ಭಟ್ಕಳದಲ್ಲಿ ಭಾರಿ ಗಾಳಿಗೆ 8 ಮನೆಗಳಿಗೆ ಹಾನಿ

KannadaprabhaNewsNetwork |  
Published : May 24, 2024, 12:46 AM ISTUpdated : May 24, 2024, 12:47 AM IST
ಪೊಟೋ ಪೈಲ್ : 23ಬಿಕೆಲ್1,2: ಭಟ್ಕಳದಲ್ಲಿ ಭಾರೀ ಗಾಳಿ ಮಳೆಗೆ ಮನೆಗಳ ಮೇಲೆ ಮರ ಬಿದ್ದು ಹಾನಿ ಆಗಿರುವುದು. 23ಬಿಕೆಲ್3: ಭಟ್ಕಳದ ಹಾಡವಳ್ಳಿಯಲ್ಲಿ ರಸ್ತೆ ಮೇಲೆ ಮತ್ತು ಮನೆ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿರುವುದು.  | Kannada Prabha

ಸಾರಾಂಶ

ತಾಲೂಕಿನಲ್ಲಿ ಬುಧವಾರ ರಾತ್ರಿಯ ಭಾರಿ ಗಾಳಿ ಮಳೆಗೆ ಪಟ್ಟಣದ ಮಣ್ಕುಳಿಯಲ್ಲಿರುವ ಮೋಹನ ಮಾಸ್ತಪ್ಪ ನಾಯ್ಕ ಅವರ ಮನೆಯ ಚಾವಣಿ ಕುಸಿದು ಸಂಪೂರ್ಣ ಹಾನಿಯಾಗಿದೆ.

ಭಟ್ಕಳ: ತಾಲೂಕಿನಲ್ಲಿ ಗುರುವಾರ ಮಳೆ ಅಷ್ಟೇನೂ ಇಲ್ಲದಿದ್ದರೂ ಗಾಳಿ ಗುಡುಗು ಮಿಂಚಿನ ಅಬ್ಬರ ಜೋರಾಗಿದೆ. ಗಾಳಿಗೆ ಮರಗಳು ಬಿದ್ದು 8 ಮನೆಗಳಿಗೆ ಹಾನಿಯಾಗಿದೆ.

ತಾಲೂಕಿನಲ್ಲಿ ಬುಧವಾರ ರಾತ್ರಿಯ ಭಾರಿ ಗಾಳಿ ಮಳೆಗೆ ಪಟ್ಟಣದ ಮಣ್ಕುಳಿಯಲ್ಲಿರುವ ಮೋಹನ ಮಾಸ್ತಪ್ಪ ನಾಯ್ಕ ಅವರ ಮನೆಯ ಚಾವಣಿ ಕುಸಿದು ಸಂಪೂರ್ಣ ಹಾನಿಯಾಗಿದೆ. ಚಾವಣಿ ಬೀಳುವ ಸಂದರ್ಭದಲ್ಲಿ ಮನೆಯ ಒಳಗಡೆ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದೆ. ವೆಂಕಟಾಪುರದಲ್ಲಿ ಲಕ್ಷ್ಮೀ ಸಣಕೂಸ ನಾಯ್ಕ ಅವರ ಮನೆಯ ಮೇಲೆ ಅಡಕೆ ಮರ ಬಿದ್ದು ಹಾನಿಯಾಗಿದೆ. ಮಾವಳ್ಳಿ 1 ಗ್ರಾಮದ ಮಂಗಳಿ ಬೈರಾ ಹರಿಕಾಂತ ಮನೆಯ ಎದುರಿನ ಚಾವಣಿ ಹಾರಿ ಹೋಗಿ ಭಾಗಶಃ ಹಾನಿಯಾಗಿದೆ. ಶಿರಾಲಿ 1 ಗ್ರಾಮದ ಛಾಯಾ ಗಣಪತಿ ನಾಯ್ಕ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹುರಳಿಸಾಲನಲ್ಲಿ ಕುಪ್ಪಯ್ಯ ಜಟ್ಟಪ್ಪ ನಾಯ್ಕ ಅವರ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ.

ಮುಂಡಳ್ಳಿ ಗ್ರಾಮದ ಮೊಗೇರಕೇರಿಯ ಅಣ್ಣಪ್ಪ ಜಟ್ಟಪ್ಪ ಮೊಗೇರ ಮನೆಯ ಮೇಲೆ ತೆಂಗಿನ ಮರ ಬಿದ್ದು ಚಾವಣಿ ಭಾಗಶಃ ಹಾನಿಯಾಗಿದೆ. ಹಾಡುವಳ್ಳಿ ಗ್ರಾಮದ ಕೃಷ್ಣ ದೇವಪ್ಪ ನಾಯ್ಕರ ಮನೆ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಹಾನಿ ಪ್ರದೇಶಕ್ಕೆ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣದ ಕೋರ್ಟ್‌ ಆವರಣದಲ್ಲಿ ಗಾಳಿಗೆ ಮರವೊಂದು ಬಿದ್ದಿದ್ದು, ಸನಿಹದಲ್ಲೇ ಇದ್ದ ವಕೀಲರೊಬ್ಬರ ಕಾರು ಸ್ವಲ್ಪದರಲ್ಲಿ ಹಾನಿಯಿಂದ ಪಾರಾಗಿದೆ.

ಸೆಕೆ ಕಡಿಮೆ ಆಗಿಲ್ಲ:

ತಾಲೂಕಿನಲ್ಲಿ ದಿನಂಪ್ರತಿ ಮಳೆ ಬರುತ್ತಿದ್ದರೂ ಸೆಕೆಯ ಪ್ರಮಾಣ ಮಾತ್ರ ಕಡಿಮೆ ಆಗಿಲ್ಲ. ಮಳೆ ಬಂದು ಹೋದ ನಂತರ ಸೆಕೆ ಹೆಚ್ಚಿದ್ದು, ರಾತ್ರಿ ಕರೆಂಟ್ ಸಹ ಪದೇ ಪದೇ ಕೈಕೊಡುತ್ತಿರುವುದರಿಂದ ನಿದ್ದೆ ಮಾಡಲು ಕೂಡ ಆಗುತ್ತಿಲ್ಲ. ಒಂದುವಾರ ಕಾಲ ಸತತ ಮಳೆ ಸುರಿದರೆ ಮಾತ್ರ ಸೆಕೆಯ ಪ್ರಮಾಣ ಕಡಿಮೆ ಆಗಬಹುದು. ಮಳೆ ಬರುತ್ತಿದ್ದರೂ ಬಾವಿ, ಕೆರೆ, ಹೊಳೆಯಲ್ಲಿ ನೀರು ಏರಿಕೆ ಆಗಿಲ್ಲ.

ಮುನ್ನೆಚ್ಚರಿಕೆ ಕ್ರಮಕ್ಕೆ ಆಗ್ರಹ: ತಾಲೂಕಿನಲ್ಲಿ ಮಳೆ ಗಾಳಿ ಅಬ್ಬರ ಜೋರಾಗಿದ್ದರೂ ತಾಲೂಕು ಆಡಳಿತದ ವತಿಯಿಂದ ಮಳೆಗಾಲದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸಭೆ ನಡೆದಂತಿಲ್ಲ. ಪಟ್ಟಣ ಮತ್ತು ಗ್ರಾಮಾಂತರ ಭಾಗದಲ್ಲಿ ಮಳೆಗಾಲದ ಸಿದ್ಧತಾ ಕಾರ್ಯ ಸಮರ್ಪಕವಾಗಿ ಆಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಮೊನ್ನೆಯ ಭಾರಿ ಮಳೆಗೆ ಪಟ್ಟಣ ಕೆಲವು ಮನೆಗಳು ಮತ್ತು ದೇವಸ್ಥಾನೊಂದಕ್ಕೆ ನೀರು ನುಗ್ಗಿ ಜನರು ತೊಂದರೆ ಪಡುವಂತಾಗಿದೆ. ಸಮರ್ಪಕವಾಗಿ ಗಟಾರ ಸ್ವಚ್ಛತೆ ಕೆಲಸ ಆಗಿದ್ದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುವ ಪ್ರಮೇಯ ಬರುತ್ತಿರಲಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ತಾಲೂಕು ಆಡಳಿತ ಇನ್ನಾದರೂ ಮಳೆಗಾಲದ ಪೂರ್ವಭಾವಿ ಕೆಲಸದ ಬಗ್ಗೆ ಗಮನಹರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!