ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕಾರೆಕೊಪ್ಪ ಬಳಿ ಪಿಎನ್ ಹೆರಿಟೇಜ್ ಸಂಪರ್ಕ ರಸ್ತೆಯಲ್ಲಿ ಭಾರೀ ಮರ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಶನಿವಾರಸಂತೆಯ ಪಶುವೈದ್ಯಕೀಯ ಆಸ್ಪತ್ರೆ ಬಳಿ ಮತ್ತು ಬಿದಿರೂರು ಬಳಿ ಮರವೊಂದು ಉರುಳಿ ವಾಹನ ಸಂಚಾರಕ್ಕೆ ತೊಡಕಾಯಿತು.
ಬುಧವಾರ ಕೂಡ ತಾಲೂಕಿನಾದ್ಯಂತ ಭಾರೀ ಮಳೆ ಬಿದ್ದ ಪರಿಣಾಮ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.ಪರದಾಡಿದ ವಿದ್ಯಾರ್ಥಿಗಳು, ಪೋಷಕರು:
ಮಂಗಳವಾರ ರಾತ್ರಿಯಿಂದಲೇ ಭಾರೀ ಮಳೆ ಸುರಿಯುತ್ತಿದ್ದರೂ, ಬುಧವಾರ ಬೆಳಗ್ಗೆ ರಜೆ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳು ಪರದಾಡಿದ ದೃಶ್ಯ ಕಂಡುಬಂತು. ಅಲ್ಲದೆ ಈ ಕುರಿತು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೂ ಕಂಡುಬಂತು.ಬೆಳಗ್ಗೆ ಶಾಲೆಗೆ ಹೋಗುವ ಸಮಯದಲ್ಲಿ ರಜೆ ಘೋಷಣೆ ಮಾಡಿದರೆ ಶಾಲಾ ವಾಹನಗಳು ಗ್ರಾಮೀಣ ಪ್ರದೇಶದಲ್ಲಿ ಬೇಗನೆ ಬರುವುದರಿಂದ ಅರ್ಧದಷ್ಟು ವಿದ್ಯಾರ್ಥಿಗಳು ಶಾಲೆಗೆ ಬಂದು ತಲುಪಿರುತ್ತಾರೆ . ಅಲ್ಲದೇ ಕೆಲವು ವಿದ್ಯಾರ್ಥಿಗಳು ವಾಹನದಲ್ಲೇ ಉಳಿದು ಬಿಡುತ್ತಾರೆ. ಹೀಗಾಗಿ ಪೋಷಕರು ಪರದಾಡುವಂತಾಗಿದೆ ಎಂದು ತಣ್ಣಿರುಹಳ್ಳದ ಗ್ರಾಮದ ಗಣೇಶ್ ಸೇರಿದಂತೆ ಹಲವು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.