ಭಟ್ಕಳ: ಇಲ್ಲಿನ ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸಚಿವ ಮಂಕಾಳ ವೈದ್ಯರು ಒಂದು ಕೋಮಿನ ಋಣ ತೀರಿಸಲು ನಗರಸಭೆಗೆ ಕೇವಲ ಜಾಲಿ ಮತ್ತು ಹೆಬಳೆಯನ್ನು ಸೇರಿಸಿರುವುದು ಸನಿಹದ ಗ್ರಾಮಗಳನ್ನು ಕೈಬಿಟ್ಟಿರುವುದು ಹಿಂದೂಗಳಿಗೆ ಮಾಡಿದ ಅನ್ಯಾಯವಾಗಿದೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಕಿಡಿಕಾರಿದ್ದಾರೆ.
ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಹೆಬಳೆ ಮತ್ತು ಜಾಲಿಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವುದರಿಂದ ಇವೆರಡನ್ನೇ ನಗರಸಭೆಗೆ ಸೇರಿಸಲಾಗಿದೆ. ಮುಟ್ಟಳ್ಳಿ, ಮುಂಡಳ್ಳಿ, ಮಾವಿನಕುರ್ವೆ, ಶಿರಾಲಿ, ಯಲ್ವಡಿಕವೂರು ಗ್ರಾಪಂಗಳನ್ನು ಸೇರಿಸಿ ನಗರಸಭೆ ಮಾಡಿದ್ದರೆ ನಮ್ಮ ಅಭ್ಯಂತರವಿಲ್ಲ. ಅಭಿವೃದ್ಧಿ ಎಂದು ಹೇಳುವವರು ನಗರಕ್ಕೆ ಹೊಂದಿಕೊಂಡಿರುವ ಪಂಚಾಯತ್ ಬಿಟ್ಟು ಅಧಿಕ ಕೃಷಿ ಜಮೀನು ಇರುವ ಹೆಬೆಳೆ ಸೇರಿಸಿದ್ದರ ಉದ್ದೇಶ ಏನೆಂದು ಸ್ಪಷ್ಟಪಡಿಸಬೇಕೆಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಹೆಬಳೆ ಗ್ರಾಪಂ ಸದಸ್ಯ ಸುಬ್ರಾಯ ದೇವಡಿಗ ಮಾತನಾಡಿ, ನಗರಸಭೆಯನ್ನು ಅಭಿವೃದ್ಧಿಯ ಉದ್ದೇಶದಿಂದ ಮಾಡುತ್ತಿಲ್ಲ. ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ಸಂಸ್ಥೆಯ ಜತೆಗೆ ಮಂಕಾಳ ವೈದ್ಯ ಮಾಡಿಕೊಂಡ ಒಡಂಬಡಿಕೆಯಂತೆ ಪುರಸಭೆಗೆ ಹೊಂದಿಕೊಂಡಿರುವ ಗ್ರಾಪಂನ್ನು ಬಿಟ್ಟು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಹೆಬಳೆಯನ್ನು ಸೇರಿಸಿ ನಗರಸಭೆ ಮಾಡಿದ್ದಾರೆ. ಹೆಬಳೆ ಗ್ರಾಪಂ ಸಭೆಯಲ್ಲಿ ೨೪ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ದಬ್ಬಾಳಿಕೆಯಿಂದ ಅಧ್ಯಕ್ಷರ ಸಹಿ ಇಲ್ಲದೇ ವರದಿ ತರಿಸಿಕೊಂಡಿರುವುದು ತೀರಾ ಖಂಡನೀಯ ಎಂದರು.ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ನಗರಸಭೆಯನ್ನು ಮಾಡುವಲ್ಲಿ ಹಿಂದೂಗಳಿಗೆ ಮೋಸ ಮಾಡಿದ ಸಚಿವ ಮಂಕಾಳ ವೈದ್ಯ ಮುಂದೆಂದೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಾ ಹಿಂದೂಗಳಿಗೆ ಅನ್ಯಾಯ ಮಾಡಿದ ಇವರನ್ನು ಜನತೆ ಮುಂದಿನ ದಿನಗಳಲ್ಲಿ ನಂಬುವುದಿಲ್ಲ ಎಂದರು.
ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ, ಮಂಡಲ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ ಮುಂತಾದವರಿದ್ದರು.