ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಒಂದೂವರೆ ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗುವುದು. ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ತುಂಗಭದ್ರಾ ಮಂಡಳಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
25ಎಚ್‌ಪಿಟಿ11- ಹೊಸಪೇಟೆಯ ತುಂಗಭದ್ರಾ ಜಲಾಶಯದ 28 ಕ್ರಸ್ಟ್ ಗೇಟ್‌ಗಳನ್ನು ತೆರೆದು ನದಿಗೆ 71,262 ಕ್ಯುಸೆಕ್ ನೀರು ಹರಿಬಿಡಲಾಗಿದ್ದು, ಗುರುವಾರ ರಾತ್ರಿ ವಿದ್ಯುದೀಪಾಲಂಕಾರದಲ್ಲಿ ಕಂಗೊಳಿಸಿದ ಜಲಾಶಯ.
ಪ್ರವಾಸಿಗರ ದಂಡು: ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದ್ದು, ಜಲಾಶಯದ 28 ಕ್ರಸ್ಟ್ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಿರುವ ಹಿನ್ನೆಲೆಯಲ್ಲಿ ಜಲಾಶಯ ವೀಕ್ಷಣೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.ಒಳ ಹರಿವು ಅಧಿಕವಾಗುತ್ತಿದಂತೇ ತುಂಗಭದ್ರಾ ಜಲಾಶಯ ಮೈದುಂಬಿಕೊಂಡಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಜಲಾಶಯದಿಂದ ದುಮ್ಮಿಕ್ಕುವ ನೀರಿನ ಮನ ಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಡ್ಯಾಂನತ್ತ ಧಾವಿಸಿ ಬರುತ್ತಿದ್ದಾರೆ. ಮೊಬೈಲ್ ಫೋನ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ. ಇನ್ನೂ ಗುಂಡಾ ಸಸ್ಯೋದ್ಯಾನ ಪ್ರದೇಶದಲ್ಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಲಾಶಯ ವೀಕ್ಷಣೆ ಮಾಡುತ್ತಿದ್ದಾರೆ.ಈ ಭಾಗದಲ್ಲಿ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಕಡೆಯಿಂದ ಬರುವ ಪ್ರವಾಸಿಗರು ತಮ್ಮ ಕಾರುಗಳನ್ನು ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಪಾರ್ಕಿಂಗ್ ಮಾಡಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ.