ದ.ಕ.ದಲ್ಲಿ ಮಳೆಯಬ್ಬರ: ಪ್ರವಾಹರೂಪಿಯಾಗುತ್ತಿರುವ ನದಿಗಳು

KannadaprabhaNewsNetwork | Published : Jun 28, 2024 12:51 AM

ಸಾರಾಂಶ

ಜೂನ್‌ 29ರವರೆಗೆ ಕರಾವಳಿಯಲ್ಲಿ ಗಂಟೆಗೆ 38 ಕಿ.ಮೀ ನಿಂದ 46 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರವೂ ಮಳೆ ಅಬ್ಬರ ಮುಂದುವರಿದಿದೆ. ಮಂಗಳೂರು ಭಾಗದಲ್ಲಿ ಮಳೆ ಕೊಂಚ ಇಳಿಕೆಯಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಶುಕ್ರವಾರವೂ ಭಾರೀ ಮಳೆಯ ರೆಡ್‌ ಅಲರ್ಟ್‌ ಮುನ್ಸೂಚನೆ ಇರುವುದರಿಂದ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆ ಹಾನಿಯೂ ಮುಂದುವರಿದಿದೆ. ಪಾಂಡೇಶ್ವರದಲ್ಲಿ ಕಡಿದು ಬಿದ್ದ ವಿದ್ಯುತ್‌ ತಂತಿ ತಗುಲಿ ಇಬ್ಬರು ರಿಕ್ಷಾ ಚಾಲಕರು ಸಾವಿಗೀಡಾಗಿದ್ದರೆ, ಹಲವೆಡೆ ಗಾಳಿ ಮಳೆಗೆ ಮನೆಗಳು, ವಿದ್ಯುತ್‌ ಸಂಪರ್ಕಕ್ಕೆ ಹಾನಿ ಸಂಭವಿಸಿದೆ. ಸಮುದ್ರವೂ ಪ್ರಕ್ಷುಬ್ಧವಾಗಿದ್ದು, ಉಳ್ಳಾಲದ ಬಟ್ಟಗುಡ್ಡೆ ಪ್ರದೇಶದಲ್ಲಿ ಕೆಲವು ಮನೆಗಳು ಅಪಾಯದಲ್ಲಿವೆ.

ನದಿ ನೀರಿನ ಮಟ್ಟ ಏರಿಕೆ: ಮುಖ್ಯವಾಗಿ ಪಶ್ಚಿಮಘಟ್ಟ ಮತ್ತು ತಪ್ಪಲಿನ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ನದಿ, ತೊರೆಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪ್ರವಾಹ ಉಂಟಾಗುವ ಸಾಧ್ಯತೆ ಕಂಡುಬಂದಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿ 27.2 ಮೀಟರ್‌ ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ ಮಟ್ಟ 5 ಮೀಟರ್‌ ಎತ್ತರಕ್ಕೆ ಹರಿಯುತ್ತಿತ್ತು. ತುಂಬೆ ಡ್ಯಾಂನ ಎಲ್ಲ ಗೇಟ್‌ಗಳನ್ನು ತೆರವು ಮಾಡಲಾಗಿದೆ.

ಜೂನ್‌ 29ರವರೆಗೆ ಕರಾವಳಿಯಲ್ಲಿ ಗಂಟೆಗೆ 38 ಕಿ.ಮೀ ನಿಂದ 46 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.

ಹಲವೆಡೆ ಹಾನಿ: ಬುಧವಾರ ರಾತ್ರಿ ಸತತ ಸುರಿದ ಮಳೆಯಿಂದಾಗಿ ಮಂಗಳೂರಿನ ಹಲವೆಡೆ ಕೃತಕ ಪ್ರವಾಹ ಉಂಟಾಗಿದೆ. ಜಪ್ಪು, ಗುಜ್ಜರಕೆರೆ, ಕೋಡಿಕಲ್‌, ಜಪ್ಪಿನಮೊಗರು, ಕೊಟ್ಟಾರ ಚೌಕಿ ಭಾಗದಲ್ಲಿ ಮಳೆ ನೀರು ಕೆಲವು ಮನೆಗಳಿಗೆ ಹರಿದಿದೆ. ಕೊಟ್ಟಾರ ಚೌಕಿ ರಾಜಕಾಲುವೆಯ ಕಬ್ಬಿಣದ ರಾಡ್‌ ಮಳೆಗೆ ಕೊಚ್ಚಿ ಹೋಗಿ ಇಲ್ಲಿ ಸಂಚಾರ ಅಪಾಯಕಾರಿಯಾಗಿದೆ. ಎಡಪದವಿನಲ್ಲಿ ಶ್ರೀನಿವಾಸ ಭಟ್‌ ಎಂಬವರ ಮನೆ ಜಲಾವೃತವಾಗಿ ಸಮಸ್ಯೆಯಾಗಿತ್ತು.ಮಂಗಳೂರಿನ ಬಜ್ಜೋಡಿ ಸಂದೇಶ ಕಲಾ ಕೇಂದ್ರದ ಬಳಿ ಮರವೊಂದು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ಪಡೀಲ್‌ನ ವೀರನಗರದಲ್ಲಿ ಮರವೊಂದು ಉರುಳಿ ಬಿದ್ದು ಬಳಿಕ ತೆರವುಗೊಳಿಸಲಾಯಿತು. ಸುರತ್ಕಲ್‌ನ ಸುಭಾಷಿತ ನಗರದಲ್ಲಿ ಕಾಂಪೌಂಡ್‌ ಗೋಡೆ ಮಗುಚಿ ಬಿದ್ದು ಹಾನಿಯಾದರೆ, ಅಳಪೆ ಕಣ್ಣಗುಡ್ಡೆಯಲ್ಲಿ ಕಂಪೌಂಡ್‌ ಗೋಡೆ ಬಿದ್ದಿದೆ. ಕುದ್ರೋಳಿ ಕಂಡತ್ತಪಲ್ಲಿಯಲ್ಲಿ ಮನೆಯೊಂದು ಬೀಳುವ ಸ್ಥಿತಿಯಲ್ಲಿದ್ದು, ಅಲ್ಲಿ ವಾಸವಾಗಿರುವ ನಿವಾಸಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಬಂಗ್ರಕೂಳೂರಿನ ಪಂಜಿಮೊಗರು ವಾರ್ಡ್‌ನಲ್ಲಿ ಬರೆಯೊಂದು ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅಸುಪಾಸಿನ ಮನೆಗಳ ನಿವಾಸಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಇಂದು ಶಾಲೆಗಳು, ಪಿಯು ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಶುಕ್ರವಾರವೂ ಭಾರೀ ಮಳೆಯ ರೆಡ್‌ ಅಲರ್ಟ್‌ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಎಲ್ಲ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ತೆರಳಬಾರದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ.

ಮಧೂರು ದೇವಾಲಯ ಜಲಾವೃತ

ಕೇರಳದ ಗಡಿಭಾಗ ಕಾಸರಗೋಡಿನಲ್ಲೂ ಗುರುವಾರ ಧಾರಾಕಾರ ಮಳೆಯಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಪರಿಣಾಮ ಮಧೂರಿನ ಪ್ರಸಿದ್ಧ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯ ಸಂಪೂರ್ಣ ಜಲಾವೃತಗೊಂಡಿತ್ತು. ಅಲ್ಲಿನ ಮಧುವಾಹಿನಿ ನದಿ ತುಂಬಿ ತುಳುಕುತ್ತಿದ್ದುದರಿಂದ ದೇವಾಲಯ ಆವರಣದಲ್ಲಿ 3-4 ಅಡಿಗಳಷ್ಟು ಎತ್ತರಕ್ಕೆ ಪ್ರವಾಹ ಹರಿದಿತ್ತು. ದೇವಾಲಯದ ಅರ್ಚಕರು ಪ್ರವಾಹದಲ್ಲಿ ಪೂಜಾ ಸಾಮಗ್ರಿಗಳನ್ನು ಕೊಂಡೊಯ್ದು ಪೂಜೆ ನೆರವೇರಿಸಲು ಹರಸಾಹಸಪಟ್ಟರು.

Share this article