ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಹೆಬ್ಬಾಳ 45 ಎಕರೆ ಭೂಮಿ ಗೋಜಲು : ಕೆಲಸ ವಿಳಂಬ

KannadaprabhaNewsNetwork |  
Published : Mar 13, 2025, 01:45 AM ISTUpdated : Mar 13, 2025, 09:23 AM IST
ಮೆಟ್ರೋ | Kannada Prabha

ಸಾರಾಂಶ

ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಹೆಬ್ಬಾಳದ 45 ಎಕರೆ ಭೂಮಿ ಹಸ್ತಾಂತರದ ಗೋಜಲು ಇನ್ನೂ ಬಗೆಹರಿಯದ ಕಾರಣ ಟ್ರೈ-ಜಂಕ್ಷನ್‌ ಮತ್ತು ಮಲ್ಟಿ-ಮಾಡಲ್‌ ಸಾರಿಗೆ ಹಬ್‌ ಯೋಜನೆ ವಿಳಂಬವಾಗುವ ಸಾಧ್ಯತೆ ಇದೆ.

 ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಹೆಬ್ಬಾಳದ 45 ಎಕರೆ ಭೂಮಿ ಹಸ್ತಾಂತರದ ಗೋಜಲು ಇನ್ನೂ ಬಗೆಹರಿಯದ ಕಾರಣ ಟ್ರೈ-ಜಂಕ್ಷನ್‌ ಮತ್ತು ಮಲ್ಟಿ-ಮಾಡಲ್‌ ಸಾರಿಗೆ ಹಬ್‌ ಯೋಜನೆ ವಿಳಂಬವಾಗುವ ಸಾಧ್ಯತೆ ಇದೆ.

ಮೆಟ್ರೋ 3ನೇ ಹಂತದ ಯೋಜನೆಗೆ ಹೆಬ್ಬಾಳದ ಭೂಮಿ ಒದಗಿಸುವ ಸಂಬಂಧ ಈಚೆಗೆ ನಡೆದ ಉನ್ನತ ಮಟ್ಟದ ಸಭೆ ಯಾವುದೇ ನಿರ್ಧಾರಕ್ಕೆ ಬಾರದ ಕಾರಣ ಸಾರಿಗೆ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದೊಂದು ವರ್ಷದಿಂದ ಬಿಎಂಆರ್‌ಸಿಎಲ್‌ನಿಂದ ಈ ಬಗ್ಗೆ ಪ್ರಯತ್ನ ನಡೆಯುತ್ತಿದ್ದರೂ ಫಲಪ್ರದವಾಗದಿರುವುದು ಕಾಮಗಾರಿ ತಡವಾಗಲು ಕಾರಣವಾಗಲಿದೆ ಎಂದಿದ್ದಾರೆ.

ಯಾವುದಕ್ಕೆ ವಿಳಂಬ?:

ಈ ಜಾಗದಲ್ಲಿ ಜೆ.ಪಿ.ನಗರದ 4ನೇ ಹಂತದಿಂದ ಕೆಂಪಾಪುರ ಸಂಪರ್ಕಿಸುವ ಹೆಬ್ಬಾಳ ನಿಲ್ದಾಣ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಜತೆಗೆ ಕೆ.ಆರ್.ಪುರಂ - ಕೆಐಎ ಸಂಪರ್ಕಿಸುವ 2ನೇ ಹಂತದ (ನೀಲಿ ಮಾರ್ಗ) ನಿಲ್ದಾಣ ಹಾಗೂ ಸರ್ಜಾಪುರ- ಹೆಬ್ಬಾಳ ಸಂಪರ್ಕಿಸುವ (ಕೆಂಪು ಮಾರ್ಗ) ಮಾರ್ಗದ ನಿಲ್ದಾಣ ನಿರ್ಮಾಣಕ್ಕೆ ರೂಪುರೇಷೆ ಮಾಡಿಕೊಂಡಿದೆ.

ಇದಲ್ಲದೆ ಕೆ-ರೈಡ್‌ ಅನುಷ್ಠಾನಗೊಳಿಸುತ್ತಿರುವ ಉಪನಗರ ರೈಲು ಯೋಜನೆಯ ನಿಲ್ದಾಣವನ್ನೂ ನಿರ್ಮಿಸುವ ಪ್ರಸ್ತಾಪವಿದೆ. ಜೊತೆಗೆ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್, ಮಲ್ಟಿ ಮಾಡಲ್ ಹಬ್, ಇದಕ್ಕೆ ಪೂರಕವಾಗಿ ಬಸ್ ನಿಲ್ದಾಣ ಕೂಡ ನಿರ್ಮಿಸುವ ಪ್ರಸ್ತಾಪವಿದೆ. ಜಾಗ ಹಸ್ತಾಂತರ ವಿಳಂಬವಾದಲ್ಲಿ ಇವೆಲ್ಲ ಕಾಮಗಾರಿಗೆ ತೊಂದರೆ ಆಗಬಹುದು ಎಂದು ಸಾರಿಗೆ ತಜ್ಞರು ಹೇಳುತ್ತಾರೆ.

ಎರಡು ದಶಕದ ಹಿಂದೆ ಹೆಬ್ಬಾಳದ ಹೆಬ್ಬಾಳ ಅಮಣಿಕೆರೆ ಗ್ರಾಮದ 55 ಎಕರೆಯನ್ನು ಕೆಐಎಡಿಬಿ ವಶಪಡಿಸಿಕೊಂಡಿತ್ತು. ಜಾಗತಿಕ ಹೂಡಿಕೆದಾರರ ಸಮಾವೇಶ (2000) ಲೇಕ್‌ವ್ಯೂ ಟೂರಿಸಂ ಕಾರ್ಪೋರೇಷನ್ ಇಲ್ಲಿ ಪ್ರವಾಸೋದ್ಯಮ ಪ್ರಾಜೆಕ್ಟ್ ಸ್ಥಾಪಿಸುವುದಾಗಿ ಒಪ್ಪಂದವಾಗಿತ್ತು. ಆದರೆ ಆ ಯೋಜನೆ ಸಾಧ್ಯವಾಗಿಲ್ಲ. ಅಲ್ಲದೆ, ವಶಪಡಿಸಿಕೊಂಡ ಭೂಮಿಗಾಗಿ ಭೂಮಾಲೀಕರಿಗೆ ಪರಿಹಾರ ಪಾವತಿಸಿಲ್ಲ.

ಬಿಎಂಆರ್‌ಸಿಎಲ್ ಈ ಮೊದಲು 6712.97 ಚ.ಮೀ. ವಿಸ್ತೀರ್ಣ ಜಾಗವನ್ನು ಕೇಳಿತ್ತು. ಅದರಂತೆ ಕೆಐಎಡಿಬಿ ನಿಗದಿಪಡಿಸಿದ್ದ ಎಕರೆಗೆ 12.10 ಕೋಟಿಯಂತೆ ಮೊತ್ತ ಪಾವತಿಸಿತ್ತು. ಆಗ ಬಿಎಂಆರ್‌ಸಿಎಲ್‌ ಕೇಳಿದಷ್ಟು ಭೂಮಿಯನ್ನು ಬಿಎಂಆರ್‌ಸಿಎಲ್‌ಗೆ ಕೆಐಎಡಿಬಿ ಹಸ್ತಾಂತರಿಸಿದೆ. ಕಳೆದ ವರ್ಷ ಬಿಎಂಆರ್‌ಸಿಎಲ್‌ ಮೆಟ್ರೋ 3ನೇ ಹಂತದ ಯೋಜನೆಗಾಗಿ 45 ಎಕರೆಯನ್ನು ತನ್ನ ಬಳಕೆಗೆ ನೀಡುವಂತೆ ಕಳೆದ ಮಾರ್ಚ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು.

ಈ ಸಂಬಂಧ ಸಚಿವರ ಮಟ್ಟದಲ್ಲಿ ಎರಡು ಹಾಗೂ ಅಧಿಕಾರಿಗಳ ಹಂತದಲ್ಲಿ ಮೂರಕ್ಕೂ ಹೆಚ್ಚು ಸಭೆಗಳು ನಡೆದಿವೆ. ಆದರೆ, ಭೂಮಿ ಕಳೆದುಕೊಂಡವರಿಗೆ ಪರಿಹಾರ ಮೊತ್ತ ಹಾಗೂ ಲೇಕ್‌ವ್ಯೂ ಕಂಪನಿಗಾಗಿ ಭೂಸ್ವಾಧೀನ ಮಾಡಿಕೊಂಡು ಈಗ ಕೆಐಎಡಿಬಿಯಿಂದ ಬಿಎಂಆರ್‌ಸಿಎಲ್‌ಗೆ ಭೂಮಿ ಹಸ್ತಾಂತರ ಮಾಡುವ ವಿಚಾರ ತಾಂತ್ರಿಕ ತೊಂದರೆಗೆ ಸಿಲುಕಿರುವುದರಿಂದ ನಿರ್ಧಾರ ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐತಿಹಾಸಿಕ ಸ್ಮಾರಕ ಮುಂದಿನ ಪೀಳಿಗೆಗೆ ಉಳಿಯಲಿ: ಡಿಸಿ ಸಂಗಪ್ಪ
ಚೇರಂಬಾಣೆ: ವಾರ್ಷಿಕ ಕ್ರೀಡಾ ದಿನಾಚರಣೆ