ಕೆ.ಎಸ್. ಶರ್ಮಾ ಸಭಾಂಗಣದಲ್ಲಿ ಕಳೆದ 2 ವರ್ಷಗಳಿಂದ ಚಿಣ್ಣರಿಗೆ ನೃತ್ಯ ತರಬೇತಿ ಹಾಗೂ ಕಳೆದ 6 ತಿಂಗಳಿನಿಂದ ಚಕ್ರವ್ಯೂಹ ದೊಡ್ಡಾಟದ ತರಬೇತಿ ನೀಡಲಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ತರಬೇತಿ ನೀಡಲಾಗುತ್ತಿತ್ತು. ಕಳೆದ 2 ತಿಂಗಳಿಂದ ನಿತ್ಯವೂ ಸಂಜೆ 2 ಗಂಟೆ ಮಕ್ಕಳಿಗೆ ದೊಡ್ಡಾಟದ ತರಬೇತಿ ನೀಡಿ ಮಕ್ಕಳನ್ನು ಸಿದ್ಧಗೊಳಿಸಲಾಗಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ
ಮನೆಯಲ್ಲಿರುವ ಮಕ್ಕಳು ಕೈಬಿಟ್ಟು ಆಟವಾಡಿದರೆ ಸಾಕು ಎನ್ನುವವರೇ ಹೆಚ್ಚು. ಆದರೆ, ಇಲ್ಲಿ ಪುಟ್ಟಪುಟ್ಟ ಮಕ್ಕಳಿಂದಲೇ ದೊಡ್ಡಾಟ ಪ್ರದರ್ಶನ ಮಾಡಿಸುವ ಸಾಹಸಕ್ಕೆ ನಗರದ ಜನಪದ ಕಲಾಬಳಗ ಮುಂದಾಗಿದೆ.
ದೊಡ್ಡಾಟ ಪ್ರದರ್ಶನ, ಅದರ ಭಾಷೆ ಕಲಿಯಲು ದೊಡ್ಡವರೂ ಹೈರಾಣಾಗುತ್ತಾರೆ. ಆದರೆ, 10-12 ವರ್ಷದ ಚಿಣ್ಣರು ಪಟಪಟನೆ ದೊಡ್ಡಾಟದ ಭಾಷೆ, ನೃತ್ಯ ನೋಡುಗರ ಮನಸೆಳೆಯುತ್ತದೆ. ಚಿಕ್ಕಮಕ್ಕಳಾಗಿದ್ದರೂ ಸಹ ದೊಡ್ಡವರಂತೆ ಅಭಿನಯಿಸುವ ಶೈಲಿ, ಪಾತ್ರಕ್ಕೆ ತಕ್ಕಂತೆ ಅಭಿನಯದೊಂದಿಗೆ ಬಳಸುವ ಭಾಷೆಯು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.
2 ವರ್ಷ ತರಬೇತಿ:
ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಕೆ.ಎಸ್. ಶರ್ಮಾ ಸಭಾಂಗಣದಲ್ಲಿ ಕಳೆದ 2 ವರ್ಷಗಳಿಂದ ಚಿಣ್ಣರಿಗೆ ನೃತ್ಯ ತರಬೇತಿ ಹಾಗೂ ಕಳೆದ 6 ತಿಂಗಳಿನಿಂದ ಚಕ್ರವ್ಯೂಹ ದೊಡ್ಡಾಟದ ತರಬೇತಿ ನೀಡಲಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ತರಬೇತಿ ನೀಡಲಾಗುತ್ತಿತ್ತು. ಕಳೆದ 2 ತಿಂಗಳಿಂದ ನಿತ್ಯವೂ ಸಂಜೆ 2 ಗಂಟೆ ಮಕ್ಕಳಿಗೆ ದೊಡ್ಡಾಟದ ತರಬೇತಿ ನೀಡಿ ಮಕ್ಕಳನ್ನು ಸಿದ್ಧಗೊಳಿಸಲಾಗಿದೆ.
ಜನಪದ ಕಲಾಬಳಗ ಟ್ರಸ್ಟ್ ಹುಬ್ಬಳ್ಳಿ ವತಿಯಿಂದ ಜು. 6ರಂದು ಸಂಜೆ 4 ಗಂಟೆಗೆ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಭವನದಲ್ಲಿ ಮಕ್ಕಳಿಂದಲೇ ಚಕ್ರವ್ಯೂಹ ದೊಡ್ಡಾಟ ಪ್ರದರ್ಶನ ನಡೆಯಲಿದೆ. ಕಾರ್ಮಿಕ ಮುಖಂಡ ಪ್ರೊ. ಕೆ.ಎಸ್. ಶರ್ಮಾ ಉದ್ಘಾಟಿಸುವರು. ವಿಪ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ, ಶಾಸಕ ಮಹೇಶ ಟೆಂಗಿನಕಾಯಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಸಂಕಲ್ಪ ಶೆಟ್ಟರ, ಡಾ. ವಿ.ಎಸ್.ವಿ. ಪ್ರಸಾದ್, ಉಮೇಶ ಬಿ, ಡಾ. ಲತಿಫ್ ಕುನ್ನಿಬಾವಿ ಸೇರಿದಂತೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ರಮೇಶ ಕರಬಸಮ್ಮನವರ ಕನ್ನಡಪ್ರಭಕ್ಕೆ ತಿಳಿಸಿದರು.
ಪುರಾತನ, ಪೂರ್ವಜರ ಕಲೆಯಾಗಿರುವ ದೊಡ್ಡಾಟವು ಯಕ್ಷಗಾನದಂತೆ ಜನಮನ್ನಣೆಗೆ ತಲುಪಬೇಕೆಂಬುದು ಸಂಸ್ಥೆಯ ಮಹದಾಸೆ. ಈ ಕಲೆ ಕುರಿತು ಮಕ್ಕಳಲ್ಲೂ ಅರಿವು ಮೂಡಿಸುವುದಕ್ಕಾಗಿ ಮಕ್ಕಳಿಂದಲೇ ಪ್ರಥಮ ಬಾರಿಗೆ ದೊಡ್ಡಾಟ ಪ್ರದರ್ಶನ ಮಾಡಲಾಗುತ್ತಿದೆ ಎಂದು ಜನಪದ ಕಲಾಬಳದ ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಹಿರೇಮಠ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.