ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಮಳೆಯಾಗಿದ್ದು, ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮರೆಯಾಗಿದ್ದ ಮಳೆ ಬುಧವಾರದಿಂದ ಆರಂಭವಾಗಿದ್ದು, ರೈತರಲ್ಲಿ ಮೂಡಿದ್ದ ಆತಂಕ ದೂರ ಮಾಡಿದೆ. ಹಾವೇರಿ ನಗರದಲ್ಲಿ ಗುರುವಾರ ಬೆಳಗ್ಗೆ ಮಳೆಯಾಗಿ ನಂತರ ಬಿಡುವು ನೀಡಿ ಮತ್ತೆ ಮಧ್ಯಾಹ್ನ ಮಳೆ ಸುರಿಯಿತು. ದಿನವಿಡಿ ಮೋಡ ಕವಿದ ವಾತಾವಣದೊಂದಿಗೆ ತಂಪು ಗಾಳಿ ಬೀಸಿತು. ಹಾನಗಲ್ಲ, ಬ್ಯಾಡಗಿ, ರಾಣಿಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ, ಶಿಗ್ಗಾಂವಿ, ಸವಣೂರು ಭಾಗದಲ್ಲೂ ಮಳೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲಾದ್ಯಂತ 26.10 ಮಿಮೀ ಮಳೆಯಾಗಿದೆ. ಮಳೆಯಿಂದಾಗಿ ಶಿಗ್ಗಾಂವಿ ತಾಲೂಕಿನಲ್ಲಿ 2, ಸವಣೂರು ತಾಲೂಕಿನಲ್ಲಿ 2 ಮನೆಗಳಿಗೆ ಹಾನಿಯಾಗಿದೆ. ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ವಿಜಯಕುಮಾರ ಗಡಗಿ ಹಾಗೂ ವೀರಪ್ಪ ಉಳ್ಳಾಗಡ್ಡಿ ಅವರ ಜಮೀನಿನಲ್ಲಿ ಬೆಳೆದಿದ್ದ ಕ್ಯಾಬೇಜ್ ಬೆಳೆ ಹಾನಿಯಾಗಿದೆ. ಶಿಗ್ಗಾಂವಿ ತಾಲೂಕಿನ ಹಿರೇಮಲ್ಲೂರ ಗ್ರಾಮದಲ್ಲಿ ಸುಮಾರು 1 ಹೆಕ್ಟೇರ್ ಜಮೀನಿನಲ್ಲಿ ನೀರು ನಿಂತಿದೆ.15ರ ವರೆಗೆ ಮಳೆ: ಮುಂಜಾಗ್ರತಾ ಕ್ರಮಕ್ಕೆ ಡಿಸಿ ಸೂಚನೆ
ದುರ್ಬಲವಾದ, ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ, ಮರಗಳ ಕೆಳಗೆ ನಿಲ್ಲಬಾರದು. ಕಟ್ಟಡಗಳ ಮೇಲೆ ಅಪಾಯಕಾರಿ ಹಾಗೂ ದುರ್ಬಲವಾದ ರೆಂಬೆ- ಕೊಂಬೆಗಳಿದ್ದಲ್ಲಿ ಮೊದಲೇ ಕತ್ತರಿಸಿ ವಾಸಿಸುವ ಕಟ್ಟಡಗಳನ್ನು ರಕ್ಷಿಸಿಕೊಳ್ಳಬೇಕು.
ಹೆಚ್ಚು ಮಳೆಯಾಗುವುದರಿಂದ ಕೆಲವು ಪ್ರದೇಶಗಳು ಜಲಾವೃತಗೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಹಾಗಾಗಿ ಇಂತಹ ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ತಹಸೀಲ್ದಾರರ ಕಚೇರಿ ಅಥವಾ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಸಂಪರ್ಕಿಸಿ ಹತ್ತಿರದ ಕಾಳಜಿ ಕೇಂದ್ರದಲ್ಲಿ ಸಾಕಷ್ಟು ಮುಂಚಿತವಾಗಿಯೇ ಉಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂಗೆ ಕರೆ ಮಾಡಬಹುದು. ತುರ್ತು ಸೇವೆಗೆ ಶುಲ್ಕರಹಿತ 1077 ಹಾಗೂ ದೂ. 08375- 249102 ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.