ಮತದಾನ ಜಾಗೃತಿಗಾಗಿ ಕಾರಟಗಿಯಲ್ಲಿ ಮೊಂಬತ್ತಿ ಮೆರವಣಿಗೆ ನಡೆಯಿತು. ಪುರಸಭೆ ಕಾರ್ಯಾಲಯದಿಂದ ಕನಕದಾಸ ವೃತ್ತದ ವರೆಗೆ ತಾಲೂಕು ಸ್ವೀಪ್ ಸಮಿತಿಯಿಂದ ಕ್ಯಾಂಡಲ್ ಮಾರ್ಚ್ ನಡೆಯಿತು.
ಕಾರಟಗಿ: ಪ್ರಜಾಪ್ರಭುತ್ವದ ಆಶಯಕ್ಕೆ ಮತದಾನ ಅಡಿಪಾಯವಾಗಿದ್ದು, ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾವೆಲ್ಲರೂ ತಪ್ಪದೇ ಮತದಾನ ಮಾಡೋಣ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಹೇಳಿದರು.
ಇಲ್ಲಿನ ಪುರಸಭೆ ಕಾರ್ಯಾಲಯದಿಂದ ಕನಕದಾಸ ವೃತ್ತದ ವರೆಗೆ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ಗುರುವಾರ ರಾತ್ರಿ ಆಯೋಜಿಸಿದ್ದ ಕ್ಯಾಂಡಲ್ ಮಾರ್ಚ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾನ ಎಂಬುದು ಪ್ರತಿಯೊಬ್ಬ ಅರ್ಹ ಮತದಾರನ ಆದ್ಯ ಕರ್ತವ್ಯವಾಗಿದೆ. ಮತದಾನದ ದಿನದಂದು ಪ್ರತಿಯೊಬ್ಬ ಅರ್ಹ ಮತದಾರನ್ನು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗುವಂತೆ ತಿಳಿಸಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ ಲಕ್ಷ್ಮೀದೇವಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಿ, ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ತಮ್ಮ ಹಕ್ಕನ್ನು ಚಲಾಯಿಸಿ ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್ ಮಾತನಾಡಿ, ಮೇ ೭ರಂದು ಲೋಕಸಭಾ ಚುನಾವಣೆ ಮತದಾನ ನಡೆಯಲಿದೆ. ಯಾರೂ ಆ ದಿನ ಬೇರೆಡೆ ಊರಿಗೆ ತೆರಳದೆ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಹೇಳಿದರು.
ಜಾಥಾ: ಪುರಸಭೆ ಕಾರ್ಯಾಲಯದಿಂದ ಮುಖ್ಯ ರಸ್ತೆಯ ಮೂಲಕ ಕನಕದಾಸ ವೃತ್ತದ ವರೆಗೆ ವಾಹನದಲ್ಲಿ ಮತದಾನದ ಜಿಂಗಲ್ಸ್‌ಗಳನ್ನು ಪ್ರಸಾರ ಮಾಡುತ್ತ, ಜಾಗೃತಿ ಫಲಕ ಹಾಗೂ ಮೇಣದಬತ್ತಿ ಹಿಡಿದು ಜಾಗೃತಿ ಮೂಡಿಸಲಾಯಿತು. ಆನಂತರ ಮತದಾನ ಮಹತ್ವದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ. ಶಿವಕುಮಾರ್ ಮಾಲಿಪಾಟೀಲ್, ರಮ್ಯಾ ಮತ್ತು ಮಹೆಬೂಬ್ ಕಿಲ್ಲೇದಾರ್ ಜಾಗೃತಿ ಮೂಡಿಸಿದರು.
ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ತಾಪಂ ಸಹಾಯಕ ನಿರ್ದೇಶಕಿ ವೈ. ವನಜಾ. ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.