ಹುಬ್ಬಳ್ಳಿ: ಕೃಷಿ ಚಟುವಟಿಕೆ ಆರಂಭಿಸುವ ಮುನ್ನ ನಡೆಯುವ ರೈತಾಪಿ ವರ್ಗದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಕಾರ ಹುಣ್ಣಿಮೆಯನ್ನು ಬುಧವಾರ ಮಹಾನಗರ ಸೇರಿದಂತೆ ಎಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಎತ್ತು ಹಾಗೂ ಹೋರಿಗಳ ಕೊಂಬಿಗೆ ಬಣ್ಣ ಹಚ್ಚಲಾಗಿತ್ತು. ಜೂಲಾಗಳನ್ನು ಹಾಕಿ, ಕೊಬ್ಬರಿಗಳಿಗೆ ರಿಬ್ಬನ್ ಕಟ್ಟಿ ಸಿಂಗರಿಸಲಾಗಿತ್ತಲ್ಲದೇ, ಕೊರಳಲ್ಲಿ ಕಡಬು, ಕೊಡಬಳೆ, ಕೊಬ್ಬರಿ ಸರ ಹಾಕಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಜೆ ನಗರದ ಕೆಲ ಪ್ರದೇಶದಲ್ಲಿ ಹೋರಿಗಳನ್ನು ಓಡಿಸುವ ಮತ್ತು ಬೆದರಿಸುವ ಸ್ಪರ್ಧೆ ನಡೆದವು. ಜಾನುವಾರುಗಳ ಕೊಂಬಿಗೆ ಕಟ್ಟಿದ್ದ ಕೊಬ್ಬರಿ ಹಾಗೂ ಚಕ್ಕುಲಿ ಸೇರಿದಂತೆ ವಿವಿಧ ತಿನಿಸುಗಳನ್ನು ಹರಿದುಕೊಳ್ಳುವ ಸ್ಪರ್ಧೆಯಲ್ಲಿ ಯುವಕರು ಭಾಗವಹಿಸಿದ್ದರು. ನಂತರ ಬಿಳಿ ಹಾಗೂ ಕರಿ ಎತ್ತುಗಳಿಂದ ಕರಿ ಹರಿಯುವ ಸಂಪ್ರದಾಯವೂ ನಡೆಯಿತು.ಮಹಿಳೆಯರಿಂದ ವಟ ಸಾವಿತ್ರಿ ಪೂಜೆ: ಹುಬ್ಬಳ್ಳಿ ದೇಶಪಾಂಡೆ ನಗರ, ಕೇಶ್ವಾಪೂರ, ವಿದ್ಯಾನಗರ, ಲಿಂಗರಾಜ ನಗರ, ಕಮರಿಪೇಟೆ, ಅಕ್ಷಯ ಕಾಲನಿ, ಗೋಕುಲ ಗ್ರಾಮ, ಉಣಕಲ್ ಸೇರಿದಂತೆ ಎಲ್ಲೆಡೆ ಬುಧವಾರ ವಟ ಸಾವಿತ್ರಿ ಪೂಜೆಯನ್ನು ಶ್ರದ್ಧಾ ಬಕ್ತಿಯಿಂದ ಆಚರಿಸಿದರು.