ಮಳೆ ವಿಪರೀತ, ಪ್ರವಾಹ ಆತಂಕದಲ್ಲಿ ಜನತೆ

KannadaprabhaNewsNetwork |  
Published : Jul 05, 2024, 12:49 AM IST
ಫೋಟೋ : ೪ಕೆಎಂಟಿ_ಜೆಯುಎಲ್_ಕೆಪಿ೧ : ಕತಗಾಲದಲ್ಲಿ ಚಂಡಿಕಾ ಹೊಳೆ ಉಕ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿರುವುದು. ಫೋಟೋ : ೪ಕೆಎಂಟಿ_ಜೆಯುಎಲ್_ಕೆಪಿ೧ಎ : ದೀವಗಿಯಲ್ಲಿ ಅಘನಾಶಿನಿ ನದಿ ಪಾತ್ರದ ತೋಟಗಳು ಜಲಾವೃತವಾಗಿರುವುದು. | Kannada Prabha

ಸಾರಾಂಶ

ಕೋನಳ್ಳಿಯ ಹಿರೇಕಟ್ಟು, ಊರಕೇರಿ ಸನಿಹದ ಗುಡ್ನಕಟ್ಟು ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಲು ಆರಂಭವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಪ್ರವೀಣ ಕರಾಂಡೆ ಹಾಗೂ ಇತರ ಅಧಿಕಾರಿಗಳು ಪರಿಸ್ಥಿತಿಯ ನಿಗಾ ವಹಿಸಿದ್ದಾರೆ.

ಕುಮಟಾ: ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಅಘನಾಶಿನಿ, ಬಡಗಣಿ, ಚಂಡಿಕಾ ನದಿ ಸಹಿತ ಹಲವು ಉಪನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಘನಾಶಿನಿ ನದಿ ತುಂಬಿ ಹರಿಯುತ್ತಿದ್ದು, ನದಿ ತಟವರ್ತಿ ಪ್ರದೇಶದ ತೋಟಗಳನ್ನು ಆವರಿಸಿದೆ. ದಿವಗಿಯ ಕೆಳಗಿನಕೇರಿ, ಐಗಳಕುರ್ವೆ, ಮಣಕೋಣ ಮುಂತಾದ ಹಲವೆಡೆ ಮನೆಯ ಅಂಗಳವರೆಗೆ ನೀರು ಬಂದಿದ್ದು, ಸಾರ್ವಜನಿಕರು ಕಟ್ಟೆಚ್ಚರ ಸ್ಥಿತಿಯಲ್ಲಿದ್ದಾರೆ. ಚಂದಾವರ ಹೊಳೆ(ಬಡಗಣಿ ಹೊಳೆ)ಯಲ್ಲೂ ಪ್ರವಾಹ ಉಂಟಾಗಿದೆ.

ಕೋನಳ್ಳಿಯ ಹಿರೇಕಟ್ಟು, ಊರಕೇರಿ ಸನಿಹದ ಗುಡ್ನಕಟ್ಟು ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಲು ಆರಂಭವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಪ್ರವೀಣ ಕರಾಂಡೆ ಹಾಗೂ ಇತರ ಅಧಿಕಾರಿಗಳು ಪರಿಸ್ಥಿತಿಯ ನಿಗಾ ವಹಿಸಿದ್ದಾರೆ. ಜನರನ್ನು ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ಉಳಿದೆಡೆ ಜನರ ಸಂಭವನೀಯ ಸ್ಥಳಾಂತರ ಕಾಲಕ್ಕೆ ಬೇಕಾದ ದೋಣಿ, ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿದೆ.

ಮಳೆಯ ಹೊಡೆತಕ್ಕೆ ಕತಗಾಲ ಬಳಿ ಚಂಡಿಕಾ ನದಿ ಉಕ್ಕಿ ಹರಿದು ಕುಮಟಾ- ಶಿರಸಿ(ರಾಷ್ಟ್ರೀಯ ಹೆದ್ದಾರಿ ೭೬೬ಇ) ಮಾರ್ಗದ ಮೇಲೆ ಹರಿಯುತ್ತಿದ್ದು, ಗುರುವಾರ ಬೆಳಗ್ಗೆಯಿಂದ ಸಂಪೂರ್ಣ ರಸ್ತೆ ಸಂಚಾರ ಬಂದ್ ಆಗಿದೆ. ನೀರಿನ ಹರಿವು ಕಡಿಮೆ ಇದೆ ಎಂದು ಭಾವಿಸಿ ಚಲಾಯಿಸಿಕೊಂಡ ಬಂದ ಶ್ರೀಕುಮಾರ ಬಸ್ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡು ಆತಂಕ ಸೃಷ್ಟಿಯಾಗಿತ್ತು. ತಕ್ಷಣ ದೋಣಿ ತಂದು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ದಡಕ್ಕೆ ಸೇರಿಸಲಾಯಿತು. ಅದೇ ರೀತಿ ರಸ್ತೆಯ ಎರಡೂ ದಿಕ್ಕಿನಲ್ಲಿದ್ದ ಜನರನ್ನು ಸಾಗಿಸಲಾಯಿತು. ಸ್ಥಳೀಯರಾದ ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಗಜಾನನ ಪೈ, ವಿನಾಯಕ ನಾಯ್ಕ ಇನ್ನಿತರರು ಪರಿಸ್ಥಿತಿ ನಿಭಾಯಿಸುವಲ್ಲಿ ತಾಲೂಕಾಡಳಿತದ ಜತೆ ಕೈಜೋಡಿಸಿದರು.

ಮಧ್ಯಾಹ್ನ ಬಳಿಕ ಸಂಜೆಯವರೆಗೂ ಮಳೆ ಸ್ವಲ್ಪ ಇಳಿಮುಖವಾಗಿದ್ದು, ಹೊಳೆ- ಹಳ್ಳಗಳಲ್ಲಿ ನೀರಿನ ಹರಿವು ಇಳಿಕೆಯಲಾರಂಭಿಸಿತ್ತು. ಆದರೆ ಸಂಜೆ ಹೊತ್ತಿಗೆ ಪುನಃ ಮಳೆ ಜೋರಾಗಿದ್ದು, ಪ್ರವಾಹ ಏರುವ ಲಕ್ಷಣಗಳಿವೆ. ಮಳೆಯಿಂದಾಗಿ ಶಿರಗುಂಜಿ, ಉಪ್ಪಿನಪಟ್ಟಣ, ಕತಗಾಲ, ಮುಗ್ವೇಖಾನವಾಡಿ ಇನ್ನಿತರ ಕಡೆ ಸಿಆರ್‌ಪಿಗಳ ವಿನಂತಿಯಂತೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಳೆಯ ವಿಷಮತೆಯ ಹಿನ್ನೆಲೆಯಲ್ಲಿ ತಾಲೂಕಿನ ಹಲವು ಖಾಸಗಿ ಶಾಲೆಗಳು ಕೂಡಾ ಬೇಗನೆ ತರಗತಿ ಮೊಟಕುಗೊಳಿಸಿ ಮಕ್ಕಳನ್ನು ಮನೆಗೆ ಕಳಿಸಿದ್ದಾರೆ.

ಸೂಕ್ತ ಕ್ರಮ: ಕುಮಟಾ ತಾಲೂಕಿನಲ್ಲಿ ಮಳೆಯಿಂದ ಸಂಭವನೀಯ ಅಪಾಯವಿರುವ ಗ್ರಾಮದ ಶಾಲೆಗಳಲ್ಲಿ ಆಯಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರ ಹಂತದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲು ನಿರ್ದೇಶನ ಕೊಡಲಾಗಿದೆ. ತಹಸೀಲ್ದಾರ್, ಜಿಲ್ಲಾಧಿಕಾರಿ, ಡಿಡಿಪಿಐ ಅವರ ಜತೆಯೂ ಚರ್ಚೆಯಾಗಿದೆ. ಯಾವುದೇ ಭಾಗದಲ್ಲಿ ಮಳೆಯಿಂದ ಸಮಸ್ಯೆಯಾಗುತ್ತಿದ್ದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ಕ್ರಮಕ್ಕೆ ಎಲ್ಲ ಶಾಲೆಗಳಿಗೆ ಸೂಚನೆ ನೀಡಿದ್ದೇವೆ ಎಂದು ಕುಮಟಾ ಬಿಇಒ, ತಾಪಂ ಪ್ರಭಾರ ಇಒ ರಾಜೇಂದ್ರ ಭಟ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು