ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

KannadaprabhaNewsNetwork | Published : Nov 9, 2023 1:00 AM

ಸಾರಾಂಶ

ಪರೀಕ್ಷೆಗೆ ಬರುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ನೊಣಗಳು ದಾಳಿ ಮಾಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಲ್ಲಿನ ಎಸ್‌ಆರ್‌ಎಂಪಿಪಿ ಪದವಿ ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿಗಳ ಮೇಲೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಹೆಜ್ಜೇನು ದಾಳಿ ಮಾಡಿದ್ದು, ಗಾಯಗೊಂಡ 16 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ಬಿಡುಗಡೆ ಮಾಡಲಾಗಿದೆ.

ಎಸ್‌ಆರ್‌ಎಂಪಿಪಿ ಕಾಲೇಜಿನ ಭವಾನಿ ಬೂದನೂರು, ಹರ್ಷಿತಾ ನಡುವಿನಹಳ್ಳಿ, ಚೇತನ ಕುರುವತ್ತಿ, ಧನುಷ್‌ ಹಡಗಲಿ ಹಾಗೂ ಕೂಡ್ಲಿಗಿಯ ರಾಘವೇಂದ್ರ ಪ್ಯಾರಾಮೆಡಿಕಲ್‌ ಕಾಲೇಜಿನಿಂದ ಪರೀಕ್ಷೆ ಬರೆಯಲು ಬಂದಿದ್ದ ಕೊಟ್ರೇಶ, ವಿಕಾಸ, ಮಂಜುನಾಥ, ವರಮಹಾಲಕ್ಷ್ಮೀ, ಪ್ರತಿಭಾ ಸೇರಿದಂತೆ ಒಟ್ಟು 16 ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಅಲ್ಲದೇ ಅದೇ ವೇಳೆ ಬೈಕ್‌ನಲ್ಲಿ ಸಾಗುತ್ತಿದ್ದ 4 ಜನರ ಮೇಲೆ ದಾಳಿ ಮಾಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

ಕಾಲೇಜು ಸನಿಹದಲ್ಲೇ ರಸ್ತೆಬದಿಯ ಮರವೊಂದರಲ್ಲಿ ಹೆಜ್ಜೇನು ಹುಟ್ಟು ಇಟ್ಟಿತ್ತು. ಕೆಲ ಕಿಡಿಗೇಡಿಗಳು ಆ ಹೆಜ್ಜೇನಿಗೆ ಕಲ್ಲು ಹೊಡೆದು ಓಡಿ ಹೋಗಿದ್ದಾರೆ. ಅದೇ ವೇಳೆ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಹೋಗುತ್ತಿದ್ದ ವಿದ್ಯಾರ್ಥಿಗಳು ಹಾಗೂ ದಾರಿಹೋಕರ ಮೇಲೆ ಹೆಜ್ಜೇನು ಹುಳುಗಳು ದಾಳಿ ಮಾಡಿವೆ.

ಕೂಡಲೇ ಗಾಯಗೊಂಡ ವಿದ್ಯಾರ್ಥಿಗಳನ್ನು ಎಬಿವಿಪಿ ಸಂಘಟನೆಯ ಕೊಟ್ರೇಶ ಹಾಗೂ ಪದಾಧಿಕಾರಿಗಳು, ಎಸ್‌ಆರ್‌ಎಂಪಿಪಿ ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ಅವರು ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಆರೋಗ್ಯದಲ್ಲಿ ಚೇತರಿಕೆ: ಪರೀಕ್ಷೆಗೆ ಬರುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ನೊಣಗಳು ದಾಳಿ ಮಾಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಭಯ ಪಡುವಂತಹ ಪರಿಸ್ಥಿತಿ ಇಲ್ಲ ಎಂದು ಎಸ್‌ಆರ್‌ಎಂಪಿಪಿ ಪದವಿ ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ತಿಳಿಸಿದರು.

Share this article