ಮುಂಡಗೋಡ: ನಿರಂತರವಾಗಿ ಸುರಿದ ಪರಿಣಾಮ ಅತಿವೃಷ್ಟಿಯಿಂದಾಗಿ ಬಹುತೇಕ ಭಾಗದ ಗೋವಿನಜೋಳ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆದ ರೈತರು ಹಾನಿ ಅನುಭವಿಸಿದ್ದು, ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.
ಭತ್ತದ ಕಣಜ ಎಂದೇ ಪ್ರಖ್ಯಾತಿ ಹೊಂದಿರುವ ಮುಂಡಗೋಡ ತಾಲೂಕಿನಲ್ಲಿ ಮೊದಲು ಸುಮಾರು ೧೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಭತ್ತ ಈಗ ಕೇವಲ ೫-೬ ಸಾವಿರ ಹೆಕ್ಟೇರ್ ಗೆ ಇಳಿದಿದೆ. ಭತ್ತಕ್ಕೆ ಸರಿಸಮಾನವಾಗಿ ಗೋವಿನಜೋಳ ಕೂಡ ಬೆಳೆಯಲಾಗುತ್ತಿದೆ.
ಕಳೆದ ಕೆಲ ವರ್ಷಗಳಿಂದ ಒಳ್ಳೆಯ ಫಸಲು ಪಡೆದು ಲಾಭ ಗಳಿಸಿದ ರೈತರು ಅದನ್ನೇ ಗಮನದಲ್ಲಿಟ್ಟುಕೊಂಡು ಈ ಬಾರಿ ಕೂಡ ರೈತರು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆದಿದ್ದರು. ಪ್ರಸಕ್ತ ಸಾಲಿನಲ್ಲಿ ನಿರಂತರ ಮಳೆಯಿಂದಾಗಿ ಗದ್ದೆಯಲ್ಲಿ ನೀರು ಸಂಗ್ರಹವಾಗಿ ತೇವಾಂಶ ಹೆಚ್ಚಿದ ಪರಿಣಾಮ ಗೋವಿನಜೋಳ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡು ಬೆಳೆಯಲ್ಲಿ ಕುಂಠಿತವಾಗಿದೆ. ಗೋವಿನಜೋಳ ಬೆಳೆಗಾರರು ನಷ್ಟ ಅನುಭವಿಸಿದ್ದು, ಕೈಸುಟ್ಟುಕೊಂಡಿದ್ದಾರೆ. ಇದರಿಂದ ಭಾರಿ ನಿರೀಕ್ಷೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಗೋವಿನ ಜೋಳ ಬೆಳೆದ ರೈತರಿಗೆ ನಿರಾಸೆಯನ್ನುಂಟು ಮಾಡಿದೆ.ಮಳೆ ಪ್ರಮಾಣ ಹೆಚ್ಚು:
ಪ್ರಸಕ್ತ ಸಾಲಿನಲ್ಲಿ ಜನವರಿ ೧ರಿಂದ ಜೂನ್ ೩೦ರವರೆಗೆ ತಾಲೂಕಿನಲ್ಲಿ ೫೪೬.೪ ಮಿ.ಮೀ. ಮಳೆಯಾಗಿದೆ. ವಾಡಿಕೆಯಂತೆ ೪೧೭.೯ ಮಿ.ಮೀ. ಮಳೆಯಾಗಬೇಕಿತ್ತು. ವಾಡಿಕೆಗಿಂತ ಸುಮಾರು ಶೇ.೩೧ರಷ್ಟು ಮಳೆ ಜಾಸ್ತಿಯಾಗಿದೆ. ಕಳೆದ ವರ್ಷ ಈ ವೇಳೆಗೆ ೩೭೨.೫ ಮಿ.ಮೀ. ಮಳೆಯಾಗಿತ್ತು.ಬಿಡುವಿಲ್ಲದೇ ನಿರಂತರವಾಗಿ ಮಳೆಯಾಗಿದ್ದರಿಂದ ತಗ್ಗು ಹಾಗೂ ನೀರು ನಿಲ್ಲುವಂತಹ ಪ್ರದೇಶದಲ್ಲಿ ಬೆಳೆಯಲಾದ ಗೋವಿನಜೋಳ ಬೆಳೆಗೆ ತೇವಾಂಶ ಹೆಚ್ಚಿದ ಪರಿಣಾಮ ಕೊಳೆರೋಗ ಕಾಣಿಸಿಕೊಂಡಿದೆ. ತುಕ್ಕು ರೋಗ ಬರುವ ಸಾದ್ಯತೆ ಇದೆ. ರೈತರು ಸಂಗ್ರಹವಾದ ಹೆಚ್ಚಿನ ಪ್ರಮಾಣದ ನೀರನ್ನು ಬಸಿಗಾಲುವೆ ಮೂಲಕ ಹೊರಗೆ ಹಾಕಿ ಔಷಧೋಪಚಾರ ಮಾಡಬೇಕಿದೆ ಎನ್ನುತ್ತಾರೆ ಮುಂಡಗೋಡ ಸಹಾಯಕ ಕೃಷಿ ನಿರ್ದೇಶಕ ಕೆ.ಎನ್ ಮಹಾರೆಡ್ಡಿ.