವಾಗಿ ನಾಟಕವಾಡುತ್ತಿರುವುದನ್ನು ನಿಲ್ಲಿಸಿ ಕೇಂದ್ರದ ಹಣಕಾಸು ಸಚಿವರು ಹಾಗೂ ಕೃಷಿ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ಕೇವಲ ಸರ್ಕಾರಕ್ಕೆ ಮನವಿ ಕೊಡುವುದನ್ನು ಬಿಟ್ಟು ಚಳುವಳಿ ರೂಪಿಸುವಂತೆ ತಿಳಿಸಿ ದ್ದೇವೆ ಆದರೂ ಪ್ರತಿಭಟನೆ ಮಾಡದಿರುವ ಪರಿಣಾಮ ಬ್ಯಾಂಕ್‌ಗಳು ಸರ್ಫೇಸಿ ಕಾಯಿದೆಯಡಿ ಬೆಳೆಗಾರರಿಗೆ ನೋಟೀಸ್ ನೀಡಿ ಆಸ್ತಿ ಹರಾಜು ಹಾಕಲು ಮುಂದಾಗಿದೆ ಎಂದರು.ಬೆಳೆಗಾರರಿಗೆ ಕರಾಳ ಶಾಸನವಾದ ಸರ್ಫೇಸಿ ಕಾಯಿದೆಯಿಂದ ಸಾವಿರಾರು ರೈತರು ಮತ್ತು ಕಾಫಿ ಬೆಳೆಗಾರರು ಸರಣಿ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ನೆರವಿಗೆ ಧಾವಿಸದಿದ್ದರೆ ಇದರ ಪರಿಣಾಮ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಕಾಫಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಸದರು ಸ್ಪಂದಿಸಿ ಕೆಲಸ ಮಾಡದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.ಅಭಿವೃದ್ಧಿಗೋಸ್ಕರ ರಾಜ್ಯ ಸರ್ಕಾರದೊಂದಿಗೆ ಬೆಂಬಲಿಸುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ ನೀಡಿರುವುದು ಹತಾಶೆಯ ಹೇಳಿಕೆಯಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿದ್ದು, ಪ್ರಗತಿಯತ್ತ ಸಾಗುತ್ತಿರುವುದನ್ನು ಸಹಿಸದೆ ಸಿ.ಟಿ ರವಿ ಅವರು ಬೆಂಗಳೂರಿನಲ್ಲಿ ವಿರುದ್ಧ ಹೇಳಿಕೆ, ಚಿಕ್ಕಮಗಳೂರಿನಲ್ಲಿ ಪರ ಹೇಳಿಕೆ ನೀಡುತ್ತಿದ್ದಾರೆಂದು ವ್ಯಂಗ್ಯವಾಡಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಇಂದಾವರ ಲೋಕೇಶ್, ಶಾಂತಕುಮಾರ್ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 22 ಕೆಸಿಕೆಎಂ 5