ಉಡುಪಿ: ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 15 ದಿನಗಳ ‘ಉನ್ನತಿ’ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಆ. 21ರಂದು ನಡೆಯಿತು.ತರಬೇತಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡು, ತರಬೇತಿಯಿಂದ ವೇದಿಕೆಯಲ್ಲಿ ಮಾತನಾಡುವ ಆತ್ಮವಿಶ್ವಾಸ, ಇಂಗ್ಲಿಷ್ ಭಾಷಾ ಕೌಶಲ್ಯ, ತಂಡವಾಗಿ ಕಾರ್ಯನಿರ್ವಹಿಸುವ ಮನೋಭಾವ, ಸಮಯ ಮತ್ತು ಒತ್ತಡ ನಿರ್ವಹಣೆಯ ಕೌಶಲ್ಯಗಳು ಅಭಿವೃದ್ಧಿಯಾಗಿವೆ. ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಪ್ರೊ. ವಿದ್ಯಾಧರ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ತರಬೇತುದಾರ ಗುರುಪ್ರಸಾದ್ ಭಟ್ ಅವರ ಕೊಡುಗೆಯನ್ನು ಶ್ಲಾಘಿಸಿದರು.
ಐಕ್ಯೂಎಸಿ ಸಂಯೋಜಕ ಡಾ. ಗಣೇಶ ಎಸ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಷ್ಮಾ ರಾವ್, ಪ್ಲೇಸ್‌ಮೆಂಟ್ ಸೆಲ್ ಸಂಯೋಜಕ ಡಾ. ಮಾವಿ ಮಿರಾಂಡಾ ಹಾಗೂ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು. ವರ್ಷಿತಾ ಶೆಟ್ಟಿ ನಿರೂಪಿಸಿದರು. ಸಂಕೇತ್ ಶೆಟ್ಟಿ ಸ್ವಾಗತಿಸಿ, ಶ್ರುತಿ ವಂದಿಸಿದರು.