ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮೈಸೂರು, ದೆಹಲಿ, ರಾಜಸ್ಥಾನ, ಬಿಹಾರ ಮೂಲದ ವ್ಯಾಪಾರಿಗಳು ಹೆಲ್ಮೆಟ್‌ಗಳನ್ನು ಇಟ್ಟುಕೊಂಡು ವ್ಯಾಪಾರಕ್ಕಿಳಿದಿದ್ದಾರೆ. ಆಕರ್ಷಕವಾದ ಬಣ್ಣಗಳ ಹೆಲ್ಮೆಟ್‌ಗಳನ್ನು 100 ರಿಂದ 500 ರುಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇವುಗಳು ನೋಡಲು ಸುಂದರವಾಗಿದ್ದು, ಹಿಂಬದಿಯಲ್ಲಿ ಐಎಸ್‌ಐ ಮಾರ್ಕ್ ಸಹ ಇದೆ. ಆದರೆ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿವೆ.
ಇಂತಹ ಕಡಿಮೆ ಬೆಲೆಯ ಹೆಲ್ಮೆಟ್‌ಗಳನ್ನು ಧರಿಸುವುದು ಸುರಕ್ಷಿತವಲ್ಲ. ಒಮ್ಮೆ ಗುಣಮಟ್ಟದ ಜೀವವುಳಿಸುವ ಗಟ್ಟಿಮುಟ್ಟಾದ ಹೆಲ್ಮೆಟ್ ಧರಿಸುವುದು ಉತ್ತಮ ಎಂಬುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯ. ಹೆಲ್ಮಟ್ ಧರಿಸದ ಕಾರಣ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ನಡೆದಿರುವ ರಸ್ತೆ ಅಪಘಾತಗಳಲ್ಲಿ ತಲೆಗೆ ಪೆಟ್ಟಾಗಿ 350 ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಹಾಗೂ ಸುಪ್ರಿಂ ಕೋರ್ಟ್‌ನ ಆದೇಶದ ಮೇರೆಗೆ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿ ಮಾಡಿದೆ. ಆಧರೆ ಕೇವಲ ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಸವಾರರು ಕಡಿಮೆ ಬೆಲೆಗೆ ಕಳಪೆ ಗುಣಮಟ್ಟದ ಹೆಲ್ಮೆಟ್ ಖರೀದಿಸುತ್ತಿರುವುದು ಸರಿಯಲ್ಲ. ಹೆಲ್ಮೆಟ್ ಜಾಗೃತಿ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿರುವುದು ಸುಳ್ಳಲ್ಲ. ಕಾನೂನು ಪ್ರಕಾರ ಪೊಲೀಸರು ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ಹಿಡಿದು ಮೊದಲಿಗೆ 500 ರೂ ದಂಡ ಹಾಕುತ್ತಿದ್ದಾರೆ. ಎರಡನೇ ಬಾರಿ ಸಿಕ್ಕಿಬಿದ್ದರೆ 1000 ರುಪಾಯಿ ದಂಡ, ಮೂರನೇ ಬಾರಿ ಮುಂದುವರೆದರೆ ಡಿಎಲ್ ರದ್ದು ಮಾಡಲು ಮುಂದಾಗಿದ್ದಾರೆ.ಅಪ್ರಾಪ್ತರಿಗೆ ದ್ವಿಚಕ್ರವಾಹನಗಳನ್ನು ಓಡಿಸಲು ಅವಕಾಶ ನೀಡದಂತೆ ಪೋಷಕರಿಗೆ ಪೊಲೀಸ್ ಇಲಾಖೆ ಸೂಚಿಸಿದೆ. ಒಂದು ವೇಳೆ ಅಪ್ರಾಪ್ತರು ಸಿಕ್ಕಿಬಿದ್ದರೆ ಪೋಷಕರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.