ಕೊಪ್ಪಳದಲ್ಲಿ ಇಂದಿನಿಂದ ಹೆಲ್ಮೆಟ್ ಕಡ್ಡಾಯ

KannadaprabhaNewsNetwork |  
Published : Aug 01, 2024, 12:16 AM IST
31ಕೆಪಿಎಲ್21 ಕೊಪ್ಪಳದಲ್ಲಿ ಹೆಲ್ಮೆಟ್ ಕಡ್ಡಾಯ ಕುರಿತು ಜಾಗೃತಿ ಮೂಡಿಸುತ್ತಿರುವುದು. | Kannada Prabha

ಸಾರಾಂಶ

ಈಗಾಗಲೇ ಸಂಚಾರಿ ನಿಯಮಗಳನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಿರುವ ಪೊಲೀಸ್ ಇಲಾಖೆ ಆ. 1 ರಿಂದ ಹೆಲ್ಮೆಟ್ ಕಡ್ಡಾಯ ಮಾಡಿದೆ. ಅಷ್ಟೇ ಅಲ್ಲ, ನಗರದಲ್ಲಿ 40 ಕಿ.ಮೀ ಗಿಂತ ಅಧಿಕ ವೇಗದಲ್ಲಿ ಸಂಚಾರ ಮಾಡುವಂತೆಯೂ ಇಲ್ಲ!

ಇರುವ ಕಾಯ್ದೆ ಕಟ್ಟುನಿಟ್ಟಿನ ಜಾರಿಗೆ ಮುಂದಾದ ಎಸ್ಪಿ

ಹೆಲ್ಮೆಟ್ ಬಳಕೆಯ ಕುರಿತು ಜಾಗೃತಿ

ನಗರದಲ್ಲಿ 40 ಕಿಮೀ ಗಿಂತ ವೇಗವಾಗಿ ಚಲಿಸುವಂತಿಲ್ಲ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಈಗಾಗಲೇ ಸಂಚಾರಿ ನಿಯಮಗಳನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಿರುವ ಪೊಲೀಸ್ ಇಲಾಖೆ ಆ. 1 ರಿಂದ ಹೆಲ್ಮೆಟ್ ಕಡ್ಡಾಯ ಮಾಡಿದೆ. ಅಷ್ಟೇ ಅಲ್ಲ, ನಗರದಲ್ಲಿ 40 ಕಿ.ಮೀ ಗಿಂತ ಅಧಿಕ ವೇಗದಲ್ಲಿ ಸಂಚಾರ ಮಾಡುವಂತೆಯೂ ಇಲ್ಲ!

ಈ ಕುರಿತು ನಗರದಲ್ಲಿ ಕಳೆದೊಂದು ವಾರದಿಂದ ಬಿರುಸಿನ ಪ್ರಚಾರ ಮಾಡಲಾಗುತ್ತಿದೆ. ಆಟೋದಲ್ಲಿ ಮೈಕ್ ಹಾಕಿಕೊಂಡು ನಗರದಲ್ಲಿ ನಿತ್ಯವೂ ಹತ್ತಾರು ಬಾರಿ ಸುತ್ತಾಡಿ, ಜಾಗೃತಿ ಮೂಡಿಸಲಾಗುತ್ತಿದೆ.

ಈಗಾಗಲೇ ಹೆಲ್ಮೆಟ್ ಕಡ್ಡಾಯ ಇದ್ದರೂ ನಗರದಲ್ಲಿ ಅದು ಕಟ್ಟುನಿಟ್ಟಾಗಿ ಜಾರಿಯಾಗಿರಲಿಲ್ಲ. ಆದರೆ, ಈಗ ನೂತನ ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಈ ಕಾರ್ಯಕ್ಕೆ ಚುರುಕು ಮೂಡಿಸಿದ್ದಾರೆ. ಅಷ್ಟೇ ಅಲ್ಲ, ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ತಪ್ಪಿಸಲು ಸಂಚಾರಿ ನಿಯಮ ಜಾರಿ ಮಾಡಿದ್ದಾರೆ. ನಿಯಮಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಆದೇಶ ಮಾಡಲಾಗಿದೆ.

ಸಿಗ್ನಲ್ ಕಟ್ಟುನಿಟ್ಟು:

ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿರುವ ಪೊಲೀಸ್ ಇಲಾಖೆ ಈಗಾಗಲೇ ಸಿಗ್ನಲ್ ಬಳಕೆಯ ಕುರಿತು ಸಹ ಜಾಗೃತಿ ಮೂಡಿಸಿದೆ. ನಗರದಲ್ಲಿ ಸಿಗ್ನಲ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ. ನಗರದ ಅಶೋಕ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಹಲವು ಕಡೆ ಇರುವ ಸಿಗ್ನಲ್‌ಗಳಿಗೆ ಜೀವ ತುಂಬಲಾಗಿದೆ. ದುರಸ್ತಿ ಮಾಡಿಸಿ, ಸರಿಯಾಗಿ ನಿರ್ವಹಣೆ ಮಾಡಲಾಗುತ್ತದೆ.

ಸಿಗ್ನಲ್ ಲೈಟ್ ಗಳ ಮೂಲಕ ಮಾತ್ರ ಆಪರೇಟ್ ಮಾಡದೆ, ಸಿಬ್ಬಂದಿಯೂ ಸಹ ಜಾಗೃತಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಕಟ್ಟುನಿಟ್ಟಾಗಿ ಕೆಲವೇ ಗಂಟೆಗಳು ಕಾರ್ಯನಿರ್ವಹಿಸುವ ಸಿಬ್ಬಂದಿ ಸಿಗ್ನಲ್‌ ಜಂಪ್ ಮಾಡುವವರ ಮೇಲೆ ಅಷ್ಟಾಗಿ ಬಿಗಿ ಕ್ರಮ ಆಗುತ್ತಿಲ್ಲ ಎನ್ನುವುದು ನಾಗರಿಕರ ಆಕ್ರೋಶ. ಸರಿಯಾಗಿ ಕೇಸ್ ಜಡಿದರೆ ಸಿಗ್ನಲ್ ಜಂಪ್ ಮಾಡುವ ಭೂಪರು ಹತೋಟಿಗೆ ಬರುತ್ತಾರೆ ಎನ್ನುತ್ತಾರೆ.

ಕೇಸ್ ಮೇಲೆ ಕೇಸ್:

ನಾಗರಿಕರ ಆಕ್ರೋಶದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಈಗ ಸ್ವಯಂ ಚಾಲಿತ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದೆ. ಸಿಗ್ನಲ್ ಜಂಪ್ ಮಾಡುವವರ ವಿರುದ್ಧ ತನ್ನಿಂದ ತಾನೆ ನೋಟಿಸ್ ಜಾರಿ ಮಾಡುವ ವ್ಯವಸ್ಥೆಯೂ ಜಾರಿ ಮಾಡಲು ಪೊಲೀಸ್ ಇಲಾಖೆ ಮುಂದಾಗಿದ್ದು, ಈ ದಿಸೆಯಲ್ಲಿ ತಯಾರಿ ನಡೆಯುತ್ತಿದೆ. ಪುಟ್‌ಪಾತ್ ಸಮಸ್ಯೆ:

ನಗರದಲ್ಲಿ ಪುಟ್‌ಪಾತ್ ತೆರವು ಮಾಡುವ ದಿಸೆಯಲ್ಲಿಯೂ ಕ್ರಮವಾಗಬೇಕಾಗಿದೆ. ಬಹುತೇಕ ಪುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳು ರಸ್ತೆಯಲ್ಲಿಯೇ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದುವೇ ಸಂಚಾರ ದಟ್ಟಣೆಗೆ ಕಾರಣ ಮತ್ತು ಅಪಘಾತಕ್ಕೂ ದಾರಿಯಾಗುತ್ತಿದೆ. ಈ ದಿಸೆಯಲ್ಲಿ ಮುತುವರ್ಜಿ ವಹಿಸಬೇಕಾಗಿದೆ. ಇದಕ್ಕೆ ನಗರಸಭೆಯೂ ಸಾಥ್ ನೀಡಬೇಕಾಗಿದೆ.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ