ವೈದ್ಯರ ಸಲಹೆ ಇಲ್ಲದೇ ಅನಗತ್ಯ ಸ್ಕ್ಯಾನಿಂಗ್ ಬೇಡ: ಡಿಎಚ್‌ಒ ಡಾ.ರಮೇಶ್‌ಬಾಬು

KannadaprabhaNewsNetwork |  
Published : Jul 26, 2024, 01:39 AM IST
ಬಳ್ಳಾರಿ ತಾಲೂಕಿನ ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಡಿಎಚ್‌ಒ ಡಾ.ರಮೇಶ್ ಬಾಬು ಅವರು ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಿದರು.  | Kannada Prabha

ಸಾರಾಂಶ

ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ನಂತರವೇ ಮದುವೆ ಮಾಡಬೇಕು.

ಬಳ್ಳಾರಿ: ಸಾರ್ವಜನಿಕರು ವೈದ್ಯರ ಸಲಹೆ ಇಲ್ಲದೇ ಅನಗತ್ಯವಾಗಿ ಸ್ಕ್ಯಾನಿಂಗ್ ಮಾಡಿಸಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್‌ಬಾಬು ಸಲಹೆ ನೀಡಿದರು.

ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಜಿಲ್ಲೆಯಾದ್ಯಂತ ಗಂಡಾಂತರ ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಖುದ್ದು ಗರ್ಭಿಣಿಯರ ತಪಾಸಣೆ ಕೈಗೊಂಡು ಅವರು ಮಾತನಾಡಿದರು.

ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ನಂತರವೇ ಮದುವೆ ಮಾಡಬೇಕು. ಗರ್ಭಿಣಿಯೆಂದು ಗೊತ್ತಾದ ಕೂಡಲೇ ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಿ, ತಾಯಿ ಕಾರ್ಡ್ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೆ ಅನಗತ್ಯವಾಗಿ ಸ್ಕ್ಯಾನಿಂಗ್ ಮಾಡಿಸಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹೆರಿಗೆಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

ಪ್ರಸ್ತುತ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಮತ್ತು ಸಿಬ್ಬಂದಿ ಅವರಿಂದ ಉಚಿತ ಹೆರಿಗೆ ಸೇವೆ ನೀಡಲಾಗುತ್ತಿದೆ. ಜೊತೆಗೆ ಮಗುವನ್ನು ಬೆಚ್ಚಗಿನ ವಾತಾವರಣ ಕಲ್ಪಿಸಲು ಆಸ್ಪತ್ರೆಗಳಲ್ಲಿ ‘ಬೇಬಿ ವಾರ್ಮರ್’ ಸೌಲಭ್ಯ ಸಹಿತ ಇದ್ದು, ಮಗುವಿನ ಅಗತ್ಯ ಕಾಳಜಿ ವಹಿಸಲಾಗುತ್ತಿದೆ ಎಂದು ಹೇಳಿದರು.

ಗರ್ಭಿಣಿಯರು ಪ್ರತಿದಿನ ಸ್ಥಳೀಯವಾಗಿ ದೊರಕುವ ತರಕಾರಿ, ಹಸಿರು ತಪ್ಪಲು ಪಲ್ಯ, ಬೇಳೆಕಾಳು, ಮೊಳಕೆ ಕಾಳು, ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆ ಸೇವಿಸಬೇಕು. ತಾಯಿಯ ಆರೋಗ್ಯದ ಪರೀಕ್ಷೆಗಳನ್ನು ಕೈಗೊಂಡಾಗ ಕಂಡುಬರುವ ಆರೋಗ್ಯದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಪಡೆಯಬೇಕು ಎಂದು ವಿನಂತಿಸಿದರು.

ಗರ್ಭಿಣಿಯೆಂದು ತಿಳಿದ ನಂತರ ವೈದ್ಯರ ಸಲಹೆಯಂತೆ, ಎರಡೂವರೆ ತಿಂಗಳಿನಿಂದ ಮೂರೂವರೆ ತಿಂಗಳು ಅವಧಿಯಲ್ಲಿ ಸಹಜವಾಗಿ ಮೊದಲ ಬಾರಿ, ನಾಲ್ಕೂವರೆ ತಿಂಗಳಿನಿಂದ ಐದೂವರೆ ತಿಂಗಳಿನಲ್ಲಿ ಎರಡನೇ ಬಾರಿ, ಎಂಟೂವರೆ ತಿಂಗಳಿನಿಂದ ಒಂಬತ್ತನೇ ತಿಂಗಳಿನಲ್ಲಿ ಮೂರನೇ ಬಾರಿ ಸ್ಕ್ಯಾನಿಂಗ್ ಮಾಡಿಸಬೇಕು. ಒಂದು ವೇಳೆ ತೀರಾ ಅಗತ್ಯವೆನಿಸಿದಲ್ಲಿ ಮಾತ್ರ ತಜ್ಞರ ಸಲಹೆಯಂತೆ ಹೆಚ್ವುವರಿಯಾಗಿ ಸ್ಕ್ಯಾನಿಂಗ್ ಮಾಡಿಸಬೇಕು ಎಂದು ತಿಳಿಸಿದರು.

ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಔಷಧಾಧಿಕಾರಿ ವೀಣಾ, ಶುಶ್ರೂಷಣಾಧಿಕಾರಿ ಸುನೀತಾ, ವೈದ್ಯಕೀಯ ಪ್ರಯೋಗ ಶಾಲಾ ತಂತ್ರಜ್ಞೆ ಶ್ವೇತಾ ಸೇರಿದಂತೆ ಆಶಾ, ತಾಯಂದಿರು ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ