ನರಗುಂದ ತಾಲೂಕಿನಲ್ಲಿ ಹಬ್ಬದ ಸಂಭ್ರಮ ಕಸಿದ ಅತಿವೃಷ್ಟಿ

KannadaprabhaNewsNetwork |  
Published : Oct 21, 2025, 01:00 AM IST
(20ಎನ್.ಆರ್.ಡಿ4 ವ್ಯಾಪಾರಯಿಲ್ಲದೆ ಬೀಕೋ ಎನ್ನುತ್ತಿರುವ ಮಾರುಕಟ್ಟಿ. ಅತೀವೃಷ್ಟಿಯಲ್ಲಿ ಹಾನಿಯಾದ ಸಂಗ್ರಹದ ಪೋಟೋ.)    | Kannada Prabha

ಸಾರಾಂಶ

ತಿವರ್ಷ ದೀಪಾವಳಿ ಸಮಯದಲ್ಲಿ ವ್ಯಾಪಾರಸ್ಥರು ಉತ್ತಮ ವ್ಯಾಪಾರ ಮಾಡಿಕೊಳ್ಳುತ್ತಿದ್ದರು. ಆದರೆ ಈ ವರ್ಷ ರೈತರು ಸಂಕಷ್ಟಕ್ಕೆ ಸಿಲುಕಿದ್ದರಿಂದ ಪಟ್ಟಣದ ಮಾರುಕಟ್ಟೆಯಲ್ಲಿ ವ್ಯಾಪಾರ ಇಲ್ಲದೆ ಬಿಕೋ ಎನ್ನುತ್ತಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಪ್ರತಿವರ್ಷ ದೀಪಾವಳಿ ಹಬ್ಬವನ್ನು ಅನ್ನದಾತರು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಆದರೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ತಾಲೂಕಿನಲ್ಲಿ ಅಪಾರ ಬೆಳೆಹಾನಿಯಾಗಿದ್ದು, ರೈತರ ಹಬ್ಬದ ಸಡಗರಕ್ಕೆ ಮಂಕು ಕವಿದಂತಾಗಿದೆ.

ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನಜೋಳ, ಬಿಟಿ ಹತ್ತಿ, ಈರುಳ್ಳಿ, ತೊಗರಿ, ಕಬ್ಬು ಸೇರಿದಂತೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಎಲ್ಲ ಬೆಳೆಗಳು ಕಟಾವಿಗೆ ಬಂದ ಸಂದರ್ಭದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಬಿಟ್ಟು ಬಿಡದೇ ಮಳೆ ಸುರಿದಿದ್ದರಿಂದ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿತ್ತು.

ಇಲ್ಲ ಸಂಭ್ರಮ: ಅತಿವೃಷ್ಟಿಯಿಂದ ಅಂದಾಜು ಶೇ. 70ರಷ್ಟು ಬೆಳೆಹಾನಿಯಾಗಿದೆ. ಅಳಿದುಳಿದ ಶೇ. 30ರಷ್ಟು ಬೆಳೆಯನ್ನು ರೈತರು ಮಾರುಕಟ್ಟೆಗೆ ಮಾರಾಟ ಮಾಡಲು ಹೋದರೆ ಯೋಗ್ಯ ಬೆಲೆ ಸಿಗದೆ ಪರದಾಡುವಂತಾಗಿದೆ. ಇಂಥ ಸಮಯದಲ್ಲಿ ಸಂಭ್ರಮದಿಂದ ಆಚರಣೆ ಮಾಡುವ ಹಬ್ಬವೆಂದು ಕರೆಯುವ ದೀಪಾವಳಿಯ ಸಡಗರವನ್ನೇ ಅತಿವೃಷ್ಟಿ ಕಸಿದುಕೊಂಡಿದೆ ಎಂದು ಅನ್ನದಾತರು ಅಳಲು ತೋಡಿಕೊಳ್ಳುತ್ತಾರೆ. ಬೆಳೆಹಾನಿಯಾಗಿ ಹಲವು ದಿನ ಗತಿಸಿದರೂ ಪರಿಹಾರ ಮಾತ್ರ ಇನ್ನೂ ಗಗನಕುಸುಮವಾಗಿದೆ.

ವ್ಯಾಪಾರಿಗಳಿಗೆ ಹಿನ್ನಡೆ: ಪ್ರತಿವರ್ಷ ದೀಪಾವಳಿ ಸಮಯದಲ್ಲಿ ವ್ಯಾಪಾರಸ್ಥರು ಉತ್ತಮ ವ್ಯಾಪಾರ ಮಾಡಿಕೊಳ್ಳುತ್ತಿದ್ದರು. ಆದರೆ ಈ ವರ್ಷ ರೈತರು ಸಂಕಷ್ಟಕ್ಕೆ ಸಿಲುಕಿದ್ದರಿಂದ ಪಟ್ಟಣದ ಮಾರುಕಟ್ಟೆಯಲ್ಲಿ ವ್ಯಾಪಾರ ಇಲ್ಲದೆ ಬಿಕೋ ಎನ್ನುತ್ತಿದೆ. ಅತಿವೃಷ್ಟಿಯಿಂದ ನಮಗೂ ತೊಂದರೆಯಾಗಿದೆ, ದೀಪಾವಳಿ ಸೀಜನ್‌ ವೇಳೆ ಲಕ್ಷಾಂತರ ರು. ವ್ಯಾಪಾರವಾಗುತ್ತಿತ್ತು, ಆದರೆ ಈ ಬಾರಿ ಅತಿವೃಷ್ಟಿಯಿಂದ ರೈತರು ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ, ಹೀಗಾಗಿ ಗ್ರಾಹಕರಿಲ್ಲದೇ ನಷ್ಟ ಅನುಭವಿಸುವಂತಾಗಿದೆ ಎಂದು ಪಟ್ಟಣದ ರಿಬ್ಬನ್, ಗೊಂಡೆ ವ್ಯಾಪಾರಸ್ಥರಾದ ಸಲೀಂ ಅತ್ತಾರ ತಿಳಿಸಿದರು.

ಕಳೆ ಇಲ್ಲ: ಮುಂಗಾರು ಹಂಗಾಮಿನಲ್ಲಿ ಸಾಲ ಮಾಡಿ ಬಿತ್ತಿದ್ದ ಬೆಳೆ ಅತಿವೃಷ್ಟಿಯಿಂದ ಹಾನಿ ಅನುಭವಿಸುವಂತಾಗಿದೆ. ಒಂದೆಡೆ ದೀಪಾವಳಿ ಹಬ್ಬ ಬಂದಿದೆ. ಇನ್ನೊಂದೆಡೆ ಬೆಳೆಹಾನಿ ಪರಿಹಾರವೂ ಇಲ್ಲದೇ ಹಬ್ಬಕ್ಕೆ ಕಳೆ ಇಲ್ಲದಂತಾಗಿದೆ ಎಂದು ರೈತ ನಿಂಗಪ್ಪ ಸೈತಾಪೂರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌