ಯಲಬುರ್ಗಾ: ತಾಲೂಕಿನ ಬೇವೂರು ಗ್ರಾಮದಲ್ಲಿ ಪೊಲೀಸ್ ಠಾಣೆ ವತಿಯಿಂದ ಮಂಗಳವಾರ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಓಡಿಸುವವರಿಗೆ ಠಾಣೆಯ ಪಿಎಸ್ಐ ಎಸ್.ಪಿ.ನಾಯ್ಕ ಹಾಗೂ ಸಿಬ್ಬಂದಿಯವರು ಗುಲಾಬಿ ಹೂವು ನೀಡಿ ವಿನೂತನ ಜಾಗೃತಿ ಮೂಡಿಸಿದರು.
ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಸವಾರಿ ಮಾಡುತ್ತಿದ್ದು, ಅಪಘಾತ ಸಂಭವಿಸಿದಾಗ ತಲೆಗೆ ಪೆಟ್ಟು ಬಿದ್ದು ಅನೇಕರು ಪ್ರಾಣ ಕಳೆದುಕೊಂಡ ಉದಾಹರಣೆ ಇವೆ. ಅದನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕರಿಗೆ ಹೆಲ್ಮೆಟ್ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ನಿಮ್ಮನ್ನು ನಂಬಿದ ಕುಟುಂಬದವರ ಸಲುವಾಗಿಯಾದರೂ ಹೆಲ್ಮೆಟ್ ಧರಿಸಬೇಕು. ಎಲ್ಲರೂ ಸಂಚಾರ ನಿಯಮ ಅನುಸರಿಸುವ ಜತೆಗೆ ಕಾನೂನು ನಿಯಮ ಪಾಲಿಸಬೇಕು. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವವರಿಗೆ ದಂಡ ಹಾಕಲಾಗುವುದು ಎಂದರು.
ಈ ಸಂದರ್ಭ ಎಎಸ್‌ಐ ಶರಣಪ್ಪ, ಪೇದೆಗಳಾದ ಶಂಕ್ರಯ್ಯ, ಗವಿಸಿದ್ದಯ್ಯ, ಬಸವರಾಜ ಸೇರಿದಂತೆ ಇತರರು ಇದ್ದರು.