ಭಾರೀ ಗಾಳಿಮಳೆಗೆ ಕುಸಿದು ಬಿದ್ದ ಹೆಗ್ಗದ್ದೆ ಶಾಲೆ

KannadaprabhaNewsNetwork |  
Published : Jul 26, 2024, 01:38 AM IST
ಪೊಟೋ ಪೈಲ್ : 25ಬಿಕೆಲ್1,2,3 | Kannada Prabha

ಸಾರಾಂಶ

ಶಾಲೆ ರಜೆ ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಅಪಾಯ ಆಗುವ ಸಾಧ್ಯ ಇತ್ತು ಎನ್ನಲಾಗಿದ್ದು, ಅದೃಷ್ಟವಶಾತ್ ಮಕ್ಕಳು ಬಚಾವ್ ಆಗಿದ್ದಾರೆ. ಹೆಗ್ಗದ್ದೆಯ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸುಮಾರ 50 ವರ್ಷಕ್ಕೂ ಹೆಚ್ಚು ಹಳೆಯದಾಗಿತ್ತು. ಕಳೆದ ಮೂರು ದಿನಗಳ ಹಿಂದೆ ಭಾರೀ ಗಾಳಿಗೆ ಶಾಲೆಯ ಹೆಂಚುಗಳು ಹಾರಿ ಹೋಗಿದ್ದು, ಗೋಡೆ ಮೇಲೆ ಮಳೆ ನೀರು ಬಿದ್ದು ಹಾನಿಯಾಗಿತ್ತು.

ಭಟ್ಕಳ: ಭಾರೀ ಗಾಳಿ ಮಳೆಗೆ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗದ್ದೆಯ ಕಿರಿಯ ಪ್ರಾಥಮಿಕ ಶಾಲೆ ಕುಸಿದು ಬಿದ್ದಿದ್ದು, ರಜೆ ಇದ್ದಿದ್ದರಿಂದ ವಿದ್ಯಾರ್ಥಿಗಳು ಪಾರಾಗಿದ್ದಾರೆ.

ಶಾಲೆ ರಜೆ ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಅಪಾಯ ಆಗುವ ಸಾಧ್ಯ ಇತ್ತು ಎನ್ನಲಾಗಿದ್ದು, ಅದೃಷ್ಟವಶಾತ್ ಮಕ್ಕಳು ಬಚಾವ್ ಆಗಿದ್ದಾರೆ. ಹೆಗ್ಗದ್ದೆಯ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸುಮಾರ 50 ವರ್ಷಕ್ಕೂ ಹೆಚ್ಚು ಹಳೆಯದಾಗಿತ್ತು. ಕಳೆದ ಮೂರು ದಿನಗಳ ಹಿಂದೆ ಭಾರೀ ಗಾಳಿಗೆ ಶಾಲೆಯ ಹೆಂಚುಗಳು ಹಾರಿ ಹೋಗಿದ್ದು, ಗೋಡೆ ಮೇಲೆ ಮಳೆ ನೀರು ಬಿದ್ದು ಹಾನಿಯಾಗಿತ್ತು.

ಶಾಲೆಯಲ್ಲಿ ಒಟ್ಟೂ 14 ಮಕ್ಕಳಿದ್ದಾರೆ. ಒಬ್ಬರು ಕಾಯಂ ಶಿಕ್ಷಕರು, ಮತ್ತೊಬ್ಬರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಇದೇ ಊರಿನ ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ನಿವೃತ್ತ ಮುಖ್ಯಶಿಕ್ಷಕ ಸುಕ್ರ ಗೊಂಡ ಅವರು ತಮ್ಮ ಮನೆಯ ಮಹಡಿಯಲ್ಲಿ ಮಕ್ಕಳಿಗೆ ಪಾಠದ ವ್ಯವಸ್ಥೆ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅದರಂತೆ ಇವರ ಮನೆಯಲ್ಲೇ ಬಿಸಿ ಊಟ ಸಿದ್ಧಪಡಿಸಿ ಮಕ್ಕಳಿಗೆ ನೀಡಲಾಗುತ್ತಿದೆ. ಪರ್ಯಾಯ ವ್ಯವಸ್ಥೆ ಆಗುವ ವರೆಗೆ ಸುಕ್ರ ಗೊಂಡ ಅವರ ಮನೆಯ ಮಹಡಿಯಲ್ಲೇ ತರಗತಿ ನಡೆಯಲಿದ್ದು, ಇದಕ್ಕೆ ಅವರೂ ಕೂಡ ಒಪ್ಪಿಗೆ ಸೂಚಿಸಿದ್ದಾರೆ.

ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ, ಕೊಪ್ಪ ಗ್ರಾಪಂ ಅಧ್ಯಕ್ಷ ಮಾಸ್ತಿ ಗೊಂಡ, ಕಂದಾಯ ಅಧಿಕಾರಿಗಳು ಮುಂತಾದವರು ಭೇಟಿ ನೀಡಿ ಶಾಲೆಯನ್ನು ಪರಿಶೀಲಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ, ರಜೆ ಇರುವ ದಿನ ಶಾಲೆ ಬಿದ್ದಿದ್ದರಿಂದ ಯಾವುದೇ ಅಪಾಯ ಆಗಿಲ್ಲ. ಶಾಲೆ ಕಟ್ಟಡಕ್ಕೆ ಸ್ಥಳವಕಾಶದ ಬಗ್ಗೆ ಸ್ಥಳೀಯ ಪಂಚಾಯಿತಿ ಪ್ರತಿನಿಧಿಗಳು ಮತ್ತು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲಾಗಿದೆ. ಎಲ್ಲರ ಸಹಕಾರದಿಂದ ಅಂತಿಮವಾಗಿ ಒಂದು ಜಾಗವನ್ನು ಶಾಲೆ ಕಟ್ಟಡಕ್ಕೆ ಗುರುತಿಸಲಾಗಿದೆ. ಶಾಲೆ ಕಟ್ಟಡ ನಿರ್ಮಾಣ ಆಗುವವರೆಗೆ ನಿವೃತ್ತ ಮುಖ್ಯಶಿಕ್ಷಕ ಸುಕ್ರ ಗೊಂಡ ಅವರ ಮನೆಯಲ್ಲೇ ಶಾಲೆ ತರಗತಿ ನಡೆಯಲಿದ್ದು, ಇದಕ್ಕೆ ಅವರೂ ಕೂಡ ಒಪ್ಪಿದ್ದಾರೆ ಎಂದರು. ಭಟ್ಕಳದಲ್ಲಿ ಹಲವು ಮನೆಗಳಿಗೆ ಹಾನಿ

ಭಟ್ಕಳ: ತಾಲೂಕಿನಲ್ಲಿ ಗಾಳಿ ಮಳೆಯ ಆರ್ಭಟ ಮುಂದುವರಿದಿದ್ದು, ಮರ ಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ.ತಾಲೂಕಿನಲ್ಲಿ ಗುರುವಾರ ಬೆಳಗ್ಗೆ ವರೆಗೆ 53 ಮಿಮೀ ಮಳೆಯಾಗಿದ್ದು, ಇಲ್ಲಿಯವರೆಗೆ ಒಟ್ಟೂ 3165.8 ಮಿಮೀ ಮಳೆಯಾಗಿದೆ. ಬೇಂಗ್ರೆಯ ಬಂಗಾರಮಕ್ಕಿಯ ತಿಮ್ಮಪ್ಪ ಕುಪ್ಪ ನಾಯ್ಕ ಅವರ ಮನೆಯ ಚಾವಣಿ, ತೆಂಗಿನಗುಂಡಿಯ ನಾರಾಯಣ ಶನಿಯಾರ ದೇವಡಿಗ ಅವರ ಅಂಗಡಿ, ಬಡ್ಡುಕುಳಿಯ ಸುರೇಶ ನಾಗಪ್ಪ ನಾಯ್ಕ ಇವರ ಮನೆ, ಶಿರಾಲಿ- 1 ಗ್ರಾಮದ ಶನಿಯಾರ ನಾರಾಯಣ ನಾಯ್ಕ, ವೆಂಕಟ್ರಮಣ ಸುಬ್ರಾಯ ಕೆಲ್ಸಿ, ನಾರಾಯಣಿ ವೆಂಕಟ್ರಮಣ ದೇವಡಿಗ, ಬೇಂಗ್ರೆ ಸಣಬಾವಿಯ ನಾರಾಯಣ ಜಟ್ಟ ನಾಯ್ಕ,ದುರ್ಗಮ್ಮ ನಾರಾಯಣ ನಾಯ್ಕ, ತೆಂಗಿನಗುಂಡಿಯ ಅಬ್ದುಲ್ ಹಮೀದ್ ಸುಲೆಮಾನ್ ಅಲ್ಲಾವೋ, ಶಿರಾಲಿ 1 ಗ್ರಾಮದ ಭಾರತಿ ಮಂಜುನಾಥ ದೇವಡಿಗ, ಶಿರಾಲಿ 1 ಗ್ರಾಮದ ಗೋಯ್ದ ಗಣಪಯ್ಯ ದೇವಡಿಗ, ದೇವಿದಾಸ ದೇವಯ್ಯ ದೇವಡಿಗ, ಸದಾನಂದ ಲಕ್ಷ್ಮೀನಾರಾಯಣ ಶಿರಾಲಿ, ಫಿರ್ದೋಸ ನಗರ ಹೆಬಳೆಯ ಮೆಹರುನ್ನಿಸಾ ಅಬುಬಕ್ಕರ ಬಂಗಾಲಿ, ಪಡುಶಿರಾಲಿಯ ಮಾದೇವ ಜಟ್ಟ ನಾಯ್ಕ, ಬೇಂಗ್ರೆಯ ಬಸಟ್ಟಿಹಕ್ಲು ಮಾದೇವ ಸುಕ್ರಯ್ಯ ದೇವಡಿಗ ನಾಯ್ಕ, ವೆಂಕಟಾಪುರದ ಅನಂತ ದುರ್ಗಪ್ಪ ನಾಯ್ಕ, ಬೈಲೂರು ಗ್ರಾಮದ ತೆಂಗಾರ ಮಜರೆಯ ಗೌರಿ ತಿಮ್ಮಪ್ಪ ದೇವಾಡಿಗ,ರತ್ನಾಭಾಯಿ ಮಹಾಬಲೇಶ್ವರ ಶೇಟ್ ಅವರ ಮನೆಯ ಚಾವಣಿಗೆ ಹಾನಿಯಾಗಿದೆ.ಭಾರೀ ಮಳೆ ಗಾಳಿಗೆ ಮಾವಳ್ಳಿ 2 ಗ್ರಾಮ ದ ದಿವಗೇರಿ ರಸ್ತೆ ಮಧ್ಯೆದಲ್ಲಿ ಬಿದ್ದ ಮರವನ್ನು ತೆರವುಗೊಳಿಸಲಾಗಿದೆ. ಮಾವಳ್ಳಿ- 2 ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೀವಗಿರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಹಾನಿಗೀಡಾದ ಪ್ರದೇಶಕ್ಕೆ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರೀ ಮಳೆಗೆ ಜಾಲಿಯಲ್ಲಿ ಸಮುದ್ರ ಕೊರೆತ ಉಂಟಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ