- 5 ಕಿ.ಮೀ.ಸುತ್ತಿಕೊಂಡ ಗ್ರಾಮಸ್ಥರ ಪ್ರಯಾಣ । ಅಲ್ಲಲ್ಲಿ ಗೋಡೆ ಕುಸಿತ । ಗಾಳಿಗೆ ಅಡಕೆ ಮರ ಧರೆಗೆ
ತಾಲೂಕಿನಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆಯವರೆಗೂ ಸುರಿದ ಭಾರೀ ಮಳೆಗೆ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಗೆ ಸೇರಿದ 3 ಸೇತುವೆಗಳು ನೀರಿನಲ್ಲಿ ಮುಳುಗಿದ್ದು ಗ್ರಾಮಸ್ಥರು 5 ಕಿ.ಮೀ.ಸುತ್ತುವರಿದು ಪ್ರಯಾಣಿಸ ಬೇಕಾಯಿತು.
ಶೆಟ್ಟಿಕೊಪ್ಪದ ಮುಖ್ಯ ರಸ್ತೆಯಿಂದ ನೇರ್ಲೆಕೊಪ್ಪ, ಆಲಂದೂರು ಸಂಪರ್ಕ ಸೇತುವೆ ಮೇಲೆ 5 ಅಡಿ ನೀರು ಹರಿಯುತ್ತಿದೆ. ಶೆಟ್ಟಿಕೊಪ್ಪದ ಮುಖ್ಯ ರಸ್ತೆಯಿಂದ ಭೀಮನರಿ- ಚನ್ನಮಣಿ ಸಂಪರ್ಕದ ಚನ್ನಮಣಿ ಸೇತುವೆ ಮೇಲೂ ನೀರು ಹರಿಯುತ್ತಿದೆ. ಮುಖ್ಯ ರಸ್ತೆಯಿಂದ ಗಾಂಧಿ ಗ್ರಾಮ, ಮಡಬೂರು ಎಸ್ಟೇಟ್ ಸಂಪರ್ಕಿಸುವ ಸೇತುವೆ ಮೇಲೂ ನೀರು ನಿಂತಿದ್ದು ಗ್ರಾಮಸ್ಥರು 5 ಕಿ.ಮಿ.ಸುತ್ತು ಬಳಸಿ ಬಣಗಿ-ಮಳಲಿ-ಮಾವಿನಕೆರೆ, ಆಲಂದೂರು, ಗಾಂಧಿ ಗ್ರಾಮದ ಮಾರ್ಗವಾಗಿ ಸಂಚರಿಸಿದರು.ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸೇತುವೆ ಅಕ್ಕ ಪಕ್ಕದ ರೈತರ ಭತ್ತದ ಗದ್ದೆ, ಅಡಕೆ ತೋಟಗಳು ಜಲಾವೃತವಾದ ಪ್ರದೇಶಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಸಿದ ರಸ್ತೆ:
ಗಡಿಗೇಶ್ವರ ಸರ್ಕಾರಿ ಪ್ರೌಢ ಶಾಲೆ ಅಡುಗೆ ಮನೆಯ ಮೇಲೆ 2ನೇ ಬಾರಿ ಮರ ಉರುಳಿ ಬಿದ್ದಿದೆ. ಕಳೆದ 2 ದಿನದ ಹಿಂದೆ ಮರ ಉರುಳಿ ಕಟ್ಟಡಕ್ಕೆ ಹಾನಿಯಾಗಿತ್ತು. ನರಸಿಂಹರಾಜಪುರ ಪಟ್ಟಣದ ನಾಗರತ್ನ ಎಂಬುವರ ಮನೆ ಮಳೆಯಿಂದ ಕುಸಿದಿದೆ. ಪಟ್ಟಣದ 1 ನೇ ವಾರ್ಡಿನಲ್ಲಿ ಮಹಮ್ಮದ್ ರಫೀಕ್ ಎಂಬುವರ ಮನೆ ಗೋಡೆ ಕುಸಿದು, ಉಳಿದ ಗೋಡೆ ಬಿರುಕು ಬಿಟ್ಟಿದೆ.ಇದೇ ವಾರ್ಡಿನಲ್ಲಿ ರಂಗೇಗೌಡ್ರು ಎಂಬುವರ ಮನೆ ಗೋಡೆ ಬಿದ್ದಿದೆ.