ಹೆಜ್ಜೆಗೆಜ್ಜೆ ಫೌಂಡೇಶನ್ ವತಿಯಿಂದ ‘ಭಕ್ತಿ ಗಾನ ಲಹರಿ’ ರಾಷ್ಟ್ರಮಟ್ಟದ ದಾಸ ಪದ ಸಂಗೀತ ಸ್ಪರ್ಧೆ ಇತ್ತೀಚೆಗೆ ಸಂಪನ್ನಗೊಂಡಿತು.
ಉಡುಪಿ: ಇಲ್ಲಿನ ಹೆಜ್ಜೆಗೆಜ್ಜೆ ಫೌಂಡೇಶನ್ ವತಿಯಿಂದ ನಡೆದ ‘ಭಕ್ತಿ ಗಾನ ಲಹರಿ’ ರಾಷ್ಟ್ರಮಟ್ಟದ ದಾಸ ಪದ ಸಂಗೀತ ಸ್ಪರ್ಧೆಯನ್ನು ಹಿರಿಯ ಸಂಗೀತ ಗುರು, ಕರ್ನಾಟಕ ಕಲಾಶ್ರೀ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ದೀಪ ಬೆಳಗಿಸಿ ಉದ್ಘಾಟಿಸಿದರು. ಹೆಜ್ಜೆಹೆಜ್ಜೆ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣ ಅವರು ಸ್ಪರ್ಧೆಯ ಉದ್ದೇಶಗಳನ್ನು ವಿವರಿಸಿದರು.ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಫಲಕ ಮತ್ತು 10 ಸಾವಿರ ರು. ನಗದನ್ನು ಪುತ್ತೂರಿನ ಅನುಶ್ರೀ ಮಳಿ (ಗುರು ವಿದುಷಿ ಕಾಂಚನ ಶ್ರುತಿರಂಜಿನಿ) ಪಡೆದರು, ಅವರಿಗೆ ಪ್ರಥಮ ಬಹುಮಾನ ಪಡೆದ ಅನುಶ್ರೀ ಮಳಿ ಅವರಿಗೆ ದಾಸಗಾನರತ್ನ ಪ್ರಶಸ್ತಿ ನೀಡಲಾಯಿತು.
ಎರಡನೇ ಬಹುಮಾನ ಫಲಕ ಮತ್ತು 7 ಸಾವಿರ ರು.ಗಳನ್ನು ಬೆಂಗಳೂರಿನ ಎನ್. ಜೆ. ಎಂ. ರಾಘವೇಂದ್ರ ಭಟ್ (ಗುರು ವಿದ್ವಾನ್ ಕೆ. ವಿ. ಕೃಷ್ಣಪ್ರಸಾದ್ , ಬೆಂಗಳೂರು), ಮೂರನೇ ಬಹುಮಾನ ಫಲಕ ಮತ್ತು 5 ಸಾವಿರ ರು.ಗಳನ್ನು ಮಣಿಪಾಲದ ಸ್ವಸ್ತಿ ಎಂ. ಭಟ್ (ಗುರು ವಿದ್ವಾನ್ ಕೆ . ರಾಘವೇಂದ್ರ ಆಚಾರ್ಯ ಮಣಿಪಾಲ, ವಿದುಷಿ ಉಮಾಶಂಕರಿ, ಪರ್ಕಳ) ಪಡೆದರು. ಬೆಂಗಳೂರಿನ ಎಂ. ಜೆ ಶ್ರೀಕುಮಾರ್ ಭಟ್ (ಗುರು ವಿದ್ವಾನ್ ಕೆ. ವಿ ಕೃಷ್ಣಪ್ರಸಾದ್) ಹಾಗೂ ಉಡುಪಿಯ ಪರ್ಜನ್ಯ ಕೆ. ರಾವ್ (ಗುರು ವಿದುಷಿ ಚೇತನಾ ಆಚಾರ್ಯ, ಉಡುಪಿ)ಗೆ ಸಮಾಧಾನಕರ ಬಹುಮಾನ ನೀಡಲಾಯಿತು.ಹೆಜ್ಜೆಗೆಜ್ಜೆಯ ಸಹ ನಿರ್ದೇಶಕಿ ವಿದುಷಿ ದೀಕ್ಷಾ ರಾಮಕೃಷ್ಣ ಅವರ ಸಂಯೋಜನೆಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ 13- 25 ವರ್ಷ ವಯೋಮಿತಿಯ ಒಟ್ಟು 19 ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರತಿಯೋರ್ವರಿಗೂ ಸ್ಮರಣಿಕೆಯೊಂದಿಗೆ ಭಾಗವಹಿಸಿದ ಪ್ರಮಾಣ ಪತ್ರ ನೀಡಲಾಯಿತು.ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಬೊಟ್ಯಾಡಿ ಲೋಕಯ್ಯ, ಯುವಜನತೆ ಸಂಗೀತ ನೃತ್ಯದ ಕಡೆಗೆ ಒಲವು ತೋರಿಸಿದರೆ ಸ್ವಸ್ಥ ಸಮಾಜ ರೂಪುಗೊಳ್ಳುವುದು ಖಚಿತ, ಈ ನಿಟ್ಟಿನಲ್ಲಿ ಹೆಜ್ಜೆಗೆಜ್ಜೆಯ ಕೊಡುಗೆಯನ್ನು ಶ್ಲಾಘನೀಯ ಎಂದರು.
ಈ ಸ್ಪರ್ಧೆಗೆ ವಿದ್ವಾನ್ ಮಧೂರು ಪಿ. ಬಾಲಸುಬ್ರಮಣ್ಯಂ ಹಾಗೂ ವಿದುಷಿ ವಿನುತಾ ಆಚಾರ್ಯ ನಿರ್ಣಾಯಕರಾಗಿದ್ದರು. ಸಂಸ್ಥೆಯ ನಿರ್ವಾಹಕ ಡಾ. ರಾಮಕೃಷ್ಣ ಹೆಗಡೆ ವಂದಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ, ವಿದುಷಿ ಶ್ರಾವ್ಯ , ವಿದುಷಿ ರಂಜನಿ, ವಿದುಷಿ ರಕ್ಷಾ, ವಿದುಷಿ ಕಾವ್ಯ ಮತ್ತು ಕುಮಾರಿ ಸೌಭಾಗ್ಯ ಸಹಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.