ಹಾವೇರಿಯಲ್ಲಿ ಭಾರಿ ಗಾಳಿ, ಗುಡುಗು ಮಿಂಚು ಸಹಿತ ಮಳೆ

KannadaprabhaNewsNetwork |  
Published : May 17, 2026, 02:15 AM IST
ಹಾವೇರಿ ತಾಲೂಕಿನ ಹಾವೇರಿ- ಗುತ್ತಲ ರಸ್ತೆ ಮೇಲೆ  ಮರವೊಂದು ಉರುಳಿ ಬಿದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು. | Kannada Prabha

ಸಾರಾಂಶ

ಹಾವೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಭಾರಿ ಗಾಳಿ, ಗುಡುಗು ಮಿಂಚಿನೊಂದಿಗೆ ಧಾರಾಕಾರ ಮಳೆಯಾಗಿದೆ. ಅಲ್ಲಲ್ಲಿ ಮರಗಳು ಧರೆಗೆ ಉರುಳಿ ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಭಾರಿ ಗಾಳಿ, ಗುಡುಗು ಮಿಂಚಿನೊಂದಿಗೆ ಧಾರಾಕಾರ ಮಳೆಯಾಗಿದೆ. ಅಲ್ಲಲ್ಲಿ ಮರಗಳು ಧರೆಗೆ ಉರುಳಿ ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿರು ಬಿಸಿಲಿನಿಂದ ಕೂಡಿದ್ದ ವಾತಾವರಣ ಏಕಾಏಕಿ ಮೋಡ ಕವಿದು ಸಂಜೆ ಭಾರಿ ಗಾಳಿ, ಗುಡುಗು ಸಹಿತ ಜಿಲ್ಲೆಯ ಹಲವು ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಹಾವೇರಿ ತಾಲೂಕಿನ ಶಿಬಾರ ಬಳಿ ಹಾವೇರಿ- ಗುತ್ತಲ ರಸ್ತೆ ಮೇಲೆ ಮರವೊಂದು ಉರುಳಿ ಬಿದ್ದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು. ರಟ್ಟೀಹಳ್ಳಿ ತಾಲೂಕಿನಲ್ಲಿ ಸಹ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದ್ದು, ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿವೆ.

ಶನಿವಾರ ಸಂಜೆ ಏಕಾಏಕಿ ಭಾರಿ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಸ್ಥಳೀಯ ಇಜಾರಿಲಕಮಾಪುರ ಬಳಿಯ ಸುಡುಗಾಡ ಸಿದ್ಧರ ಗುಡಿಸಲುಗಳಿಗೆ ಹಾನಿಯಾಗಿದ್ದು, ಮಳೆಯ ನೀರು ಗುಡಿಸಲುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಭಾರಿ ಗಾಳಿ ಬೀಸಿದ್ದರಿಂದ ಗುಡಿಸಲುಗಳ ಮೇಲ್ಚಾವಣಿ ಹಾರಿ ಹೋಗಿದ್ದು, ಗುಡಿಸಲಿನಲ್ಲಿದ್ದ ಕಿರಾಣಿ ಸಾಮಗ್ರಿ, ಬಟ್ಟೆಗಳು ಮಳೆಯ ನೀರಿನ ಪಾಲಾಗಿವೆ. ಕಳೆದ ಎರಡು ದಿನಗಳ ಹಿಂದೆ ಸುರಿದಿದ್ದ ಮಳೆಗೆ ತತ್ತರಿಸಿದ್ದ ಈ ಕುಟುಂಬಗಳು ಮತ್ತೆ ಮಳೆಯ ಅವಾಂತರಕ್ಕೆ ತುತ್ತಾಗಿದ್ದು, ಶಾಶ್ವತ ಸೂರು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ನಗರದ ಮಾರುಕಟ್ಟೆಯಲ್ಲಿ ಸಹ ಮಳೆಯಿಂದಾಗಿ ಅಸ್ತವ್ಯಸ್ತ ಉಂಟಾಯಿತು. ಮಾರುಕಟ್ಟೆಗೆ ಆಗಮಿಸಿದ್ದ ಜನರು ಮಳೆಯಿಂದಾಗಿ ಸಮಸ್ಯೆ ಎದುರಿಸುವಂತಾಯಿತು. ನಗರದಲ್ಲಿ ಕೆಲಕಾಲ ವಿದ್ಯುತ್ ವ್ಯತ್ಯಯವಾಯಿತು. ಇನ್ನುಳಿದಂತೆ ಜಿಲ್ಲೆಯ ಹಾನಗಲ್ಲ, ಶಿಗ್ಗಾಂವಿ, ಬ್ಯಾಡಗಿ, ರಾಣಿಬೆನ್ನೂರು, ಹಿರೇಕೆರೂರು, ರಟ್ಟೀಹಳ್ಳಿ, ಸವಣೂರು ತಾಲೂಕಿನ ವಿವಿಧೆಡೆ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಸಂಜೆ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಕೃಷಿ ಚಟುವಟಿಕೆ ಗರಿಗೆದರಿವೆ.

ಕೆರೆಯಂತೆ ಭಾಸವಾದ ಪಿಬಿ ರೋಡ್, ಹಾನಗಲ್ಲ ರಸ್ತೆ:

ಹಾವೇರಿ ನಗರದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರಿನ ಹಳೆಯ ಪಿ.ಬಿ. ರೋಡ್, ಕೇಂದ್ರ ಬಸ್ ನಿಲ್ದಾಣ ಸಮೀಪದ ಹಾನಗಲ್ಲ ರಸ್ತೆ ಅಕ್ಷರಶಃ ಕೆರೆಯಂತೆ ಕಂಡುಬಂದಿತು. ಧಾರಾಕಾರ ಸುರಿದ ಮಳೆಗೆ ರಸ್ತೆಯ ತುಂಬೆಲ್ಲ ಚರಂಡಿ ನೀರು ನುಗ್ಗಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಯಿತು. ಕಳೆದ ವರ್ಷ ಎಸ್‌ಪಿ ಕಚೇರಿ ಸಮೀಪದ ಪಿ.ಬಿ. ರಸ್ತೆಯ ಚರಂಡಿಯಲ್ಲಿ ಬಾಲಕ ಕೊಚ್ಚಿ ಹೋಗಿ ಮೃತಪಟ್ಟಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿಗಳ ಸ್ವಚ್ಛಗೊಳಿಸಿಲ್ಲ. ಹೀಗಾಗಿ ರಸ್ತೆಯ ಮೇಲೆ ಮೊಣಕಾಲು ಎತ್ತರ ರಭಸವಾಗಿ ನೀರು ಹರಿಯುತ್ತಿದ್ದು, ವಾಹನ ಸವಾರರಿಗೆ ಮಾತ್ರ ಸಮಸ್ಯೆ ತಪ್ಪಿದ್ದಲ್ಲ ಎನ್ನುವಂತಾಗಿದೆ. ಪ್ರಸಕ್ತ ವರ್ಷವಾದರೂ ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಮಳೆ, ಗಾಳಿಗೆ ಮನೆ ಮೇಲೆ ಬಿದ್ದ ಮರ:

ಶನಿವಾರ ಸಂಜೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಮನೆ ಮೇಲೆ ಮರ ಉರುಳಿ ಬಿದ್ದು, ಚಾವಣಿ ಜಖಂಗೊಂಡ ಘಟನೆ ಸವಣೂರು ತಾಲೂಕಿನ ಚಿಲ್ಲೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಆನಂದ ಮೈಲಾರಪ್ಪ ಹುರುಳಿಕುಪ್ಪಿ ಅವರಿಗೆ ಸೇರಿದ ಮನೆಗೆ ಹಾನಿಯಾಗಿದ್ದು, ಗಾಳಿಯ ತೀವ್ರತೆಗೆ ಸಮೀಪದಲ್ಲಿದ್ದ ಮರ ಬೇರು ಸಮೇತ ಉರುಳಿ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಮೇಲ್ಚಾವಣಿ ಸೇರಿದಂತೆ ಕೆಲವು ಭಾಗಗಳು ಹಾನಿಗೊಳಗಾಗಿವೆ.ಘಟನೆ ಸಂಭವಿಸಿದ ಸಂದರ್ಭದಲ್ಲಿ ಮನೆಯಲ್ಲಿ ಆನಂದ ಒಬ್ಬರೇ ಇದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ನೆರವು ನೀಡಿದರು.

ಘಟನಾ ಸ್ಥಳಕ್ಕೆ ತಹಸೀಲ್ದಾರ್‌ ರವಿಕುಮಾರ ಕೊರವರ ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ಈ ವೇಳೆ ಮುಖಂಡರಾದ ಬಸವರಾಜ ಹರಿಜನ, ಮಲ್ಲಯ್ಯ ಹಿರೇಮಠ, ಹನುಮಂತಗೌಡ ಪಾಟೀಲ, ಶಂಕ್ರಪ್ಪ ತಿರಕಣ್ಣವರ, ದೇವಪ್ಪ ಹುರುಳಿಕುಪ್ಪಿ ಹಾಗೂ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳ ಕಡಿತ: ಪ್ರಕರಣ ದಾಖಲು
ಶನೈಶ್ಚರ ದೇವರ ಪ್ರತಿಮೆಗೆ ತೈಲಾಭಿಷೇಕ