ಮುಸಲಧಾರೆಗೆ ಮಹಾನಗರ ತತ್ತರ - ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : Jun 12, 2025, 04:01 AM ISTUpdated : Jun 12, 2025, 11:23 AM IST
ಹುಬ್ಬಳ್ಳಿಯಲ್ಲಿ ಮಳೆಗೆ ರಸ್ತೆಯಲ್ಲಿ ನೀರು ಹರಿಯುತ್ತಿರುವುದು. | Kannada Prabha

ಸಾರಾಂಶ

ಮಳೆಯಿಂದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಮನೆ, ಅಂಗಡಿ, ಶಾಪಿಂಗ್‌ ಕಾಂಪ್ಲೆಕ್ಸ್‌, ಅಪಾರ್ಟಮೆಂಟ್‌ಗಳ ಬೇಸ್‌ಮೆಂಟ್‌ಗಳಲ್ಲೂ ನೀರು ನುಗ್ಗಿದೆ.

ಹು​ಬ್ಬ​ಳ್ಳಿ: ಬುಧವಾರ ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಹುಬ್ಬಳ್ಳಿ ಮಹಾನಗರ ಅಕ್ಷರಶಃ ಬೆಚ್ಚಿ ಬಿದ್ದಿದೆ. ಸುಮಾರು ಐದು ಗಂಟೆಗಳ ಕಾಲ ಎಡಬಿಡದೆ ಸುರಿದ ಧಾರಾಕಾರ ವರ್ಷಧಾರೆಗೆ ಮಹಾನಗರ ಸಂಪೂರ್ಣವಾಗಿ ಮುಳುಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತ ಹಿನ್ನೆಲೆಯಲ್ಲಿ ವಾಹನಗಳು ಸಂಚರಿಸದಂತಹ ವಾತಾವರಣ ನಿರ್ಮಾಣ‍ವಾಯಿತು.

ಮಳೆಯಿಂದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಮನೆ, ಅಂಗಡಿ, ಶಾಪಿಂಗ್‌ ಕಾಂಪ್ಲೆಕ್ಸ್‌, ಅಪಾರ್ಟಮೆಂಟ್‌ಗಳ ಬೇಸ್‌ಮೆಂಟ್‌ಗಳಲ್ಲೂ ನೀರು ನುಗ್ಗಿದೆ. ಸಂಜೆ 6.30 ಕ್ಕೆ ಆರಂಭವಾದ ಮಳೆ ರಾತ್ರಿ 11.30 ಗಂಟೆಯ ವರೆಗೂ ಮುಂದುವರಿದಿತ್ತು. ವರ್ಷಧಾರೆಗೆ ನಗರ ಬೆಚ್ಚಿ ಬಿದ್ದಿದೆ. ಕಳೆದ 10-15 ದಿನಗಳಿಂದ ಬಿಸಿಲಿನ ವಾತಾವರಣವಿದ್ದು, ಬುಧವಾರವೂ ಮಧ್ಯಾಹ್ನದ ವರೆಗೂ ಬಿಸಿಲಿನ ವಾತಾವರಣವೇ ಇತ್ತು. ಸಂಜೆಯ ನಂತರ ದಟ್ಟ ಕಾರ್ಮೋಡ ಸೃಷ್ಟಿಯಾಗಿ ಮುಸಲಧಾರೆಗೆ ಜನ ಕಂಗಾಲಾದರು. ಮೇಘಸ್ಫೋಟದಂತ ವಾತಾವರಣ ಸೃಷ್ಟಿಯಾಯಿತು. ತಗ್ಗು ಪ್ರದೇಶಗಳು ಜಲಾವೃತವಾದವು. ಜನರೆಲ್ಲ ಮನೆ ಹೊಕ್ಕ ನೀರನ್ನು ಹೊರ ಹಾಕುವುದರಲ್ಲಿ ತಲ್ಲೀನರಾಗಿದ್ದರು. ಸಂಜೆ ಕಚೇರಿ ಬಿಟ್ಟು ಮನೆಗೆ ತೆರಳಲಾಗದೇ ಜನರು ನಿಂತಲ್ಲಿಯೇ ನಿಲ್ಲುವಂತಾಯಿತು.

ಬಿರುಗಾಳಿ, ಗುಡುಗು, ಸಿಡಿಲಿನ ಅಬ್ಬರದ ಜೊತೆ ಮಾಳೆ ಮುಂದುವರಿದಿತ್ತು. ನವಲಗುಂದ, ಕುಂದಗೋಳ, ಧಾರವಾಡ ಸೇರಿದಂತೆ ಜಿಲ್ಲೆಯ ಹಲವಾರು ಭಾಗಗಳಲ್ಲಿ ಮಳೆ ಅಬ್ಬರಿಸಿದೆ. ಮಹಾನಗರ ಇನ್ನೂ ಮಳೆಯ ಅಬ್ಬರದ ಸಿದ್ಧತೆಯಲ್ಲಿ ಇಲ್ಲದೇ ಇರುವುದರಿಂದ ಮಳೆಯಿಂದ ಜನರು ತೊಂದರೆಗೊಳಗಾದರು.

ಎಲ್ಲೆಲ್ಲೂ ನೀರು : ಮಳೆಯಿಂದಾಗಿ ರಸ್ತೆಗಳೆಲ್ಲ ಕೆರೆಯಾಗಿ ಮಾರ್ಪಟ್ಟಿದ್ದವು. ಎಲ್ಲಿ ನೋಡಿದರಲ್ಲಿ ಮಳೆಯ ನೀರು ನಿಂತು ಜನರು ಪರದಾಡುವಂತಾಯಿತು. ಹುಬ್ಬಳ್ಳಿ-ಧಾರವಾಡ ಮುಖ್ಯರಸ್ತೆಯಲ್ಲಿ ನೀರು ನಿಂತು ವಾಹನಗಳು ಸಂಚರಿಸದಂತಾಯಿತು. ಇಲ್ಲಿನ ಉಣಕಲ್ಲ ಕೆರೆಯ ಮುಂಭಾಗದಲ್ಲಿರುವ ಹುಬ್ಬಳ್ಳಿ-ಧಾರವಾಡ ಮುಖ್ಯರಸ್ತೆಯಲ್ಲಿ 4 ಅಡಿಗೂ ಹೆಚ್ಚು ನೀರು ನಿಂತ ಹಿನ್ನಲೆಯಲ್ಲಿ ಹಲವು ವಾಹನಗಳು ಸಂಚರಿಸದೇ ರಸ್ತೆಯಲ್ಲಿಯೇ ನಿಂತವು. ಬಿಆರ್‌ಟಿಎಸ್‌ ಕಾರಿಡಾರ್‌ಗಳಲ್ಲಿ ಅಪಾರ ಪ್ರಮಾಣದ ಮಳೆನೀರು ನಿಂತಿದ್ದರಿಂದ ಸಾರ್ವಜನಿಕರು ಪರದಾಡಿದರು.

ತುಳಜಾಭವಾನಿ ವೃತ್ತ, ದಾಜಿಬಾನ್‌ ಪೇಟ್, ಗಣೇಶಪೇಟ, ಮಂಟೂರು ರಸ್ತೆ, ಗಣೇಶ ನಗರ, ಆನಂದ ನಗರ ಸೇರಿದಂತೆ ವಿವಿಧೆಡೆ ವಾಣಿಜ್ಯ ಸಂಕೀರ್ಣ, ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದ್ವಿಚಕ್ರ ವಾಹನಗಳೆಲ್ಲ ನೀರಲ್ಲೇ ನಿಂತಿದ್ದವು. ಹಳೇಹುಬ್ಬಳ್ಳಿ ಗಣೇಶ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಮನೆ, ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ನಿಂತು ರಸ್ತೆಗಳೆಲ್ಲ ಕೆರೆಯಾಗಿ ಮಾರ್ಪಟ್ಟವು. ಮ​ಹಾ​ನ​ಗ​ರದ ಜ​ನತೆ ತಮ್ಮ ನಿ​ತ್ಯದ ಕೆ​ಲಸ ಮು​ಗಿಸಿ ಮ​ಳೆ​ಯಲ್ಲೇ ನೆ​ನೆ​ದು​ಕೊಂಡು, ಕೆ​ಲ​ವರು ಕೊಡೆ ಹಾಗೂ ಜ​ರ್ಕಿನ್‌ ಸ​ಹಾ​ಯ​ದಿಂದ ಮ​ನೆ​ಯತ್ತ ಹೆಜ್ಜೆ ಹಾ​ಕು​ತ್ತಿದ್ದ ದೃ​ಶ್ಯ​ ಕಂಡು ಬಂದವು.

ಮ​ಳೆ​ಯಿಂದ ನ​ಗ​ರದ ಚೆ​ನ್ನಮ್ಮ ಸ​ರ್ಕಲ್‌, ಹ​ಳೆ ಕೋರ್ಟ್‌ ಸ​ರ್ಕಲ್‌, ದು​ರ್ಗ​ದ​ಬೈಲ್‌, ದಾ​ಜೀ​ಬಾನ್‌ಪೇಟ್‌, ಶಾಹ ಬ​ಜಾರ, ಪೆಂಡಾ​ರ​ಗಲ್ಲಿ, ಹಳೆ ಹು​ಬ್ಬಳ್ಳಿ, ಜ​ನತಾ ಬ​ಜಾರ, ನ್ಯಾ​ಷ​ನಲ್‌ ಮಾರ್ಕೇಟ್‌, ಸ್ಟೇ​ಶನ್‌ ರ​ಸ್ತೆ​ಯಲ್ಲಿ ನೀರು ನಿಂತು ವಾ​ಹ​ನಗಳ ಸು​ಗಮ ಸಂಚಾ​ರಕ್ಕೆ ತಡೆ ಉಂಟಾ​ಯಿತು. ನ​ಗ​ರದ ಕೆ​ಲವು ಪ್ರ​ದೇ​ಶ​ದಲ್ಲಿ ಗಾ​ಳಿ-ಮ​ಳೆಗೆ ಗಿ​ಡದ ರೆಂಬೆ ಕೊಂಬೆ​ಗಳು ಮು​ರಿ​ದ​ವು. ದಿ​ಢೀರ್‌ ಮ​ಳೆ​ಯಿಂದ ನ​ಗ​ರದ ಕೆ​ಲವು ಪ್ರ​ದೇ​ಶ​ದಲ್ಲಿ ಮುನ್ನೆ​ಚ್ಚ​ರಿಕೆ ಕ್ರ​ಮ​ವಾಗಿ ಗಂಟೆಗೂ ಅ​ಧಿ​ಕ ​ಕಾಲ ವಿ​ದ್ಯುತ್‌ ಕ​ಡಿ​ತ​ಗೊ​ಳಿ​ಸ​ಲಾ​ಯಿ​ತು. ಬು​ಧ​ವಾರ ರಾ​ತ್ರಿ​ಯ​ ವ​ರೆಗೂ ಮ​ಳೆ ಆ​ರ್ಭಟ ಮುಂದು​ವ​ರೆ​ದಿ​ತ್ತು.

PREV
Read more Articles on

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ