ಮಲೆನಾಡಿನ ಹಲವೆಡೆ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರದಲ್ಲಿ ವ್ಯತ್ಯಯ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಾದ್ಯಂತ ಶುಕ್ರವಾರ ಮಧ್ಯಾಹ್ನದ ನಂತರ ಗುಡುಗು, ಭಾರೀ ಗಾಳಿ ಸಹಿತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು.
ಮಲೆನಾಡಿನ ಹಲವೆಡೆ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಕೆಲವೆಡೆ ಗಂಟೆ ಗಟ್ಟಲೇ ಪ್ರಯಾಣಿಕರು ತಮ್ಮ ವಾಹನಗಳಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು.ಚಿಕ್ಕಮಗಳೂರು- ಕೊಪ್ಪ ಮಾರ್ಗದ ಹಲವೆಡೆ ಮರಗಳು ರಸ್ತೆಗೆ ಬಿದ್ದಿದ್ದವು. ನಾರ್ವೆಯಿಂದ ಜಯಪುರ, ಬನ್ನೂರು, ಆಲ್ದೂರು, ಕೂದುವಳ್ಳಿವರೆಗೆ ಮರಗಳು ರಸ್ತೆಗೆ ಉದ್ದಕ್ಕೂ ಅಲ್ಲಲ್ಲಿ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಬನ್ನೂರು- ಶಂಕರ್ ಪಾಲ್ಸ್ ಬಳಿ ಬೃಹತ್ ಗಾತ್ರದ ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಕಿಲೋ ಮೀಟರ್ ಗಟ್ಟಲೆ ವಾಹನಗಳು ಭಾರೀ ಮಳೆಯಲ್ಲಿ ರಸ್ತೆಯ ಮೇಲೆ ನಿಂತಿದ್ದವು. ಹಾಗೆಯೇ ಆಲ್ದೂರು, ಚಿಕ್ಕಮಾಗರವಳ್ಳಿ ಬಳಿಯಲ್ಲೂ ಮರಗಳು ಬಿದ್ದಿದ್ದವು.
ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಯವರು ಸ್ಥಳೀಯರ ನೆರವಿನಿಂದ ಮರಗಳ ತೆರವು ಕಾರ್ಯದಲ್ಲಿ ತೊಡಗಿದ್ದರು. ಸಂಜೆಯವರೆಗೆ ಮಲೆನಾಡಿನಲ್ಲಿ ಮರಗಳು ಬೀಳುತ್ತಲೇ ಇದ್ದವು. ವಾಹನಗಳ ಮೇಲೆ ಮರಗಳು ಬೀಳುವ ಆತಂಕದಲ್ಲೇ ಸಾರ್ವಜನಿಕರು ಪ್ರಯಾಣಿಸುತ್ತಿದ್ದರು.ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ತರೀಕೆರೆ ತಾಲೂಕಿನಲ್ಲೂ ಗುಡುಗು ಸಹಿತ ಮಳೆ ಬಂದಿತು.ಪೋಟೋ ಫೈಲ್ ನೇಮ್ 19 ಕೆಸಿಕೆಎಂ 4ಚಿಕ್ಕಮಗಳೂರು- ಬಾಳೆಹೊನ್ನೂರು ಮಾರ್ಗದಲ್ಲಿರುವ ಬನ್ನೂರು ಬಳಿ ಶುಕ್ರವಾರ ಮರವೊಂದು ರಸ್ತೆಯ ಮೇಲೆ ಬಿದ್ದಿರುವುದು.
ಭಾರಿ ಮಳೆ ಗಾಳಿಗೆ ತತ್ತರಿಸಿದ ನರಸಿಂಹರಾಜಪುರ- ಸಾಲು, ಸಾಲಾಗಿ ಬಿದ್ದ ಮರಗಳು, ವಿದ್ಯುತ್ ಕಂಬಗಳು । ಬೈಕ್ ಸವಾರನಿಗೆ ಪೆಟ್ಟುಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವಿವಿಧೆಡೆ ಗುರುವಾರ ಸಂಜೆ 6.30ರಿಂದ 7.30ರವರೆಗೆ ಸುಮಾರು 1 ಗಂಟೆಗಳ ಕಾಲ ಸುರಿದ ಭಾರಿ ಮಳೆ, ಗುಡುಗು ಸಿಡಿಲು, ಗಾಳಿಯಿಂದಾಗಿ ಬಿ.ಎಚ್.ಕೈಮರ ಸುತ್ತ ಮುತ್ತ ಅನಾಹುತ ಸಂಭವಿಸಿದೆ.ಬಿ.ಎಚ್.ಕೈಮರ-ಕೋಗಳ್ಳಿ ರಸ್ತೆಯಲ್ಲಿ ಸಂಜೆ 7 ಗಂಟೆಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಮಾಳೂರು ದಿಣ್ಣೆಯ ಚಿಟ್ಟೋಡಿ ಈಶ್ವರನಾಯ್ಕ ರಸ್ತೆಗೆ ಬಿದ್ದಿದ್ದ ಮರದ ಗೆಲ್ಲು ಕಾಣದೆ ಉರುಳಿ ಬಿದ್ದಿದ್ದಾರೆ. ಅವರ ಕಾಲಿಗೆ ತೀವ್ರ ಪೆಟ್ಟಾಗಿದ್ದು ತಕ್ಷಣ ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲಾಗಿದೆ.
ಬಿ.ಎಚ್.ಕೈಮರದ ಲಿಂಗಣ್ಣ ಅವರಿಗೆ ಸೇರಿದ ಕೊಡಗಿ ವೆಲ್ಡಿಂಗ್ ಶಾಪ್ ಮೇಲೆ ಮರದ ಗೆಲ್ಲು ಉರುಳಿ ಬಿದ್ದು ಕಟ್ಟಡದ ಮೇಲ್ಛಾವಣಿಗೆ ಹಾನಿಯಾಗಿ ಶೀಟುಗಳು ಪುಡಿಯಾಗಿದೆ. ಮಳೆಯ ನೀರು ವೆಲ್ಡಿಂಗ್ ಮಿಷನ್ ಗೆ ಹೋಗಿ ಮಿಷನ್ ಹಾಳಾಗಿದೆ. ಪಕ್ಕದ ವಿದ್ಯುತ್ ಕಂಬ ತುಂಡಾಗಿದೆ. ಬಿ.ಎಚ್.ಕೈಮರದ ಸರ್ಕಾರಿ ಶಾಲೆ ಕಾಂಪೌಂಡು ಮೇಲೆ ಭಾರಿ ಗಾತ್ರದ ಮರ ಉರುಳಿ ಕಾಂಪೌಂಡು ಜಖಂ ಆಗಿದೆ. ಪಕ್ಕದ ಶಾಲಾ ಶೌಚಾಲಯದ ಶೀಟುಗಳು ಮುರಿದಿವೆ.ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಸೇರಿದ ವಸತಿ ಗೃಹದ ಮೇಲೆ ಮರ ಉರುಳಿ ಬಿದ್ದಿದ್ದು ಮೇಲ್ಛಾವಣಿ ಹಾಳಾಗಿದೆ. ಯಡಗೆರೆಯ ಕಬ್ಬಿನತೋಟ ಶ್ರೀನಿವಾಸ್ ಎಂಬುವರ ಮನೆ ಹಿಂಭಾಗದ ಕಟ್ಟಡಕ್ಕೆ ಹಾಕಿದ್ದ ಹತ್ತಾರು ಶೀಟುಗಳು ಗಾಳಿಗೆ ಹಾರಿ ಬಿದ್ದು ಪುಡಿಯಾಗಿದೆ.ಉರುಳಿ ಬಿದ್ದ ನೇಂದ್ರ ಬಾಳೆ:ಬಿ.ಎಚ್.ಕೈಮರ ಸುತ್ತ ರೈತರು ಬೆಳೆದಿದ್ದ ನೇಂದ್ರ ಬಾಳೆ ಗಿಡಗಳು ಗಾಳಿಯಿಂದಾಗಿ ಬಾಳೆ ಗೊನೆ ಸಮೇತ ಉರುಳಿ ಬಿದ್ದಿದೆ. ಗುಡ್ಡೇಹಳ್ಳದಲ್ಲಿ ವರ್ಗೀಸ್ ಎಂಬುವರಿಗೆ ಸೇರಿದ ಜಾಗದಲ್ಲಿ ಸಿಂಸೆಯ ಜೋಸೆಫ್ ಎಂಬುವರು ಗುತ್ತಿಗೆ ಆಧಾರದಲ್ಲಿ ಜಮೀನು ಪಡೆದು 1300 ನೇಂದ್ರ ಬಾಳೆ ನೆಟ್ಟಿದ್ದರು. ಇನ್ನು ಒಂದು ತಿಂಗಳಲ್ಲಿ ಬಾಳೆ ಗೊನೆ ಕಡಿಯಬಹುದಿತ್ತು. ಗಾಳಿಗೆ 600 ಬಾಳೆ ಮರ ಗೊನೆ ಸಮೇತ ಉರುಳಿ ಬಿದ್ದು ಲಕ್ಷಾಂತರ ರು. ನಷ್ಟ ಉಂಟಾಗಿದೆ. ಕೈಮರ ಶುಂಠಿ ದೇವಸಿ ಎಂಬುವರು ಬೆಳೆದಿದ್ದ 500 ನೇಂದ್ರ ಬಾಳೆ, 15 ಅಡಕೆ ಮರಗಳು ಉರುಳಿ ಬಿದ್ದಿವೆ. ವಗಡೆಯ ಬಿನು ಎಂಬವರು ಬೆಳೆದಿದ್ದ 500 ರಿಂದ 600 ನೇಂದ್ರಬಾಳೆ ನೆಲ ಕಚ್ಚಿದೆ.
ಉರುಳಿದ ಅಡಕೆ, ರಬ್ಬರ್ಭಾರೀ ಗಾಳಿಗೆ ಅಡಕೆ, ರಬ್ಬರ್ ಮರ ಸಹ ಉರುಳಿ ಬಿದ್ದಿದೆ. ಈಚಿಕೆರೆ, ಕೈಮರ, ಕೋಗಳ್ಳಿ, ಬಿಳಾಲುಕೊಪ್ಪ, ವಗಡೆ ಮುಂತಾದ ಕಡೆ ಅಡಕೆ, ರಬ್ಬರ್ ಮರಗಳು ಉರುಳಿದೆ. ಬಿಳಾಲು ಮನೆಯ ದೀಪಕ್, ಮಂಜುನಾಥ್, ಕೋಗಳ್ಳಿ ರಂಗಪ್ಪಗೌಡ, ವಾಸಪ್ಪಗೌಡ, ಮಹೇಶ್, ಪೌಲೋಸ್ ಹಾಗೂ ಇತರ ರೈತರ ಅಡಕೆ ಮರ, ರಬ್ಬರ್ ಮರಗಳು ನೆಲಕಚ್ಚಿವೆ.ಬಿ.ಎಚ್.ಕೈಮರದಿಂದ -ಕುದುರೆಗುಂಡಿ ರಸ್ತೆಯ ಗುಡ್ಡೇಹಳ್ಳದವರೆಗೆ, ಕೈಮರದಿಂದ ಬಾಳೆ ಹೊನ್ನೂರು ರಸ್ತೆ, ಗುಬ್ಬಿಗಾ ರಸ್ತೆಯ ತುಂಬಾ ಕಾಡು ಮರಗಳ ಗೆಲ್ಲುಗಳು ಉರುಳಿ ಬಿದ್ದು ಕೆಲ ಸಮಯ ವಾಹನ ಸಂಚಾರಕ್ಕೆ ತೊಂದರೆ ಯಾಗಿತ್ತು. ತಕ್ಷಣ ಮರದ ಗೆಲ್ಲು ತೆಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಲ್ಲಲ್ಲಿ ವಿದ್ಯುತ್ ತಂತಿ ಮೇಲೆ ಮರಗಳು ಉರುಳಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು. ಇದರಿಂದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಪರದಾಡುವಂತಾಯಿತು.
--ಶೃಂಗೇರಿ ಗುಡುಗು ಸಹಿತ ಸಾಧಾರಣ ಮಳೆ
ಶೃಂಗೇರಿ: ತಾಲೂಕಿನ ಕೆಲವೆಡೆ ಶುಕ್ರವಾರ ಮಧ್ಯಾಹ್ನ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಪಟ್ಟಣದಲ್ಲಿ ಮಧ್ಯಾಹ್ನ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆ ಗುಡುಗು ಸಹಿತ ತುಂತುರು ಮಳೆ ಬಿದ್ದಿತು.ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಯಿತು. ಗುರುವಾರ ಸಂಜೆ ಪಟ್ಟಣ ಸೇರಿದಂತೆ ನೆಮ್ಮಾರು, ತೆಕ್ಕೂರು, ಬೇಗಾರು, ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಿಡಿಲು ಸಹಿತ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಭಾರೀ ಮಳೆ ಸುರಿಯಿತು.--
ತರೀಕೆರೆ: ಮಳೆಗೆ ತಂಪಾದ ಇಳೆತರೀಕೆರೆ: ಕಳೆದ ನಾಲ್ಕೈದು ದಿನಗಳ ಹಿಂದೆ ಪಟ್ಟಣದಲ್ಲಿ ಸುರಿದಿದ್ದ ಮೊದಲ ಮಳೆಯಿಂದಾಗಿ ಒಂದು ದಿವಸದ ಮಟ್ಟಿಗೆ ವಾತಾವರಣ ತುಸು ತಂಪಾಗಿದ್ದು ಮರುದಿನದಿಂದಲೇ ಪುನಃ ಬಿರು ಬೇಸಿಗೆಯಿಂದ ತಾಪಮಾನ ಹೆಚ್ಚಾಗಿತ್ತು.ಶುಕ್ರವಾರ ಬೆಳಗಿನಿಂದ ಬಿರು ಬೇಸಿಗೆ ಇತ್ತು, ಆದರೆ ಮಧ್ಯಾನ್ಹದಿಂದ ದಟ್ಟವಾದ ಮೋಡ ಕವಿದಿದ್ದು, ಮಧ್ಯಾನ್ಹ 3.30ರಲ್ಲಿ ಮಿಂಚು ಗುಡುಗು ಭಾರೀ ಗಾಳಿ ಸಹಿತ ಇಪ್ಪತ್ತು ನಿಮಿಷಕ್ಕೂ ಹೆಚ್ಚು ಸಮಯ ಸಾಧಾರಣ ಮಳೆ ಸುರಿಯಿತು.ಮಳೆಯ ಜೊತೆಗೆ ಭಾರೀ ಗಾಳಿ ಬಿಸತೊಡಗಿದ್ದರಿಂದ ಪಟ್ಟಣದಲ್ಲಿ ಅನೇಕ ಮರಗಳ ಭಾರೀ ಕೊಂಬೆಗಳು ಮುರಿದು ಬಿದ್ದು ಕೆಲ ಸಮಯ ವಿದ್ಯುತ್ ಸ್ಥಗಿತಗೊಂಡಿತ್ತು.ಮಳೆ ಪಟ್ಟಣವನ್ನು ತಂಪಾಗಿಸಿದೆ.
--ಬಾಳೆಹೊನ್ನೂರು ಸುತ್ತಮುತ್ತ ಮಳೆ
ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಗುಡುಗು, ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗಿದೆ.ಮಧ್ಯಾಹ್ನ ಗುಡುಗು ಸಹಿತ ಆರಂಭಗೊಂಡ ಮಳೆ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸುರಿದಿದೆ. ಪಟ್ಟಣದ ಶಾಂತಿ ನಗರದಲ್ಲಿ ಜಲಜೀವನ್ ಕಾಮಗಾರಿಗಾಗಿ ಪೈಪ್‌ಲೈನಿಗಾಗಿ ಚರಂಡಿ ತೆಗೆದಿದ್ದು, ಧಾರಾಕಾರ ಮಳೆಯಿಂದಾಗಿ ಚರಂಡಿಯ ಮಣ್ಣು ರಸ್ತೆಗೆ ಬಂದು ಪಾದಾಚಾರಿಗಳು, ವಾಹನ ಸಂಚಾರಕ್ಕೆ ಸಮಸ್ಯೆಯುಂಟಾಯಿತು.ರಂಭಾಪುರಿ ಪೀಠ, ಕಡ್ಲೇಮಕ್ಕಿ, ಮಸೀದಿಕೆರೆ, ಸೀಗೋಡು, ಹೇರೂರು, ಮೆಣಸುಕೊಡಿಗೆ, ಅರಳೀಕೊಪ್ಪ, ಹೂವಿನಹಕ್ಲು, ಮೇಲ್ಪಾಲ್, ಮಾಗುಂಡಿ, ಬನ್ನೂರು, ಕಡಬಗೆರೆ, ಸಂಗಮೇಶ್ವರಪೇಟೆ ಮತ್ತಿತರರ ಕಡೆಗಳಲ್ಲೂ ಉತ್ತಮ ಮಳೆಯಾಗಿದೆ.೧೯ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಶಾಂತಿನಗರದಲ್ಲಿ ಸುರಿದ ಮಳೆಗೆ ಕೆಸರು ಮಿಶ್ರಿತ ನೀರು ರಸ್ತೆಗೆ ಹರಿದು ಜನ, ವಾಹನ ಸಂಚಾರಕ್ಕೆ ಅಡಚಣೆಯಾಯಿತು.