ನವಲಗುಂದದಲ್ಲಿ ಭಾರೀ ಮಳೆಗೆ 36 ಮನೆಗಳ ಕುಸಿತ

KannadaprabhaNewsNetwork |  
Published : Aug 10, 2025, 01:31 AM IST
9ಎಚ್‌ಯುಬಿ31ನವಲಗುಂದ ತಾಲೂಕಿನ ಹಾಳಕುಸುಗಲ್ ಗ್ರಾಮದ ಜಮೀನೊಂದರಲ್ಲಿ ಮಳೆಯ ನೀರಿನಲ್ಲಿ ಮುಳುಗಿರುವ ಹೆಸರು ಬೆಳೆ. | Kannada Prabha

ಸಾರಾಂಶ

ಮಳೆಯಿಂದ ಮುಂಗಾರು ಹಂಗಾಮಿನಲ್ಲಿ ರೈತರ ಕೈ ಸೇರಬೇಕಾದ ಹೆಸರು ಬೆಳೆ ಹಾಳಾಗುವ ಹಂತ ತಲುಪಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ನವಲಗುಂದ: ಕಳೆದ ಮೂರು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ತಾಲೂಕಿನಲ್ಲಿ 36 ಮನೆಗಳು ಕುಸಿದಿವೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಕೆಲವೆಡೆ ರಸ್ತೆಗಳಿಗೆ ಹಾನಿಯಾಗಿದೆ.

ನವಲಗುಂದ, ಶಾನವಾಡ, ಪಡೇಸೂರ, ಹಾಳಕುಸುಗಲ್, ತಿರ್ಲಾಪುರ, ಶಿರಕೋಳ, ತಡಹಾಳ, ದಾಟನಾಳದಲ್ಲಿ ಭಾರಿ ಮಳೆಯಾಗಿದೆ. ಅಲ್ಲಲ್ಲಿ ಮನೆಗಳು ಕುಸಿದ್ದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಮಳೆಯಿಂದ ಮುಂಗಾರು ಹಂಗಾಮಿನಲ್ಲಿ ರೈತರ ಕೈ ಸೇರಬೇಕಾದ ಹೆಸರು ಬೆಳೆ ಹಾಳಾಗುವ ಹಂತ ತಲುಪಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ತಾಲೂಕಿನ ಕೆಲವು ಗ್ರಾಮಗಳಲ್ಲಿ ಮನೆಗಳು ಕುಸಿದು ಬಿದ್ದಿವೆ. ನವಲಗುಂದ ಪಟ್ಟಣದಲ್ಲೇ 8 ಮನೆಗಳು ಕುಸಿದಿವೆ. ಹೊಲಗಳಲ್ಲಿನ ಒಡ್ಡುಗಳು ಒಡೆದು ಭಾರಿ ಪ್ರಮಾಣದ ನೀರು ಹರಿದ ಪರಿಣಾಮ ಬೆಳೆಗಳು ನೀರಲ್ಲಿ ನಿಂತಿವೆ.

ಶನಿವಾರ ತಾಲೂಕಿನ ತಡಹಾಳ ಗ್ರಾಮದ ಮಧ್ಯದಲ್ಲಿನ ಕೂರ್ಲಗೇರಿ ಗ್ರಾಮದ ಬೆಣ್ಣಿಹಳ್ಳದ ಸೇತುವೆಯ ಮಧ್ಯದಲ್ಲಿನ ಮಣ್ಣು ಹಳ್ಳಕ್ಕೆ ತೇಲಿ ಹೋಗಿದ್ದರಿಂದ ಗದಗ, ನರಗುಂದ ಸಂಚಾರ ಸ್ಥಗಿತಗೊಂಡಿದೆ. ಜತೆಗೆ ತಡಹಾಳ-ದಾಟನಾಳ ಗ್ರಾಮ ಮಧ್ಯದ ಕಕ್ಕಿ ಹಳ್ಳದ ಹರಿವಿನಿಂದ ದಾಟನಾಳ ಗ್ರಾಮದ ಸಂಚಾರ ಸ್ಥಗಿತಗೊಂಡಿದೆ.

ಶಾನವಾಡ ಗ್ರಾಮದ ತಳವಾರ ಓಣಿಯಲ್ಲಿ ಮಳೆಯ ನೀರು ನುಗ್ಗಿದ ಪರಿಣಾಮ ಇಡೀ ಓಣಿಯ ಮನೆಗಳು ಕೆಲಕಾಲ ನಡುನೀರಲ್ಲಿ ನಿಂತಿದ್ದವು. ಹಾಳಕುಸುಗಲ್ ಹಾಗೂ ಹುಬ್ಬಳ್ಳಿ ಸಂಪರ್ಕ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು ರಸ್ತೆ ಹಾಳಾಗಿದೆ. ಬೋಗಾನೂರು ಗ್ರಾಮದಲ್ಲಿ ಮಳೆ ನೀರಿನಿಂದಾಗಿ 15 ಮನೆಗಳು ಜಲಾವೃತ್ತಗೊಂಡಿದ್ದು, ಗ್ರಾಮದ 50 ಜನರಿಗಾಗಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ ಎಂದು ತಹಸೀಲ್ದಾರ್‌ ಸುಧೀರ ಸಾಹುಕಾರ ತಿಳಿಸಿದ್ದಾರೆ.

36 ಮನೆಗಳಿಗೆ ಹಾನಿ:

ನವಲಗುಂದ ಪಟ್ಟಣದಲ್ಲಿ ಮಳೆಯಿಂದ 8 ಮನೆಗಳು ಕುಸಿದಿವೆ. ತಾಲೂಕಿನ ಚಿಲಕವಾಡ ಗ್ರಾಮದ ಎರಡು, ಬೆಳಹಾರ ಗ್ರಾಮದ ಎರಡು, ಶಾನವಾಡ ಗ್ರಾಮದಲ್ಲಿ 6, ಪಡೆಸೂರು, ಕುಮಾರಗೊಪ್ಪ, ಶಿರಕೋಳ ಗ್ರಾಮದಲ್ಲಿ ತಲಾ ಒಂದು ಮನೆ, ಗೊಬ್ಬರಗುಂಪಿ, ನಾಗನೂರು ಹಾಗೂ ಅಮರಗೋಳ ಗ್ರಾಮದಲ್ಲಿ ತಲಾ 5 ಮನೆಗಳು ಸೇರಿ ಒಟ್ಟು 36 ಮನೆಗಳು ಕುಸಿದಿವೆ ಎಂದು ತಹಸೀಲ್ದಾರ್‌ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಶಾಸಕ ಕೋನರಡ್ಡಿ ಭೇಟಿ

ಹಾನಿಯಾದ ಕೆಲ ಪ್ರದೇಶಗಳಿಗೆ ಶಾಸಕ ಎನ್.ಎಚ್. ಕೋನರಡ್ಡಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ರಸ್ತೆ ದುರಸ್ತಿಗೆ ಕ್ರಮ ಜರುಗಿಸುವುದಾಗಿ ಹೇಳಿದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು