ಸಚಿವೆ ಲಕ್ಷ್ಮೀ ಹೆಬ್ಬಾಳಕರ , ಸಿ.ಟಿ ರವಿ ಕಿತ್ತಾಟ : ಇನ್ಸಪೆಕ್ಟರ್‌ ಸಸ್ಪೆಂಡ್‌ಗೆ ಕೆಎಟಿ ತಡೆ

KannadaprabhaNewsNetwork | Updated : Mar 13 2025, 10:39 AM IST

ಸಾರಾಂಶ

  ಇನ್ಸ್‌ಪೆಕ್ಟರ್ ಮಂಜುನಾಥ ನಾಯ್ಕ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಅವರನ್ನು ಖಾನಾಪುರ ಠಾಣೆಯಲ್ಲೇ ಮುಂದುವರೆಸಬೇಕು ಎಂದು ಮಂಗಳವಾರ ಮಹತ್ವದ ತೀರ್ಪು ನೀಡಿದೆ.

  ಖಾನಾಪುರ : ಸಚಿವೆ ಹೆಬ್ಬಾಳಕರ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರ ನಡುವಿನ ಕಿತ್ತಾಟದಲ್ಲಿ ಬಲಿಪಶುವಾಗಿ ಕರ್ತವ್ಯಲೋಪ ಆರೋಪದಡಿ ಸೇವೆಯಿಂದ ಅಮಾನತುಗೊಂಡಿದ್ದ ಖಾನಾಪುರ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ ನಾಯ್ಕ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಅವರನ್ನು ಖಾನಾಪುರ ಠಾಣೆಯಲ್ಲೇ ಮುಂದುವರೆಸಬೇಕು ಎಂದು ಮಂಗಳವಾರ ಮಹತ್ವದ ತೀರ್ಪು ನೀಡಿದೆ.

2024, ಡಿ.19ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರ ನಡುವೆ ವಾಗ್ದಾದ ನಡೆದಿತ್ತು.

 ಬಳಿಕ ಹೆಬ್ಬಾಳಕರ ಅವರ ದೂರಿನನ್ವಯ ಸಿ.ಟಿ ರವಿ ಅವರನ್ನು ಬಂಧಿಸಿದ್ದ ಹಿರೇಬಾಗೇವಾಡಿ ಪೊಲೀಸರು ಅವರನ್ನು ಖಾನಾಪುರ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆತಂದಿದ್ದರು.ವಿಚಾರಣೆ ಸಂದರ್ಭದಲ್ಲಿ ಖಾನಾಪುರ ಠಾಣೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಸೇರಿದಂತೆ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಮುಖಂಡರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. 

ಅದೇ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ಬಿಜೆಪಿ ನಾಯಕರಿಗೆ ಸಿ.ಟಿ ರವಿ ಅವರನ್ನು ಭೇಟಿಯಾಗಲು ಮಂಜುನಾಥ ನಾಯ್ಕ ಅವರು ಅವಕಾಶ ನೀಡಿದ್ದರು ಎಂಬ ಆರೋಪ ಹೋರಿಸಿದ್ದ ಪೊಲೀಸ್ ಇಲಾಖೆ ಮಂಜುನಾಥ ನಾಯ್ಕ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿತ್ತು. 

ಹಲವು ಸಂಘಟನೆಗಳು ಮಂಜುನಾಥ ನಾಯ್ಕ ಅವರ ಅಮಾನತು ಖಂಡಿಸಿ ಪ್ರತಿಭಟನೆ ನಡೆಸಿದ್ದವು. ಸರಿಯಾದ ಕಾರಣವಿಲ್ಲದೇ ತಮ್ಮನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದ ಸರ್ಕಾರದ ಆದೇಶದ ವಿರುದ್ಧ ಮಂಜುನಾಥ ನಾಯ್ಕ ಅವರು ಕೆಎಟಿ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸತ್ಯನಾರಾಯಣ ಸಿಂಗ್ ಮತ್ತು ನ್ಯಾ.ಸುನೀಲ ಕುಮಾರ ಅವರನ್ನೊಳಗೊಂಡ ಪೀಠ ಡಿ.21, 2024ರಂದು ಪೊಲೀಸ್ ಇಲಾಖೆ ಹೊರಡಿಸಿದ್ದ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಅವರನ್ನು ಖಾನಾಪುರ ಠಾಣೆಯ ಇನ್ಸಪೆಕ್ಟರ್ ಹುದ್ದೆಯಲ್ಲೇ ಮುಂದುವರೆಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

 ಕೆಎಟಿ ನೀಡಿರುವ ತೀರ್ಪಿನಲ್ಲಿ ಅರ್ಜಿದಾರರು ಅವರು ಕೆಲಸ ಮಾಡುತ್ತಿದ್ದ ಅದೇ ಪೊಲೀಸ್ ಠಾಣೆಗೆ ತಕ್ಷಣವೇ ಮರುನೇಮಕ ಮಾಡಬೇಕು ಮತ್ತು ಈ ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳ ಅವಧಿಯೊಳಗೆ ಅರ್ಜಿದಾರರು ಕಾನೂನುಬದ್ಧವಾಗಿ ಅರ್ಹರಾಗಿರುವ ಪ್ರಯೋಜನಗಳನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Share this article